ಸನ್ಯಾಸಿಗಳನ್ನು ನಮ್ಮ ಸಮಾಜ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತದೆ.

27GDG05B
Published on
ಗದಗ 
ಸನ್ಯಾಸಿಗಳನ್ನು ನಮ್ಮ ಸಮಾಜ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತದೆ. ಈ ವಿಷಯದಲ್ಲಿ ನೂತನ ಸ್ವಾಮಿಗಳು ಗಮನ ಕೊಡಬೇಕು, ಆದರ್ಶ ಶ್ರೀಗಳಾಗಿ ಗದಗ ಪರಿಸರದಲ್ಲಿ ಭಕ್ತರಿಗೆ ಆಧ್ಯಾತ್ಮಿಕ ವ್ಯವಸ್ಥೆಯನ್ನು ಮತ್ತಷ್ಟು ಇಂಬುಗೊಳಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಮಂಗಳವಾರ ಗದಗ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಶಿವಪ್ರಿಯಾನಂದ ಸ್ವಾಮಿಗಳವರು ಸನ್ಯಾಸ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪುರಪ್ರವೇಶ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸನ್ಯಾಸ ಸ್ವೀಕಾರದ ಮಾಡಿದ ನಂತರ ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸಿದ್ದೀರಿ, ನಿಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ನೀವು ಎಚ್ಚರಿಕೆಯಿಂದ ನಿಮ್ಮ ಪ್ರಾರಂಭದ ದಿನಗಳನ್ನು ಕಳೆಯಬೇಕಿದೆ. ಪ್ರತಿ ಹಂತದಲ್ಲಿಯೂ ಜಾಗರೂಕರಾಗಿರಬೇಕು. ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವಾರು ಶ್ರೀಗಳು ಬಾಳಿ ಬದುಕಿದ್ದು ಈ ನೆಲವನ್ನು ಸಾಕಷ್ಟು ಶ್ರೀಮಂತಗೊಳಿಸಿದ್ದಾರೆ, ಅವರೆಲ್ಲಾ ನಿಮಗೆ ಮಾರ್ಗದರ್ಶಕರಾಗಿದ್ದಾರೆ.
ನೀವು ಆಧ್ಯಾತ್ಮ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮತ್ತು ವಿದ್ವತ್ ಪೂರ್ಣವಾದ ಮಾತುಗಳ ಮೂಲಕ ಸಮಾಜದಲ್ಲಿನ ಜನರ ಮನಸ್ಸಿನಲ್ಲಿ ಬೆಳಕು ಚೆಲ್ಲಬೇಕು, ಆ ಮೂಲಕ ನೀವು ಕೂಡಾ ಬೆಳೆಯಬೇಕು. ನೀವು ಎಷ್ಟು ಎತ್ತರಕ್ಕೆ ಬೆಳೆಯುತ್ತೀರಿ ಅಷ್ಟು ಎತ್ತರಕ್ಕೆ ನಿಮ್ಮ ಗುರುಗಳನ್ನು ಬೆಳೆಸುತ್ತೀರಿ.
ಬ್ರಹ್ಮಚರ್ಯ‌ ಆಚರಣೆ ಮಾಡವುದು ಅತ್ಯಂತ ಕಠಿಣದ ಮತ್ತು ಸವಾಲಿನ ಕೆಲಸವಾಗಿದೆ ಅದನ್ನು ನೀವು ಪಾಲನೆ ಮಾಡಲು ಮುಂದಾಗಿರುವುದು ಹೊಂದ ಹೊಸ ಆಧ್ಯಾತ್ಮದ ಬೆಳಕನ್ನು ಈ ಭಾಗದ ಜನರು ಪಡೆದಂತಾಗಿದೆ. ಗದಗ ಭಾಗದಲ್ಲಿ ಆಧ್ಯಾತ್ಮಿಕ ಕ್ಷೇತ್ರ ಮತ್ತಷ್ಟು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗಲಿದೆ.
ಸನ್ಯಾಸಿಗಳಾದವರು ಆಸ್ತಿ, ಅಂತಸ್ತು, ದೊಡ್ಡ ಮಠ ಹೀಗೆ ಯಾವೂದರ ಬಗ್ಗೆಯೂ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಳ್ಳಬಾರದು, ಕೇವಲ ಧರ್ಮೋಪದೇಶ ಮಾಡಬೇಕು ಆ ಮೂಲಕ ಸಮಾಜವನ್ನು ಶ್ರೀಮಂತಗೊಳಿಸಬೇಕು. ಆ ಕಾರ್ಯವನ್ನು ನೂತನ ಶ್ರೀಗಳು ಮುಂದುವರಿಸಿಕೊಂಡು ಹೋಗಲಿ ಎಂದು ಎಂದು ಆಶಯ ವ್ಯಕ್ತ ಪಡಿಸಿದರು.
ತೋಂಟದಾರ್ಯ ಮಠದ ಡಾ.ಸಿದ್ದರಾಮ ಶ್ರೀಗಳು, ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ಮಾತನಾಡಿ ತ್ಯಾಗ, ವೈರಾಗ್ಯ ಬರಬೇಕಾದರೆ ಪೂರ್ವ ಜನ್ಮದ ಪುಣ್ಯವಿರಬೇಕು ಎಂದರು. ನಿರ್ಭಯಾನಂದ ಶ್ರೀಗಳು, ಸುಬೇದಾನಂದಜಿ, ಪ್ರಕಾಶನಂದಜಿ ಶ್ರೀಗಳೇ, ಮಾಜಿ ಸಚಿವ ಬಿ.ಆರ್.ಯಾವಗಲ್ಲ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ಗಡ್ಡದೇವರಮಠ, ರಾಮಣ್ಣ ಲಮಾಣಿ, ಅಕ್ಬರ್ ಸಾಬ ಬವರ್ಚಿ, ಪ್ರಭಣ್ಣ ಹುಣಸಿಕಟ್ಟಿ, ಶ್ರೀನಿವಾಸ ಹುಯಿಲಗೋಳ, ಕೃಷ್ಣಾ ಪರಾಪೂರ, ಅಶೋಕ ಮಂದಾಲಿ, ಬಿ.ಬಿ.ಅಸೂಟಿ, ರಾಮಣ್ಣ ಫಲದೊಡ್ಡಿ, ಪ್ಯಾರಾಅಲಿ ನೂರಾನಿ, ಫಾರುಕ್ ಹುಬ್ಬಳ್ಳಿ, ಅಪ್ಪಣ್ಣ ಇನಾಮತಿ ಮುಂತಾದವರು ಹಾಜರಿದ್ದರು. ಸ್ವಾಗತ ಸಮಿತಿಯ ಡಿ.ಆರ್.ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು‌. ಜೆ.ಕೆ.ಜಮಾದಾರ ನಿರೂಪಿಸಿದರು. ಶ್ರೀಕಾಂತ ಹೂಲಿ ಪ್ರಾರ್ಥಿಸಿದರು.
ಕೋಟ್
ಒಬ್ಬ ವ್ಯಕ್ತಿ ಸನ್ಯಾಸಿ ಆಗುವುದರಿಂದ ಸಮಾಜಕ್ಕೆ ಏನು ಉಪಯೋಗವಾಗುತ್ತದೆ ಎನ್ನುವುದರ ಬಗ್ಗೆ ಸಮಾಜ ತಿಳಿದುಕೊಳ್ಳಬೇಕು. ಅದರಿಂದ ಸಾಕಷ್ಟು ಅನುಕೂಲಗಳಿದ್ದು, ಸಧ್ಯ ನಾವು ನೀವೆಲ್ಲಾ ಓದಿರುವ, ಒದುತ್ತಿರುವ ಇತಿಹಾಸ ಪಾಶ್ಚಾತ್ಯ ಬರೆದಿರುವುದಾಗಿ, ಅವರು ಹೇಳುವ ಇತಿಹಾಸ ಮತ್ತು ವಿಜ್ಞಾನ ಪೂರ್ಣ ಸತ್ಯವಲ್ಲ, ಅಲ್ಲಿಂದಲೇ ನಮ್ಮ ಪತನ ಪ್ರಾರಂಭವಾಗಿದೆ. ನಾವು ತಪ್ಪು ತಪ್ಪು ಇತಿಹಾಸ ಓದುತ್ತಿದ್ದೇವೆ.
..ನಿರ್ಭಯಾನಂದ‌ ಸರಸ್ವತಿ ಶ್ರೀಗಳು.
ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ
ಕೋಟ್.
ಸನ್ಯಾಸಿ ಮೇಲೆ ಸರ್ವರ ಕಣ್ಣು ಎನ್ನುವ ಗಾದೆ ಮಾತು ಗ್ರಾಮೀಣ ಭಾಗದಲ್ಲಿ ಇಂದಿಗೂ ಇದೆ, ಕಾವಿ ಹಾಕಿದವರೆಲ್ಲಾ ಸನ್ಯಾಸಿಗಳಲ್ಲ, ನಿಂತ್ರ ನೀರು ಕೆಡತ್, ಕುಂತ್ರ ಸ್ವಾಮಿ ಕೆಡುತ್ತಾನೆ ಎನ್ನುವ ಗುರುಗಳಾದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಮಾತು ಅಕ್ಷರಶಹ ಸತ್ಯವಾಗಿದ್ದು. ಸ್ವಾಮಿಗಳಾದವರು ನಿರಂತರ ಓಡಾಟ ಮಾಡುತ್ತಾ ಸಮಾಜ ಕಟ್ಟುವ ಕೆಲಸ ಮಾಡಬೇಕು.
..ಡಾ.ಸಿದ್ಧರಾಮ ಶ್ರೀಗಳು, ತೋಂಟದಾರ್ಯ ಮಠ ಗದಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net