ವಿಡಿಎಸ್ ಕ್ಲಾಸಿಕ್ ಸಿಬಿಎಸ್ಇ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ.

1233333
Published on
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ ಮಾಡಲಾಯಿತು.
ವಿಡಿಎಸ್ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ವಿ. ಹವಾಲ್ದಾರ ರವರು ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ರಕ್ಷಾ ಬಂಧನ ಹಬ್ಬವು ಪುರಾತನ ಕಾಲದಿಂದ ನಡೆದು ಬಂದಿದ್ದು, ಪ್ರೀತಿ, ಸ್ನೇಹ, ಪವಿತ್ರತೆ, ಸಾಮರಸ್ಯದ ಸಂಕೇತವಾಗಿದೆ. ರಾಖಿಯು ಸಾಧಾರಣ ನೂಲಿನ ದಾರದಿಂದ ಮಾಡಲಾಗುತ್ತದೆ. ರಕ್ಷಾ ಬಂಧನದ ಹಬ್ಬದಂದು ಬೆಳಗ್ಗೆ ಸಹೋದರಿ ಹೊಸ ಬಟ್ಟೆ ಧರಿಸಿ, ಸಹೋದರನಿಗೆ ಆರತಿ ಬೆಳಗಿಸಿ, ಹಣೆಯಲ್ಲಿ ತಿಲಕವನಿಟ್ಟು, ರಾಖಿ ಕಟ್ಟುವ ಪದ್ಧತಿಯಾಗಿದೆ. ಸಹೋದರಿ ಕೊಟ್ಟಿರುವ ಸಿಹಿ ತಿಂದ ನಂತರ ಸಹೋದರನು ಆಶೀರ್ವಾದ ಮಾಡಿ ಬಟ್ಟೆ, ಆಭರಣಗಳು ಮುಂತಾದವುಗಳನ್ನು ಸ್ನೇಹರೂಪದಲ್ಲಿ ಕಾಣಿಕೆ ನೀಡುತ್ತಾನೆ ಎಂದು ರಕ್ಷಾ ಬಂಧನ ಹಬ್ಬದ ಆಚರಣೆ ಹಾಗೂ ಮಹತ್ವವನ್ನು ತಿಳಿಸಿದರು.
ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಈ ರಕ್ಷಾ ಬಂಧನ ಹಬ್ಬವು ಅಣ್ಣ-ತಂಗಿಯರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಶಾಲೆಯ ಮಕ್ಕಳಲ್ಲಿ ಪರಸ್ಪರ ಸಹೋದರತ್ವ, ಬಾಂಧವ್ಯ ಬೆಳೆಸಲು ಈ ರಕ್ಷಾಬಂಧನವನ್ನು ಹಮ್ಮಿಕೊಂಡಿದೆ. ಕೆಲವು ವಿದ್ಯಾರ್ಥಿಗಳ ಮನೆಯಲ್ಲಿ ಅಣ್ಣ ಇದ್ದರೆ ತಂಗಿ ಇರಲ್ಲ, ಅಂತವರು ಇಲ್ಲಿ ಸಹೋದರ,  ಸಹೋದರಿಯರನ್ನು ಪಡೆದು ಭ್ರಾತೃತ್ವ ಭಾವವನ್ನು ಪಡೆಯಬಹುದಾಗಿದೆ. ರಕ್ಷಾಬಂಧನ  ಇದೊಂದು ಸಾಂಸ್ಕೃತಿಕ ಹಬ್ಬವಾಗಿದೆ. ಈ ಹಬ್ಬವು ಈ ಸಂದರ್ಭದಲ್ಲಿ ಕೌಟುಂಬಿಕ ಬಾಂಧವ್ಯ ಹಾಗೂ ಪ್ರೀತಿ ವಿಶ್ವಾಸ ಒದಗಿಸುವ ಸಂತಸದ ಕ್ಷಣವಾಗಿದೆ ಎಂದರು.
ಶಾಲೆಯ ಶಿಕ್ಷಕರಾದ ಶ್ರೀ ದೇವೇಂದ್ರಪ್ಪ ಅನ್ವೇರಿ ರವರು ರಕ್ಷಾ ಬಂಧನ ಹಬ್ಬದ ಆಚರಣೆಯ ಮೂಲಗಳಾದ ಪೌರಾಣಿಕ, ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯ ಕಥಾ ಪ್ರಸಂಗಗಳ ಮೂಲಕ ಈ ಹಬ್ಬದ ಮಹತ್ವ ಹಾಗೂ ಆಚರಣೆಯ ಪದ್ಧತಿಯನ್ನು ಮಕ್ಕಳಿಗೆ ತಿಳಿಸಿದರು. ಶಾಲಾ ಮಕ್ಕಳಿಗೆ ಭವನವಾರು ರಾಖಿ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 250 ಕಿಂತ ಹೆಚ್ಚು ವಿದ್ಯಾರ್ಥಿಗಳು ಅತಿ ಉಲ್ಲಾಸದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆ ಹಾಗೂ ಸೃಜನಶೀಲತೆಯ ಮೂಲಕ ಉತ್ತಮವಾದ ರಾಖಿಗಳನ್ನು ತಯಾರಿ ಮಾಡಿದ್ದರು.  ವಿದ್ಯಾರ್ಥಿಗಳು ತಯಾರಿಸಿದ ರಾಖಿಗಳನ್ನು ಅತಿಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಭವನವಾರು ಫಲಿತಾಂಶವನ್ನು ಪ್ರಕಟಿಸಿ, ಶುಭಾಶಯ ಕೋರಿದರು. ನಂತರ ಶಾಲೆಯ ವಿದ್ಯಾರ್ಥಿನಿಯರು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ರಾಖಿಯನ್ನು ಕಟ್ಟಿ, ಆರತಿ ಬೆಳಗಿ, ಸಿಹಿ ತಿನಿಸಿ, ರಕ್ಷಾಬಂಧನ ಹಬ್ಬಕ್ಕೆ ಮೆರಗು ತಂದರು. ಅದಕ್ಕೆ ಪ್ರತಿರೂಪವಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ಕಿರು ಕಾಣಿಕೆ ನೀಡಿ ಸಹೋದರತೆಯ ಪ್ರೀತಿಗೆ ಪಾತ್ರರಾದರು. ನಂತರ ಶಾಲೆಯ ಗುರುಮಾತೆಯರು ಗುರುಗಳಿಗೆ ಸಾಂಪ್ರದಾಯಿಕವಾಗಿ ರಾಖಿಯನ್ನು ಕಟ್ಟಿ, ಸಿಹಿ ತಿನಿಸಿ ಭ್ರಾತೃತ್ವ ಭಾವನೆಯ ಮೌಲ್ಯವನ್ನು ಮಕ್ಕಳಿಗೆ ತಿಳಿಸಿದರು.
ಕು. ಭಾನುಶ್ರೀ. ಕೆ. ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಹಿರಿಯ ಶಿಕ್ಷಕಿಯರಾದ ರೇಣುಕಾ ವೆಂಕಟಾಪುರ ರವರು ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಶ್ರೀ ಎಂ. ವಿ. ಹವಾಲ್ದಾರ, ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ, ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net