ವಿದ್ಯಾದಾನ ಸಮಿತಿಯ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.

IMG-20250816-WA0126
Published on
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆ ಹಾಗೂ ವಿಡಿಎಸ್ ಕನ್ನಡ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಎಲ್ಲಾ ಅತಿಥಿ ಮಹನೀಯರು ಭಗವಾನ್ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ, ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಡಿಎಸ್ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ವಿ. ಹವಾಲ್ದಾರ ರವರು ಮಾತನಾಡಿ ಕೃಷ್ಣ ಜನ್ಮಾಷ್ಟಮಿ ಹಿಂದೂಗಳ ಪವಿತ್ರ ಹಬ್ಬವಾಗಿದೆ. ಇದನ್ನು ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿ ದಿನದಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ತಂದೆ ವಾಸುದೇವ, ತಾಯಿ ದೇವಕಿ ಇವರ ಎಂಟನೇ ಮಗನಾಗಿ ಶ್ರೀಕೃಷ್ಣ ಜನಿಸಿದನು. ಮಥುರಾದಲ್ಲಿ ಸಾಕುತಂದೆ ನಂದ ಮಹಾರಾಜ ಹಾಗೂ ಸಾಕುತಾಯಿ ಯಶೋಧೆ ಇವರ ಆಶ್ರಯದಲ್ಲಿ ಬೆಳೆದನು. ತನ್ನ ಸಹೋದರ ಮಾವ ಕಂಸನ ದುಷ್ಟ ಆಡಳಿತವನ್ನು ಕೊನೆಗಾಣಿಸಲು ಕಂಸನನ್ನು ಕೊಂದು ಶಿಷ್ಟರ ರಕ್ಷಣೆ ಮಾಡಿದನು. ಬಾಲಕೃಷ್ಣನ ಬಾಲಲೀಲೆ ಹಾಗೂ ತುಂಟಾಟಗಳ ಕಥಾಪ್ರಸಂಗಗಳನ್ನು ಮಕ್ಕಳಿಗೆ ತಿಳಿಸಿದರು.
ವಿ.ದಾ.ಸ ಅನುದಾನಿತ ಶಾಲೆಗಳ ಸಿಇಓ ರವರಾದ ಶ್ರೀ ಪಿ. ಎಚ್. ಕಡಿವಾಲ ರವರು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಗೋವುಗಳ ರಕ್ಷಕ, ಗೋಪಾಲಕ ಶ್ರೀ ಕೃಷ್ಣನ ಕುರಿತಾದ ಪುಸ್ತಕಗಳನ್ನು, ಚಿತ್ರಗಳನ್ನು, ಕಥೆಗಳನ್ನು, ಭಗವದ್ಗೀತೆಯ ಶ್ಲೋಕಗಳನ್ನು ಮಕ್ಕಳು ತಿಳಿದುಕೊಂಡು ಸುಸಂಸ್ಕೃತರಾಗಬೇಕು. ಅಷ್ಟೇ ಅಲ್ಲದೆ ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದರ ಮೂಲಕ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಇಂದು ಕೃಷ್ಣ ಜನ್ಮಾಷ್ಟಮಿ ಇದರ ಪ್ರಯುಕ್ತ ಮಕ್ಕಳೆಲ್ಲರೂ ಹೊರಗಿನ ಕುರುಕಲು ಆಹಾರವನ್ನು ಸೇವಿಸುವುದಿಲ್ಲ ಅದರ ಜೊತೆಗೆ ಪ್ರತಿನಿತ್ಯ ಹಸುವಿನ ಒಂದು ಕಪ್ ಹಾಲನ್ನು ಸೇವಿಸುತ್ತೇವೆ ಎಂದು ಸಂಕಲ್ಪ ಮಾಡಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಜೊತೆಗೆ ನಾವೆಲ್ಲರೂ ಗೋವುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದರು.
ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀ ಕೃಷ್ಣನಿಗೆ ಮುರುಳೀಧರ, ಮುಕುಂದ, ಮುರಾರಿ, ಗೋವಿಂದ, ಗೋಪಾಲ, ಜನಾರ್ಧನ, ಅಚ್ಯುತ್, ಗಿರಿಧರ, ಗೋವರ್ಧನ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕೃಷ್ಣ ಪರಮಾತ್ಮನ ಪೂಜೆ, ಪುನಸ್ಕಾರ, ಜಪ ತಪ, ಭಗವದ್ಗೀತೆಯ ಶ್ಲೋಕ ಪಠಿಸುವುದು, ಧ್ಯಾನ ಮಾಡುವುದರ ಮೂಲಕ ಮಕ್ಕಳಿಗೆ ಒಳಿತಾಗುತ್ತದೆ. ನಮ್ಮ ಎರಡು ಶಾಲೆಗಳ ಪ್ರಾಥಮಿಕ ಶಾಲಾ ಮಕ್ಕಳು ಕೃಷ್ಣ ಪರಮಾತ್ಮ, ಮಾತಾ ರಾಧೇ, ಮಾತ ರುಕ್ಮಿಣಿ ದೇವಿಯ ವೇಷ ಭೂಷಣ ತೊಟ್ಟು ಸಾಕ್ಷಾತ್ ರಾಧಾ, ಕೃಷ್ಣ ರವರ ಸ್ವರೂಪಿಯಾಗಿ ಕಾಣುತ್ತಿದ್ದೀರಿ ಎಂದು ಮಕ್ಕಳಿಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರಿದರು.
ಶಾಲೆಯ ನರ್ಸರಿಯಿಂದ ನಾಲ್ಕನೇ ತರಗತಿಯ ಮುದ್ದು ಮಕ್ಕಳು ಕೃಷ್ಣ ಮತ್ತು ಮಾತಾ ರಾಧೇಯ ವೇಷಭೂಷಣಗಳನ್ನು ಧರಿಸಿ, ಸಾಕ್ಷಾತ್ ಕೃಷ್ಣ- ರಾಧೇ ಯರಂತೆ ವೇದಿಕೆ ಮೇಲೆ ಆಗಮಿಸಿ, ಮುದ್ದು ಮಕ್ಕಳು ಮುಗ್ಧತೆಯಿಂದ ವೇದಿಕೆ ಮೇಲೆ ತಮ್ಮ ವೇಷಭೂಷಣವನ್ನು ಪ್ರದರ್ಶಿಸಿ ಮತ್ತು ತೊದಲ ನುಡಿಗಳಲ್ಲಿ ಶ್ಲೋಕಗಳನ್ನು ಪಠಿಸುವುದರ  ಮೂಲಕ ಅತಿಥಿಗಳೆನಲ್ಲ ಆಕರ್ಷಿಸಿ ಕಾರ್ಯಕ್ರಮಕ್ಕೆ ಒಂದು ಮಹತ್ವಪೂರ್ಣ ಮೆರಗನ್ನು ತಂದರು. ಜೊತೆಗೆ ಎರಡು ಶಾಲೆಗಳ ವೇಷಭೂಷಣ ತೊಟ್ಟ  ಮಕ್ಕಳೆಲ್ಲರೂ ಕೃಷ್ಣನ ನೃತ್ಯವನ್ನು ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ರಂಜಿಸಿದರು. ವಿದ್ಯಾರ್ಥಿಗಳಾದ ಕು. ಅಮೃತಾ ತಡಸದ ಹಾಗೂ ಸಂಗಡಿಗರು, ಭಾನುಶ್ರೀ. ಕೆ ಹಾಗೂ ಸಂಗಡಿಗರು, ಗುನ್ ಗುನ್ ರಾಠೋಡ ಹಾಗೂ ಸಂಗಡಿಗರು ಮತ್ತು ಖುಷಿ ವಡ್ಡಟ್ಟಿ ರವರು ಕೃಷ್ಣ ಪರಮಾತ್ಮನ ಹಾಡುಗಳನ್ನು ಹಾಡಿದರು.
ವೇದಿಕೆ ಮೇಲೆ ಅತಿಥಿ ಮಹನೀಯರಾದ ಶ್ರೀ ಪಿ. ಎಚ್. ಕಡಿವಾಲ, ಶ್ರೀ ಎಂ. ವಿ. ಹವಾಲ್ದಾರ, ಶ್ರೀ ಎಂ. ಆರ್. ಡೊಳ್ಳಿನ ಹಾಗೂ ಶ್ರೀ ಅಕ್ಷಯ್. ಜಿ. ರವರು ಉಪಸ್ಥಿತರಿದ್ದರು. ಕು. ತೇಜಸ್ವಿನಿ ಬಗಾಡೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಶ್ರೀಮತಿ ಎಂ. ಎನ್. ಹುಬ್ಬಳ್ಳಿ ನಿರೂಪಿಸಿ ಸ್ವಾಗತಿಸಿದರು. ಶ್ರೀಮತಿ ವೀಣಾ ಹುಬ್ಬಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಎರಡು ಶಾಲೆಗಳ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net