

ವಿಜಯವಾಣಿ ಸುದ್ದಿಜಾಲ ಗದಗ
ಬಸವಣ್ಣನವರು ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯ ರಹಿತ, ಸಮಸಮಾಜದ ಕನಸು ಕಂಡಿದ್ದರು. ಈ ಕಾರಣಕ್ಕಾಗಿಯೇ ಸರ್ವ ಕಾಯಕ ಸಮಾಜದವರನ್ನು ಅನುಭವ ಮಂಟಪಕ್ಕೆ ಕರೆತಂದರು. ಮಂಪಟದಲ್ಲಿ ನಡೆಯುವ ಚರ್ಚೆಗಳು, ಅನುಭಾವಗಳಿಂದ ಅನೇಕ ಶೋಷಿತ ಸಮಾಜದವರೂ ಕೂಡಾ ದೊಡ್ಡ ಶರಣರಾದರು. ಅಂತಹ ಶರಣರಲ್ಲಿ ಹಾಲುಮತದ ವೀರಗೊಲ್ಲಾಳ ಶರಣರೂ ಒಬ್ಬರಾಗಿದ್ದರು ಎಂದು ಗಿರಿಜಕ್ಕ ಧರ್ಮರಡ್ಡಿ ಹೇಳಿದರು.
ನಗರದ ಬಸವದಳದ ಶರಣ ಸಂಗಮ ಕಾರ್ಯಕ್ರಮದಲ್ಲಿ ಗುರುವಾರ ನಡೆದ ವೀರಗೊಲ್ಲಾಳ ಶರಣರ ಜಯಂತಿಯ ನಿಮಿತ್ಯ ಉಪನ್ಯಾಸ ನೀಡಿ ಮಾತನಾಡಿದ ಅವರು, ಕುರುಬ ಸಮಾಜದವರಾದ ವೀರಗೊಲ್ಲಾಳರು ಕುರಿ ಕಾಯುವ ಕಾಯಕ ಮಾಡುತ್ತಿದ್ದರು. ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಢವಲಾರ ಗ್ರಾಮದವರು. ಕುರಿಗಳನ್ನು ಕಾಯುವ ಕಾಯಕ ಮಾಡುತ್ತಿದ್ದ ಗೊಲ್ಲಾಳ ಮುಗ್ಧ ಶಿವಭಕ್ತ. ಆದರೆ ಆತನ ಬದುಕಿನಲ್ಲಿ ಬಂದ ತಿರುವುಗಳು ಆತನನ್ನು ಅನುಭವ ಮಂಟಪಕ್ಕೆ ಕರೆ ತಂದಿತು. ಮುಂದೆ ಅವರು ಬಹುದೊಡ್ಡ ಶರಣರಾದರು ಎಂದರು.
ಈತನ ಧರ್ಮಪತ್ನಿ ರೇಖವ್ವೆ. ಪತಿಯ ಕಾಯಕದಲ್ಲಿ ಪಾಲ್ಗೊಳ್ಳುತ್ತ ಪತಿಯ ಭಕ್ತಿ ಪಥದ ದಾರಿಯಲ್ಲೇ ಸಾಗಿದ ಸತಿಸಾಧ್ವಿಯಾಗಿದ್ದಳು. ಬಸವಾದಿ ಶರಣರ ಅನುಭವ ಮಂಟಪದಲ್ಲಿ ನಡೆಯುವ ಸರ್ವ ಅನುಭಾವ, ಚರ್ಚೆಗಳಲ್ಲಿ ಪಾಲ್ಗೊಂಡು ದಂಪತಿಗಳು ಅಪ್ಪಟ ಶರಣ ಪರಂಪರೆ ಹಿಂಬಾಲಿಸಿದರು. ಗೊಲ್ಲಾಳ ಶರಣರ ಬರಿ 10 ವಚನಗಳು ಮಾತ್ರ ಸಿಕ್ಕಿವೆ. ಅವರ ವಚನಾಂಕಿತ ವೀರಬೀರೇಶ್ವರ ಎಂಬುದಾಗಿದೆ. ಇವರ ವಚನಗಳಲ್ಲಿ ಆಡು, ಕುರಿ, ಹೊತು, ತೋಳ ಮುಂತಾದ ಪ್ರಾಣಿಗಳ ಉಲ್ಲೇಖವಾಗಿವೆ. ಇವರ ಬಗ್ಗೆ ಹರಿಹರ ಮಹಾಕವಿಯ ಲಿಂಗಾರ್ಚನೆ ರಗಳೆ, ತೆಲುಗು ಬಸವ ಪುರಾಣ, ಶಿವತತ್ವ ಚಿಂತಾಮಣಿ ಕಾವ್ಯ ಮತ್ತು ಶಿವಲಿಂಗ ಕವಿಯ ಹಾಡುಗಳಲ್ಲಿ ಗೊಲ್ಲಾಳರ ಶಿವಭಕ್ತಿಯ ವ್ಯಕ್ತಿತ್ವವನ್ನು ಕಾಣುತ್ತೇವೆ. ಜೊತೆಗೆ ಶರಣೆ ಸತ್ಯಕ್ಕನವರು ವಚನವೊಂದರಲ್ಲಿ "ವಿಶ್ವಾಸದಿಂದ ನಂಬಿದರಯ್ಯ ಗೊಲ್ಲಾಳರಾಯನವರು' ಮತ್ತು ಶರಣ ಗಣದಾಸಿ ವೀರಣ್ಣನವರು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಕುರುಬ ಗೊಲ್ಲಾಳ ಶರಣರು ಕಾಯಕ ನಿಷ್ಠೆ, ಶ್ರದ್ಧಾಭಕ್ತಿ, ವಿಶ್ವಾಸ, ನಂಬಿಕೆ, ನಿಶ್ಚಲತೆಯನ್ನು ಮೈಗೂಡಿಸಿಕೊಂಡು ಶರಣರಾಗಿದ್ದರು ಎಂದು ಗಿರಿಜಕ್ಕನವರು ಹೇಳಿದರು.
ಹಾಲುಮತ ಮಹಾಸಭಾ ರಾಜ್ಯಾಧ್ಯ ರುದ್ರಣ್ಣ ಗುಳಗುಳಿ ಮಾತನಾಡಿ, ಉಪನ್ಯಾಸ, ಜಯಂತಿ, ಸ್ಮರಣೆ ಮಾಡುವುದರಿಂದ ಆಯಾ ಸಮಾಜದ ಶರಣ ಶರಣೆಯರ ಜೀವನ ಚರಿತ್ರೆ ಆಧುನಿಕ ಸಮಾಜಕ್ಕೆ ತಿಳಿಯುತ್ತದೆ. ಉಪನ್ಯಾಸ ನೀಡಿಸುವ ಮೂಲಕ ಸರ್ವರಿಗೂ ಶರಣರ ಬದುಕಿನ ಬಗ್ಗೆ ಅರಿವನ್ನು ಮೂಡಿಸುತ್ತಿರುವುದು ಶ್ಲಾನೀಯ. ನಮ್ಮ ಕುರುಬ ಸಮಾಜ ಭಾರತದ ಮೂಲ ನಿವಾಸಿಗಳು. ಶೈವ ಧರ್ಮದ ಅನುಯಾಯಿಗಳು. ನಮ್ಮ ಮೂಲ ದೇವರು ಬೀರಪ್ಪ, ಬಿರೇಶ್ವರಾ ಎಂದಿದೆ. ಮಹಾಕವಿ ಕಾಳಿದಾಸ, ರೇವಣ ಸಿದ್ಧರು, ಕುರುಬ ಗೊಲ್ಲಾಳ ಶರಣರು, ಕನಕದಾಸರು, ಅಹಲ್ಯಾಬಾಯಿ ಹೋಳ್ಕರ, ಸಜ್ಜಲಗುಡ್ಡದ ಶರಣಮ್ಮ ಮುಂತಾದವರು ಈ ಸಮಾಜದವರು ಎಂದರು.
ವಿ. ಕೆ. ಕರೇಗೌಡ್ರ, ನಾಗರಾಜ ಮೆಣಸಗಿ, ಎಂ. ಬಿ. ಲಿಂಗಧಾಳರು, ಪ್ರಕಾಶ ಅಸುಂಡಿ, ರಾಮಣ್ಣ ಕಳ್ಳಿಮನಿ ಇತರರು ಇದ್ದರು.