ತಾಲೂಕಿನ ಪ್ರತಿ ಗ್ರಾಮದಲ್ಲಿ ತೆರಿಗೆ ವಸೂಲಿ ವಿಶೇಷ ಅಭಿಯಾನ

03GDG01
Published on
ತಾಪಂ ಇಓ ಚಂದ್ರಶೇಖರ ಬಿ ಕಂದಕೂರ ಕರೆ
ಗದಗ: ರೋಣ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಿಸೆಂಬರ್ 1 ರಿಂದ 30 ರ ವರೆಗೆ “ತೆರಿಗೆ ವಸೂಲಾತಿ ವಿಶೇಷ ಅಭಿಯಾನ”ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಸಿಬ್ಬಂದಿಗಳು ಕೈ ಜೋಡಿಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಹೇಳಿದರು.
ತಾಲೂಕಿನ ಅಮರಗೋಳ ಗ್ರಾಮ ಪಂಚಾಯತಿಯ ಬಸರಕೋಡ ಗ್ರಾಮದ ಕರ ವಸೂಲಿ ಅಭಿಯಾನ ದಲ್ಲಿ ಪಂಚಾಯತ ಸಿಬ್ಬಂದಿಗಳ ಜೊತೆಗೆ ಮನೆ ಮನೆ ಗೆ ಭೇಟಿ ನೀಡಿ ಕರ ವಸೂಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿಗಳು ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಸಶಕ್ತ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲು ಆರ್ಥಿಕವಾಗಿ ಸಬಲೀಕರಣ ಹೊಂದುವ ಅವಶ್ಯಕತೆ ಇರುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 200 (7) ರಲ್ಲಿ ನಿರ್ಧಿಷ್ಟ ಪಡಿಸಿರುವಂತೆ ಗ್ರಾಮ ಪಂಚಾಯಿತಿಗೆ ಸಲ್ಲಿಕೆ ಆಗಬೇಕಾಗಿರುವ ತೆರಿಗೆಯಲ್ಲಿ ಶೇ.100ರಷ್ಟು ವಸೂಲಿ ಮಾಡುವುದು ಗ್ರಾಮ ಪಂಚಾತಿಯ ಪ್ರಾಥಮಿಕ ಹೊಣೆಗಾರಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಕ್ರೋಢೀಕರಿಸಿ ಕೊಳ್ಳಲು ಕರವಸೂಲಾತಿ ಅಭಿಯಾನವನ್ನು ವಿಶೇಷ ಅಂದೋಲನವನ್ನಾಗಿ ತಾಲೂಕಿನಲ್ಲಿ ನಡೆಸಬೇಕಾಗಿರುತ್ತದೆ. ಆದ್ದರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಡಿ.01 ರಿಂದ ಡಿ.30 ರವರೆಗೆ ಕಡ್ಡಾಯವಾಗಿ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದರು..
 ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕರ ವಸೂಲಾತಿ ಅಭಿಯಾನವನ್ನು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ನೀರಗಂಟಿಗಳು ಗ್ರಾಮ ಪಂಚಾಯತ ಸಿಬ್ಬಂದಿಗಳು ಜೊತೆಗೆ ಸೇರಿಕೊಂಡು ಕರ ವಸೂಲಾತಿಯನ್ನು, ಮನೆಗಳು, ಅಂಗಡಿ ಮುಂಗಟ್ಟು, ಮಳಿಗೆಗಳಿಗೆ ತೆರಳಿ ಕರ ವಸೂಲಾತಿ ಕೈಗೊಂಡು ಅಭಿಯಾನ ಯಶಸ್ವಿಗೊಳಿಸಲು ಸಹಕಾರ ನೀಡಿದರೆ ನಿಗದಿತ ಗುರಿಯನ್ನು ಸಾಧಿಸಬಹುದು ಎಂದರು.
ಈ ಸಂದರ್ಭದಲ್ಲಿ ಅಮರಗೋಳ ಗ್ರಾಮ ಪಂಚಾಯತಿ ಅಧ್ಯಕ್ಷರು ಈರಣ್ಣ ಹೊರಕೇರಿ , ಗ್ರಾಮ ಪಂಚಾಯತಿ ಸದಸ್ಯರು, ಅಭಿವೃದ್ಧಿ ಅಧಿಕಾರಿ ಶಿವಕುಮಾರ ಡೊಳ್ಳಿನ, ತಾಲೂಕ ಪಂಚಾಯತ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು... *ಬಾಕ್ಸ್ :-* ತಾಲೂಕಿನಲ್ಲಿ ಸ್ಥಳಾಂತರಗೊಂಡ ಗ್ರಾಮಗಳ ಗ್ರಾಮಸ್ಥರು ಕಂದಾಯ ಇಲಾಖೆಯಿಂದ ಹಕ್ಕು ಪತ್ರ ಪಡೆದುಕೊಂಡ ಎಲ್ಲಾ ಜನರು ತಮ್ಮ ಹಕ್ಕು ಪತ್ರದ ದೃಡಿಕರಿಸಿದ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಗ್ರಾಮ ಪಂಚಾಯತಿ ಸಲ್ಲಿಸಿ ಈ ಸ್ವತ್ತಿನಲ್ಲಿ ಸೇರ್ಪಡೆ ಮಾಡಿ ತೆರಿಗೆ ಕಟ್ಟಲು ಈ ಮೂಲಕ ತಿಳಿಸಲಾಗಿದೆ... *ಚಂದ್ರಶೇಖರ ಬಿ ಕಂದಕೂರ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ*
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net