

ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಗೆ ಡೆಂಗ್ಯೂ ಜ್ವರದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರವಿ. ಎಂ. ಹೆಬ್ಬಳ್ಳಿ, ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ಹಾಗೂ ಡಾ. ಪವನ. ಎಸ್. ಹುಯಿಲಗೋಳ ರವರು ಸಸಿಗೆ ನೀರು ಉಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮಕ್ಕಳಿಗೆ ಡೆಂಗ್ಯೂ ಜ್ವರದ ಕುರಿತು ಉಪನ್ಯಾಸ ನೀಡಿದ ಗದಗ ನಗರದ ವೈದ್ಯರಾದ ಡಾ. ಪವನ. ಎಸ್. ಹುಯಿಲಗೋಳ ರವರು ಡೆಂಗ್ಯೂ ಜ್ವರವು ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಗಂಭೀರವಾದ ಆರೋಗ್ಯ ಅಪಾಯವಾಗಿದೆ. ಈಡೀಸ್ ಸೊಳ್ಳೆ ಕಡಿತದಿಂದ ಡೆಂಗ್ಯೂ ಜ್ವರಕ್ಕೆ ಕಾರಣವಾಗಿದೆ. ಈಡಿಸ್ ಸೊಳ್ಳೆಗಳು ನಿಶ್ಚಲ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ, ಉದಾಹರಣೆ ಹೂವಿನ ಕುಂಡಲಿಗಳು, ಹಳೆಯ ಟೈರುಗಳು, ತೆರೆದ ಕಂಟೈನರ್, ತೆಂಗಿನ ಚಿಪ್ಪು, ಟ್ಯಾಂಕ್ ನಲ್ಲಿ ನಿಂತ ನೀರು ಮುಂತಾದ ಸ್ಥಳಗಳಲ್ಲಿ ಬಹಳ ದಿನಗಳವರೆಗೆ ನಿಂತ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಿ ಡೆಂಗ್ಯೂ ಜ್ವರಕ್ಕೆ ಕಾರಣವಾಗುತ್ತದೆ. ಜನಸಂದಣಿ ಇರುವ ಪ್ರಮುಖ ನಗರಗಳಲ್ಲಿ ಮತ್ತು ಬೆಚ್ಚಗಿನ/ಆರ್ದ್ರ ವಾತಾವರಣವಿರುವ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರವು ಸುಲಭವಾಗಿ ಹರಡುತ್ತದೆ. ಡೆಂಗ್ಯೂ ವೈರಸ್ ಆಗಿರುವುದರಿಂದ ಅದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಡೆಂಗ್ಯೂ ಜ್ವರದ ಲಕ್ಷಣಗಳು ಸೋಂಕಿಗೆ ಒಳಗಾದ ನಾಲ್ಕಾರು ದಿನಗಳ ನಂತರ ಪ್ರಾರಂಭವಾಗುತ್ತದೆ, ಅತಿ ಹೆಚ್ಚಿನ ಜ್ವರ ಕಂಡುಬರುತ್ತದೆ, ವಾಕರಿಕೆ ಅಥವಾ ವಾಂತಿ, ತೀವ್ರವಾದ ಸ್ನಾಯು ಮತ್ತು ಕೀಲು ನೋವು, ತಲೆನೋವು, ಕಣ್ಣುಗಳ ಹಿಂದೆ ನೋವು ಮತ್ತು ಆಯಾಸ ಹೆಚ್ಚಾಗುತ್ತದೆ. ಡೆಂಗ್ಯೂ ಚಿಕಿತ್ಸೆಯ ರೋಗಲಕ್ಷಣಗಳಿಗೆ ಪರಿಹಾರವನ್ನು ನೀಡುವ ಬಗ್ಗೆ ಕಾಳಜಿ ವಹಿಸಬೇಕು. ಇದಲ್ಲದೆ ಸೊಳ್ಳೆ ನಿವಾರಕಗಳು ಮತ್ತು ಕ್ರಿಮ್ ಗಳನ್ನು ಬಳಸುವುದು, ನಿಮ್ಮ ಸುತ್ತಮುತ್ತಲಿನ ನೀರು ನಿಲ್ಲುವ ವಸ್ತುಗಳಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳುವುದು, ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ, ಸೊಳ್ಳೆ ಪರದೆಗಳನ್ನು ಬಳಸುವುದು, ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು, ನೈರ್ಮಲ್ಯ ಸುಧಾರಣೆ, ಸಮುದಾಯ ಸ್ವಚ್ಛತಾ ಅಭಿಯಾನಗಳು ಹಾಗೂ ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಯಗಾರಗಳು ಹಾಗೂ ವಿಚಾರಗೋಷ್ಠಿಗಳು ನಡೆಸುವುದರ ಮೂಲಕ ಡೆಂಗಿ ಜ್ವರ ಹರಡುವುದನ್ನು ಕಡಿಮೆಗೊಳಿಸಬಹುದು. ವಿದ್ಯಾರ್ಥಿಗಳು ಡೆಂಗ್ಯೂ ಜ್ವರದ ಕುರಿತು ಹೆಚ್ಚಿನ ಮಾಹಿತಿಯನ್ನು ಅಭ್ಯಾಸ ಮಾಡಿ ತಮ್ಮ ಕುಟುಂಬದ ಸದಸ್ಯರಿಗೆ ಅದರ ಅರಿವು ಹಾಗೂ ತಿಳುವಳಿಕೆಯನ್ನು ಮೂಡಿಸಬೇಕು ಈ ರೀತಿ ಮಾಡುವುದರಿಂದ ಡೆಂಗ್ಯೂ ಜ್ವರವನ್ನು ತಡೆಗಟ್ಟಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಸಾರ್ವಜನಿಕರು, ವೈದ್ಯಕೀಯ ವೃತ್ತಿಪರರು, ಸಮುದಾಯಗಳು, ಮತ್ತು ಸರಕಾರಿ ಸಂಸ್ಥೆಗಳು ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಸ್ಥಳೀಯ ಆರೋಗ್ಯ ಅಧಿಕಾರಿಗಳು ಮತ್ತು ಸಮುದಾಯಗಳು ಡೆಂಗ್ಯೂ ಜ್ವರದ ಕುರಿತು ಕ್ರಿಯಾ ಯೋಜನೆಗಳನ್ನು ರಚಿಸಿ, ಜ್ವರವನ್ನು ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರವಿ. ಎಂ. ಹೆಬ್ಬಳ್ಳಿ ರವರು ಶಾಲಾ ಮಕ್ಕಳಿಗೆ ಸ್ವಚ್ಛತೆ ಹಾಗೂ ಡೆಂಗ್ಯೂ ಜರವು ಬರದಂತೆ ಮುಂಜಾಗ್ರತ ಕ್ರಮಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ ಎಸ್. ಹುಯಿಲಗೋಳ, ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ, ಶ್ರೀ ಎಂ. ವಿ. ಹವಲ್ದಾರ, ಶಾಲೆಯ ಸಮಸ್ತ ಶಿಕ್ಷಕ /ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.