

ಗದಗ: ನಮ್ಮ ದೇಶವು ಸಂಸ್ಕೃತಿಯ ನೆಲೆಬೀಡು. ನಮ್ಮ ಸಂಸ್ಕೃತಿ ಪರಂಪರೆಗಳು ನಮ್ಮ ನೆಲದ ವೈಶಿಷ್ಠö್ಯಗಳು ಹಿರಿಯರು, ಗುರುಗಳು ನಮ್ಮ ಆಸ್ತಿ. ಅವರ ಮಾರ್ಗದರ್ಶನದಲ್ಲಿ ಮಕ್ಕಳು ಮುನ್ನಡೆದು ಬದುಕನ್ನು ಸುಂದರಮಯವಾಗಿ ರೂಪಿಸಿಕೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ಗದಗ ಜಿಲ್ಲಾ ಶರಣೆ ಶ್ರೀ ಅಕ್ಕಮಹಾದೇವಿಯ ಕದಳಿಶ್ರೀ ಮಹಿಳಾ ವೇದಿಕೆಯಿಂದ ಶ್ರಾವಣ ಮಾಸದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಜರುಗುವ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮವನ್ನು ಗದುಗಿನ ಕೆ.ಎಚ್.ಪಾಟೀಲ ಬಡಾವಣೆಯ ಸರ್ಕಾರಿ ಶಾಲೆ ನಂ. 13ರಲ್ಲಿ ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳು ವಾಸ್ತವತೆಯನ್ನು ಅರಿತವರು. ಜೀವನವನ್ನು ತಿಳಿದವರು. ನೈಜತೆ, ಅರಿವು, ಉತ್ತಮ ಮಾರ್ಗದರ್ಶನದೊಂದಿಗೆ ಮಕ್ಕಳು ಕಲಿಕೆಯಲ್ಲಿ ತೊಡಗಬೇಕು. ಗದುಗಿನ ವಿಜಯಾ ಬುಕ್ ಡಿಪೋದ ಮಾಲೀಕರಾದ ದಿ. ಗಿರಿಜಮ್ಮ ಹಿರೇಮಠ ಇವರು ಪ್ರತಿ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಹಿ ಭೋಜನದ ಜೋತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯವನ್ನು ಕದಳಿಶ್ರೀ ವೇದಿಕೆಯ ಮುಖಾಂತರ ಹಮ್ಮಿಕೊಳ್ಳುತ್ತಿದ್ದರು. ಅದನ್ನು ಮುಂದುವರಿಸಿ ಅವರ ಮೊಮ್ಮಗ ವಿಜಯಕುಮಾರ ಹಿರೇಮಠ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವುದು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನವಾಗಿದೆ ಎಂದರು.
ಕಾರ್ಯಕ್ರಮದ ಪ್ರಾಯೋಜಕರಾದ ಪುಸ್ತಕ ಪ್ರಕಾಶಕರಾದ ವಿಜಯಕುಮಾರ ಹಿರೇಮಠ ಮಾತನಾಡಿ ಶಿಕ್ಷಣವು ಬಾಳನ್ನು ಬೆಳಗಿಸಬಲ್ಲ ದೀವಿಗೆಯಾಗಿದೆ. ನಮ್ಮ ಬದುಕು ಸುಂದರವಾಗಬೇಕಾದರೆ ಹಿರಿಯರ ಮಾರ್ಗದರ್ಶನ ಅವಶ್ಯ. ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈ ಜೋಡಿಸುವ ಕಾರ್ಯ ಕದಳಿಶ್ರೀ ವೇದಿಕೆಯಿಂದ ನಿರಂತರ ನಡೆದು ಬಂದಿದ್ದು ಇದಕ್ಕೆ ನಮ್ಮ ಸಹಕಾರವೂ ಇದೆ ಎಂದರು.
ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ ಶರಣ ಸಂಕುಲದ ಶರಣೆ ಶ್ರೀ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕಳೆದ 16 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮವನ್ನು ಏರ್ಪಡಿಸಿ ಶಾಲಾ ಮಕ್ಕಳಿಗೆ ದಾನಿಗಳಿಂದ ಸಿಹಿ ಭೋಜನ ಜೊತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ, ಅಂಗವಿಕಲ ಮಕ್ಕಳಿಗೆ ಹೊದಿಕೆ, ಸ್ವೀಟರ್-ಸಾಕ್ಸ್ ಹಾಗೂ ತಾಯಿಯಂದಿರರಿಗೆ ಸೀರೆ ವಿತರಿಸಿ ಸನ್ಮಾನಿಸುವ ಕಾರ್ಯವನ್ನು ಮಾಡುತ್ತ ಬಂದಿದ್ದು, ಇದಕ್ಕೆ ದಾನಿಗಳೇ ಮುಖ್ಯ ಆಧಾರವಾಗಿದ್ದಾರೆ ಎಂದರು.
ಶರಣಬಸಪ್ಪ ಗುಡಿಮನಿ, ಶ್ರೀಮತಿ ಸ್ನೇಹಾ ವಿಜಯಕುಮಾರ ಹಿರೇಮಠ ದಂಪತಿಗಳನ್ನು, ವಿಶೇಷ ಚೇತನ ಮಗು ಹಾಗೂ ತಾಯಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಎಸ್.ಹುರಕಡ್ಲಿ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ನಮ್ಮೆಲ್ಲರ ಗುರಿಯಾಗಿದೆ. ಸಂಘಟನೆಗಳು ಶಾಲೆಗಳಿಗೆ ಬಂದು ಮಕ್ಕಳಲ್ಲಿಯ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದಲ್ಲಿ ಸರ್ಕಾರಿ ಶಾಲೆಗಳಿಗೆ ಪುಷ್ಠಿ ದೊರೆಯುವದು ಎಂದರು. ಶ್ರೀಮತಿ ಎಸ್.ಬಿ.ಬೇವಿನಮಟ್ಟಿ ಸ್ವಾಗತಿಸಿದರು. ಜಿ.ಎಂ.ದೇವಗಿರಿ ನಿರೂಪಿಸಿ ವಂದಿಸಿದರು.