ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಹಿಂದಿ ದಿವಸ್ ಆಚರಿಸಲಾಯಿತು.
ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಭಾರತವು ಅನೇಕ ಭಾಷೆಗಳು ಹಾಗೂ ಲಿಪಿಗಳನ್ನು ಹೊಂದಿರುವ ಶ್ರೀಮಂತ ದೇಶವಾಗಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡಲಾಗುತ್ತದೆ, ಅದರಲ್ಲೂ ಹಿಂದಿ ಭಾಷೆಯನ್ನು ದೇಶದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಮಾತನಾಡಲಾಗುತ್ತದೆ. ಭಾರತದಲ್ಲಿ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ದೊರೆತಿಲ್ಲವಾದರೂ ರಾಷ್ಟ್ರದ ಅಧಿಕೃತ ಭಾಷೆಯಾಗಿ ಹಿಂದಿಗೆ ವಿಶೇಷ ಸ್ಥಾನ ನೀಡಲಾಗಿದೆ. ಹಿಂದಿ ಭಾಷೆ ಭಾರತೀಯರನ್ನು ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸುತ್ತದೆ. ಹಿಂದಿ ಭಾಷೆಯು ಭಾರತದ ಅಸ್ಮಿತೆ ಮತ್ತು ಹೆಮ್ಮೆ ಎರಡು ಆಗಿದೆ ಹಿಂದಿ ಭಾಷೆಯನ್ನು ಬಳಸುವ ಮೂಲಕ ವಿಶ್ವದ ಎಲ್ಲಾ ದೇಶಗಳಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸಲು ಪ್ರತಿ ವರ್ಷ ರಾಷ್ಟ್ರೀಯ ಹಿಂದಿ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಶಾಲೆಯ ಹಿಂದಿ ಭಾಷೆಯ ಶಿಕ್ಷಕಿಯರಾದ ಶ್ರೀಮತಿ ಸೈನಾಜ್ ನದಾಫ್ ರವರು ರಾಷ್ಟ್ರೀಯ ಹಿಂದಿ ದಿನ ಆಚರಿಸುವ ಇತಿಹಾಸ ಮತ್ತು ಹಿಂದಿ ಭಾಷೆಯ ಮಹತ್ವ ಕುರಿತು ಮಕ್ಕಳಿಗೆ ತಿಳಿಸಿದರು. ಇನ್ನೋರ್ವ ಹಿಂದಿ ಭಾಷಾ ಶಿಕ್ಷಕಿಯರಾದ ಶ್ರೀಮತಿ ಅಫಿಜಾ ಬೇಗಂ ಬಾಗಲಕೋಟೆ ರವರು ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.