ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಯಿತು.
ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಕ್ರೀಡೆಗಳು ಮಾನವರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಆಧಾರ. ಕ್ರೀಡೆಗಳನ್ನು ಆಡುವ ವ್ಯಕ್ತಿಗಳು ಆರೋಗ್ಯವಾಗಿರುತ್ತಾರೆ. ಉದನಪರಿ ಎಂದು ಕರೆಯಲ್ಪಡುವ ಪಿಟಿ ಉಷಾ, ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹಾಗೂ ಹಾಕಿ ಮಾಂತ್ರಿಕ ಎಂದು ಕರೆಯಲ್ಪಡುವ ಮೇಜರ್ ಧ್ಯಾನ್ ಚಂದ್ ಅವರಂತಹ ಅನೇಕ ಕ್ರೀಡಾ ದಂತಕಥೆಗಳನ್ನು ಭಾರತವು ಸೃಷ್ಟಿಸಿದೆ. ಕ್ರೀಡೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ದಿನನಿತ್ಯದ ಜೀವನದಲ್ಲಿ ದೈಹಿಕವಾಗಿ ಸಕ್ರಿಯವಾಗಿರುವುದು ರಾಷ್ಟ್ರೀಯ ಕ್ರೀಡಾ ದಿನದ ಪ್ರಾಥಮಿಕ ಧ್ಯೇಯವಾಗಿದೆ. ಕ್ರೀಡೆಯ ಮೌಲ್ಯಗಳಾದ ಶಿಸ್ತು, ಪರಿಶ್ರಮ, ಕ್ರೀಡಾಪಟುಗಳ ಮನೋಭಾವ ಮತ್ತು ತಂಡದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಸಾರ್ವಜನಿಕರು ಕ್ರೀಡೆಗಳನ್ನು ಕೈಗೆತ್ತಿಕೊಳ್ಳಲು ಮತ್ತು ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಹಾಕಿ ಮಾಂತ್ರಿಕನಾದ ಮೇಜರ್ ಧ್ಯಾನ್ ಚಂದ್ ಅವರಂತಹ ದಂತಕತೆಯ ಆಟಗಾರನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ 2012ರಲ್ಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಿತು ಎಂದು ಹೇಳಿದರು.
ಶಾಲೆಯ ದೈಹಿಕ ಶಿಕ್ಷಕಿಯರಾದ ಶ್ರೀಮತಿ ವೀಣಾಶ್ರೀ ಪವಿ ರವರು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಗಸ್ಟ್ 29ರಂದು ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಇವರು ಮೂರು ಬಾರಿ ಒಲಂಪಿಕ್ ಚಿನ್ನದ ಪದಕ ವಿಜೇತ ಭಾರತೀಯ ಹಾಕಿ ತಂಡದ ಪ್ರಮುಖ ಭಾಗವಾಗಿದ್ದರು, ಇವರು ಹಾಗೂ ತಂಡದವರು 1928, 1932 ಹಾಗೂ 1936 ರ ವರ್ಷಗಳಲ್ಲಿ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದ ಹಾಕಿ ಆಟಗಾರ ಮೇಜರ್ ಧ್ಯಾನಚಂದ್ ಸಿಂಗ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. 1926 ರಿಂದ 1949ರ ವರೆಗೆ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 400 ಗೋಲುಗಳನ್ನು ಗಳಿಸಿದ್ದಾರೆ. ಇವರು ಅಂತರಾಷ್ಟ್ರೀಯ ಹಾಕಿ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹಾಕಿ ಮಾಂತ್ರಿಕರಾಗಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕ್ರೀಡಾ ದಿನದ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ಯ ದೈಹಿಕ ಶಿಕ್ಷಕಿಯರು ತರಗತಿವಾರು ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಹಮ್ಮಿಕೊಂಡು, ಕ್ರೀಡೆಗಳ ಮೌಲ್ಯ ಹಾಗೂ ಮಹತ್ವವನ್ನು ತಿಳಿಸಿಕೊಟ್ಟರು. ದೈಹಿಕ ಶಿಕ್ಷಕಿಯರಾದ ಶ್ರೀಮತಿ ವೀಣಾಶ್ರೀ ಪವಿ ರವರಿಗೆ ಶಾಲಾ ವತಿಯಿಂದ ಹೂಗುಚ್ಛ ನೀಡಿ ಗೌರವ ಅಭಿನಂದನೆ ಸಲ್ಲಿಸಲಾಯಿತು. ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಪಾಟೀಲ ನಿರೂಪಿಸಿದರು ಶ್ರೀ ಪಂಪಣ್ಣ ರೊಡ್ಡಾನವರು ಸ್ವಾಗತಿಸಿದರು, ಕು. ಗಾಯತ್ರಿ ಅಸುಂಡಿ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ, ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ಶ್ರೀಮತಿ ರೇಣುಕಾ ವೆಂಕಟಾಪುರ, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.