ವೈಮನಸ್ಸನ್ನು ಕೊನೆಗೊಳಿಸಿ ಒಗ್ಗಟ್ಟಿಗೆ ಶಕ್ತಿ ಪ್ರದರ್ಶನ: ವಿಜಯೇಂದ್ರ

images (8)
Published on

ಗದಗ: "ಯುದ್ಧ ಆರಂಭವಾಗಿದೆ, ಈ ಬಾರಿ ತಪ್ಪು ಮರುಕಳಿಸುವ ಪ್ರಶ್ನೆಯೇ ಇಲ್ಲ" ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಂಗಳವಾರ ಗುಡುಗಿದ್ದಾರೆ.

ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ ಸೇರಿ ರಾಜ್ಯದ ಹಲವಾರು ಜಿಲ್ಲೆಗಳ ಜಿಲ್ಲಾ ನಾಯಕರ ನಡುವೆ ಹೆಚ್ಚುತ್ತಿರುವ ವೈಮನಸ್ಸಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ಬಿಜೆಪಿ ಬಹುಮತಕ್ಕೆ ಸಾಧ್ಯತೆ ಇದೆ, ಆದರೆ ಮತದಾರರಲ್ಲಿ ವಿಶ್ವಾಸ ಮೂಡಿಸುವ ಮೊದಲು ಪಕ್ಷದ ಕಾರ್ಯಕರ್ತರಿಗೆ ನಮ್ಮ ಮೇಲಿನ ನಂಬಿಕೆ ದೃಢಪಡಿಸುವಂತಾಗಬೇಕು" ಎಂದಿದ್ದಾರೆ.

*ನಾನೇನು ಹೆಬ್ಬಟ್ಟು ಅಲ್ಲ: ವಿಜಯೇಂದ್ರ:*

ರಾಜ್ಯಾದ್ಯಂತ ಜಿಲ್ಲಾ ನಾಯಕರ ವೈಮನಸ್ಸು ನಿವಾರಣೆಗೆ ನಾನೇ ಸ್ವತಃ ಅಖಾಡಕ್ಕೆ ಇಳಿಯುತ್ತೇನೆ ಎಂದು ಅವರು ಹೇಳಿದರು. "ಸಂಘಟನೆಯ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ, ನಮ್ಮ ನಾಯಕರು ಸಮನ್ವಯ ಹೊಂದಿ ಪಕ್ಷವನ್ನು ಬಲಪಡಿಸಬೇಕು. ನಾನೇನು ಹೆಬ್ಬಟ್ಟು ಅಲ್ಲ, ಕಳೆದ ಒಂದೂವರೆ ವರ್ಷದಿಂದ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ 1998 ರಿಂದ ಯಡಿಯೂರಪ್ಪ ಅವರೊಂದಿಗೆ ರಾಜ್ಯವನ್ನು ಸುತ್ತಿಕೊಂಡು ಜನತೆಯ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ" ಎಂದರು.

*ಅಭ್ಯರ್ಥಿ ಘೋಷಣೆಗೆ ಸಿದ್ಧತೆ:* ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಅವರು, "ಆರು ತಿಂಗಳು ಮೊದಲೇ ಅಭ್ಯರ್ಥಿಗಳನ್ನು ಘೋಷಿಸುವ ತೀರ್ಮಾನ ಮಾಡಿದ್ದೇವೆ. ಇದು ಸಂಘಟನಾತ್ಮಕ ಶಕ್ತಿಯನ್ನು ಇನ್ನಷ್ಟು ಗಟ್ಟಿಮಾಡಲಿದೆ" ಎಂದು ಹೇಳಿದರು.

*ಅನುದಾನದ ಬೇಡಿಕೆ ಮೇಲೆ ಕಾಂಗ್ರೆಸ್ ತೀವ್ರ ಟೀಕೆ*

ಬಜೆಟ್ ಮುನ್ನ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಕ್ಷೇತ್ರ ಅನುದಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗ, ಅವರು ತುಚ್ಯವಾಗಿ ಮಾತನಾಡಿ ಕಳಿಸಿದ್ದ ಕುರಿತು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. "ಯಡಿಯೂರಪ್ಪ ಅವರ ಸಿಎಂ ಅವಧಿಯಲ್ಲಿ ವಿರೋಧ ಪಕ್ಷದ ಶಾಸಕರಿಗೂ ಅನುದಾನ ನೀಡಿದ ಉದಾರತೆ ಇತ್ತು. ಆದರೆ ಈಗ ಆ ದಯೆ ಇಲ್ಲ" ಎಂದು ದೂರಿದರು.

*ಜಾತಿಗಣತಿ: ರಾಜಕೀಯ ದಾಳಿ*

"ಕಾಂಗ್ರೆಸ್ ಜಾತಿಗಣತಿ ವರದಿಯನ್ನು ಜನಾಕ್ರೋಶ ಯಾತ್ರೆಯ ದಿಕ್ಕು ತಪ್ಪಿಸಲು ಉಪಯೋಗಿಸುತ್ತಿದೆ" ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು. "ಜಾತಿಗಣತಿ ಅನುಷ್ಠಾನ ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತು. ಈ ವಿಷಯವನ್ನು ಹಿಂದಿನ ಅವಧಿಯಲ್ಲಿ ಮಂಡಿಸಬಹುದಿತ್ತು. ಆದರೆ, ಇನ್ನೊಬ್ಬರು ಸಿಎಂ ಆಗಬಾರದು ಎಂಬ ಕನಸಿನ ಭಾಗವಾಗಿ ಜನಮನ ಬದಲಾಯಿಸಲು ಈ ವರದಿಯನ್ನು ಈಗ ಬಹಿರಂಗ ಪಡಿಸುತ್ತಿದ್ದಾರೆ" ಎಂದು ಆಕ್ಷೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net