

ವಿಜಯವಾಣಿ ಸುದ್ದಿಜಾಲ ಗದಗ
ಲಿಂ. ಪಂ. ಪಂಚಾರಿ ಗವಾಯಿಗಳು ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಹಾನಗಲ್ ಕುಮಾರೇಶ್ವರ ಶ್ರೀಗಳ ತಪಸ್ಸಿನ ಲವಾಗಿ ಉಭಯ ಶ್ರೀಗಳು ಭುಲೋಕಕ್ಕೆ ಬಂದಿದ್ದಾರೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪಂ. ಪಂಚಾರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಧಮೋರ್ತ್ತೇಜಕ ಮಹಾಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಇಂದಿನ ಯುಗದಲ್ಲಿ ತನಗಿಂತ ತನ್ನ ಶಿಷ್ಯರು ದೊಡ್ಡವರಾಗಬಾರದು ಎಂದು ರಹಸ್ಯವನ್ನು ಕಲಿಸಿ ಕೊಡದ ಹಲವು ಗುರುಗಳು ಇಂದು ಕಾಣುತ್ತಿದ್ದೇವೆ. ಆದರೆ, ತಮ್ಮ ಶಿಷ್ಯರು ತಮಗಿಂತ ಹೆಚ್ಚು ಬೆಳೆಯಲಿ ಎಂದು ಬದುಕಿದವರು ಉಭಯ ಶ್ರೀಗಳು. ವೀರೇಶ್ವರ ಪುಣ್ಯಾಶ್ರಮ ಹಣ ಮಾಡುವ ಸಂಸ್ಥೆಯಲ್ಲ. ಸೇವೆ ಮಾಡುವ ಸಂಸ್ಥೆಯಾಗಿದೆ. ಲೋಕದ ಕಲ್ಯಾಣಕ್ಕಾಗಿ ಸೇವಾ ಕಾರ್ಯ ಮಾಡುವ ಸಂಸ್ಥೆಯಾಗಿದೆ. ಈ ಪುಣ್ಯಾಶ್ರಮದಿಂದ ಸಂಗೀತಗಾರರು, ಕಲಾವಿದರು, ಸಾಹಿತಿಗಳು, ನಾಟಕಕಾರರು, ಕೀರ್ತನಕಾರರು, ಪ್ರವಚನಕಾರುಗಳಾಗಿ ಸಾವಿರಾರು ಕಲಾವಿದರು ದೇಶದ ತುಂಬೆಲ್ಲ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಪುಣ್ಯಾಶ್ರಮ ಕೀತಿರ್ಯನ್ನು ಹೆಚ್ಚಿಸಿದ್ದಾರೆ. ಪರಿಶುದ್ದ ಮನಸ್ಸಿನಿಂದ ಕಟ್ಟಿದ ಪುಣ್ಯಾಶ್ರಮ ಉತ್ತರೋತ್ತರವಾಗಿ ಬೆಳೆಯಲಿ ಎಂದರು.
ಉಪ್ಪಿನ ಬೆಟಗೇರಿಯ ಮೂರುಸಾವಿರಮಠದ ಕುಮಾರ ವಿರುಪಾ ಶ್ರೀಗಳು ಮಾತನಾಡಿ, ಪುಟ್ಟರಾಜ ಗವಾಯಿಗಳನ್ನು ನೋಡಿದರೆ ಪರಮಾತ್ಮನನ್ನು ನೋಡಿದಂತೆ. ಅವರ ಆಶೀರ್ವಾದ ಪಡೆದವರ ಜನ್ಮ ಸಾರ್ಥಕವಾದಂತೆ ಎಂದು ಹೇಳಿದರು.
ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಬಳಗಾನೂರ ಮಠದ ಶಿವಶಾಂತವೀರ ಶರಣರು, ಅಡ್ನೂರ ಬ್ರಹನ್ಮಠದ ಅಭಿನವ ಪಂಚಾರ ಶಿವಾಚಾರ್ಯರು, ಮುದ್ದೇಬಿಹಾಳದ ಡಾ. ಲಾಲಲಿಂಗೇಶ್ವರ ಶರಣರು, ಅಜಲಪೂರಿನ ವಿರುಪಾ ದೇವರು, ಲಿಂಗಸೂರಿನ ಶಿವಶರಣೆ ನಂದೀಶ್ವರಿ ಅಮ್ಮನವರು ಉಪಸ್ಥಿತರಿದ್ದರು. ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾರ ಗವಾಯಿಗಳವರ ಸಂಗೀತ ಪಾಠಶಾಲೆಯ ವಿಧ್ಯಾಥಿರ್ಗಳಿಂದ ಪ್ರಾರ್ಥನೆ ಜರುಗಿತು. ಲ್ಲಾಧಿಕಾರಿ ಸಿ. ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ, ಡಿಡಿಪಿಐ ಆರ್.ಎಸ್. ಬುರಡಿ, ಡಾ. ಪುರುಶೋತ್ತಮಗೌಡ್ರ, ದತ್ತಪ್ಪ ಸಾಗನೂರ, ಡಾ. ಸಂಗಮೇಶ ಕೊಳ್ಳಿ, ಎಂ. ಕೆ. ಪಟ್ಟಣಶೆಟ್ಟಿ, ಬಾಬುರಾವ್ ಕೋಬಾಳ, ಬಸಯ್ಯ ಗುತ್ತೆದಾರ, ನಾಡಗೌಡ್ರ ಚನ್ನೂರ ಇದ್ದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮಣ್ಣ ನಸಬಿ ಅವರಿಗೆ 2025 ನೇ ಸಾಲಿನ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ ಹಾಗೂ ಪ್ರವಚನ ಕ್ಷೇತ್ರದಲ್ಲಿ ಜಗಳೂರಿನ ವಿರೂಪಾಯ್ಯ ಶಾಸ್ತ್ರಿ ಹಿರೇಮಠ, ಗಾಯನ ಕ್ಷೇತ್ರದಲ್ಲಿ ಬೆಂಗಳೂರಿನ ರಾಜು ಎಮ್ಮಿಗನೂರ, ಭೂದಾನ ಕ್ಷೇತ್ರದಲ್ಲಿ ಪ್ರಕಾಶ ಬಸರಿಗಿಡದ ಅವರಿಗೆ ಕುಮಾರ ಶ್ರೀಪ್ರಶಸ್ತಿ ನೀಡಿ ಗೌರವಿಸಲಾಯಿತು.