

ಗದಗ: ಸೆ.9 - 13 ರವರೆಗೆ 5 ದಿನಗಳ ಕಾಲ ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ (ಖಾಗ್ರಾ), ಜಿಲ್ಲಾ ಪಂಚಾಯತ್ ಗದಗ ಇವರ ಸಂಯುಕ್ತ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ಗದಗ ಉತ್ಸವ-2023 ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮದುಸೂಧನ ಡಿ. ಪುಣೇಕರ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಚೇರಮನ್ ಚಂದ್ರು ಬಾಳಿಹಳ್ಳಿಮಠ ಹೇಳಿದರು.
ಗುರುವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸೆ.9 ರಂದು ಶನಿವಾರ ಸಾಯಂಕಾಲ 4.30 ಕ್ಕೆ ಡಂಬಳ-ಗದಗ ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಜ.ಡಾ.ತೋಂಟದ ಸಿದ್ಧರಾಮ ಶ್ರೀಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡ್ರ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ, ಸಲೀಂ ಅಹ್ಮದ, ಎಸ್.ವಿ. ಸಂಕನೂರ, ಶಾಸಕರಾದ ಸಿ.ಸಿ. ಪಾಟೀಲ, ಜಿ.ಎಸ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಡಾ.ಚಂದ್ರು ಲಮಾಣಿ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ, ಉಪಾಧ್ಯಕ್ಷೆ ಸುನಂದಾ ಪಿ. ಬಾಕಳೆ, ಬೆಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತೆ ಕೃಷ್ಣ ಗುಂಜನ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮದುಸೂಧನ ಡಿ. ಪುಣೇಕರ ಅವರು ಅಧ್ಯಕ್ಷತೆ ವಹಿಸುವರು.
ಗುಡಿ ಹಾಗೂ ಮಧ್ಯಮ ಕೈಗಾರಿಕೆ ಉತ್ಪನ್ನಗಳಿಗೆ ವೇದಿಕೆ ಹಾಗೂ ಪರಿಚಯಿಸಲು ಈ ಉತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ 86 ಮಳಿಗೆ ನಿರ್ಮಿಸಲಾಗಿದೆ. ಇದರಲ್ಲಿ ಶೇ. 50 ರಷ್ಟನ್ನು ಗುಡಿ ಕೈಗಾರಿಕೆ ಮಳಿಗೆಗಳಿಗೆ ಉಚಿತವಾಗಿ ನೀಡಲಾಗುವುದು. ಉಳಿದವುಗಳನ್ನು ಇತರೆ ಕೈಗಾರಿಕೆಗಳ ಉತ್ಪನ್ನಗಳಿಗೆ ಬಾಡಿಗೆ ದರದಲ್ಲಿ ನೀಡಲಾಗುವುದು ಎಂದು ವಿವರಿಸಿದರು.
5 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ರಾಮನಗರ, ಮೈಸೂರು, ಚೆನ್ನಪಟ್ಟಣ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳ ಉತ್ಪನ್ನಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಸಿಗಲಿವೆ. ಉತ್ಸವದಲ್ಲಿ ಸಾವಿರಾರು ಜನ ಬರುವ ನಿರೀಕ್ಷೆ ಇದೆ. ಇದರೊಟ್ಟಿಗೆ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿದಿನ ಆಹ್ವಾನಿತ ಕಲಾವಿರ ಜೊತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಸೆ.10 ರಂದು ಭಾನುವಾರ ಸಾಯಂಕಾಲ 5.00 ಕ್ಕೆ ನಡೆಯುವ ಸಮಾರಂಭದಲ್ಲಿ ಶ್ರೇಷ್ಠ, ಉದ್ಯಮಿ ವರ್ತಕ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹೊಸಳ್ಳಿ ಸಂಸ್ಥಾನ ಮಠದ ಜ.ಅಭಿನವ ಬೂದೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸಚಿವ ಶರಣಬಸಪ್ಪ ದರ್ಶನಾಪೂರ, ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಬಿ.ವಿ. ಗೋಪಾಲರಡ್ಡಿ, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ, ಬೆಂಗಳೂರಿನ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಆಯುಕ್ತರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ದೇವದಾಸ ಎಸ್. ಕಾಮತ, ಎಸ್.ಪಿ. ಸಂಶಿಮಠ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ಬಸವರಾಜ ಕಳಕಪ್ಪ ಪುರ್ತಗೇರಿ (ಗಜೇಂದ್ರಗಡ), ಲಿಂಗಬಸಯ್ಯ ರುದ್ರಯ್ಯ ಮಠದ (ಶಿರೋಳ), ವೀರಣ್ಣ ಫಕೀರಪ್ಪ ಬೇವಿನಮರದ (ಮುಂಡರಗಿ ಅವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ, ಭೂಷಣ ಪ್ರಕಾಶ ಶಹಾ (ಗದಗ), ಗವಿಸಿದ್ದಪ್ಪ ಮಲ್ಲಪ್ಪ ಪಲ್ಲೇದ (ಗದಗ), ಬಸವರಾಜ ಶಂಕ್ರಪ್ಪ ಹುಡೇದ (ಲಕ್ಷ್ಮೇಶ್ವರ) ಹಾಗೂ ಸೋಮಶೇಖರ ಶ್ರೀಶೈಲಪ್ಪ ನರೋಣಿ (ಹೊಳೆಆಲೂರ) ಅವರಿಗೆ ಶ್ರೇಷ್ಠ ವರ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸೆ. 11 ರಂದು ಸೋಮವಾರ ಸಂಜೆ 4 ಕ್ಕೆ ಮಹಿಳಾ ಘಟಕದಿಂದ ಉದ್ಯಮಶೀಲತೆ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಕ್ಕೆ 2020-2025 ರ ಕೈಗಾರಿಕಾ ನೀತಿ ಕುರಿತು ನಡೆಯುವ ವಿಚಾರ ಸಂಕಿರಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ (ಪ್ರಭಾರ) ಶಿವಪುತ್ರ ಎಚ್. ಹರಿಜನ ಅವರು ಉಪನ್ಯಾಸ ನೀಡುವರು.
ಸೆ.13 ರಂದು ಬುಧವಾರ ಸಂಜೆ 6 ಕ್ಕೆ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ನಡೆಯಲಿದೆ. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಿಯೋಜಿತ ಅಧ್ಯಕ್ಷ ರಮೇಶಚಂದ್ರ ಲಹೋಟಿ, ಎಸ್ಪಿ ಬಿ.ಎಸ್. ನೇಮಗೌಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ (ಪ್ರಭಾರ) ಶಿವಪುತ್ರ ಎಚ್. ಹರಿಜನ, ಜಿಪಂ ಗ್ರಾಕೈ ಉಪನಿರ್ದೇಶಕ ಎಚ್.ಬಿ. ಪಾಟೀಲ, ಬೆಂಗಳೂರಿನ ಕೆ.ಸಿ.ಟಿ.ವ್ಹಿ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಗದಗ ಜಿಲ್ಲಾ ನೋಡಲ್ ಅಧಿಕಾರಿ ಬಿ.ಮಹೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಆಗಮಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಕೋ-ಚೇರಮನ್ ಸದಾಶಿವಯ್ಯ ಮದರಿಮಠ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಈಶ್ವರಪ್ಪ ಮುನವಳ್ಳಿ, ತಾತನಗೌಡ ಪಾಟೀಲ, ವೀರೇಶ ಕೂಗು, ಶರಣಬಸಪ್ಪ ಗುಡಿಮನಿ, ಕಾರ್ಯದರ್ಶಿ ಪ್ರಕಾಶ ಉಗಲಾಟದ, ರಾಜಣ್ಣ ಮಲ್ಲಾಡದ, ಜಯದೇವ ಮೆಣಸಗಿ ಮುಂತಾದವರು ಹಾಜರಿದ್ದರು