ಶುದ್ಧ ಗಾಳಿ ನಗರಗಳ ಪಟ್ಟಿಯಲ್ಲಿ ಗದಗ ಟಾಪ್​

Kappatha
Published on

ಹುಬ್ಬಳ್ಳಿ: ದೇಶದಲ್ಲಿ ಶುದ್ಧ, ಸ್ವಚ್ಛ ಗಾಳಿ ಬೀಸುವ ನಗರ ಪಟ್ಟಿಯಲ್ಲಿ ಗದಗ ನಗರವು ಜೂನ್​ 15ರಂದು ಮುಂಚೂಣಿ ಸ್ಥಾನಕ್ಕೇರಿದ ಸಾಧನೆ ಮಾಡಿದೆ. ಅಲ್ಲದೆ ರಾಜ್ಯದ ಹಲವು ನಗರಗಳು ಟಾಪ್​ ಟೆನ್​ನಲ್ಲಿ ಕಾಣಿಸಿಕೊಂಡಿವೆ.

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿದಿನ ದೇಶದ ಪ್ರಮುಖ ನಗರದ ಗಾಳಿಯ ಗುಣಮಟ್ಟದ ಮಾನದಂಡ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡುತ್ತದೆ. ಜೂನ್​ 15ರಂದು 131 ನಗರಗಳ ಸೂಚ್ಯಂಕ ಪ್ರಕಟಿಸಿದೆ. ಈ ಪೈಕಿ 41 ನಗರಗಳು ಉತ್ತಮ, 65 ನಗರಗಳು ಸಮಾಧಾನಕರ ಹಾಗೂ 21 ನಗರಗಳ ಗಾಳಿಯ ಸ್ಥಿತಿ ಮಧ್ಯಮ ಎಂದು ಮಂಡಳಿ ತಿಳಿಸಿದೆ.

ಇದರಲ್ಲಿ ಗದಗ ನಗರವು 10 ಸೂಚ್ಯಂಕಗಳೊಂದಿಗೆ ಶುದ್ಧ ಗಾಳಿ ಬೀಸುವ ಅತ್ಯುತ್ತಮ ನಗರವಾಗಿ ಗುರುತಿಸಲ್ಪಟ್ಟಿದೆ. ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್​ 11 ಸೂಚ್ಯಂಕಗಳೊಂದಿಗೆ ಎರಡನೇ ಸ್ಥನದಲ್ಲಿದೆ. ರಾಜ್ಯದ ಯಾದಗಿರಿ 14 ಸೂಚ್ಯಂಕಗಳೊಂದಿಗೆ ಮೂರನೇ, ಹುಬ್ಬಳ್ಳಿ 21 ಸೂಚ್ಯಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರೆ, 25 ಸೂಚ್ಯಂಕಗಳೊಂದಿಗೆ ಬಾಗಲಕೋಟೆಯು 6, 26 ಸೂಚ್ಯಂಕಗಳೊಂದಿಗೆ ಬೀದರ್​ ಮತ್ತು ರಾಯಚೂರು ಏಳನೇ ಸ್ಥಾನ ಹಂಚಿಕೊಂಡಿವೆ. ದಾವಣಗೆರೆ 27, ಮೈಸೂರು 28, ಕಲಬುರಗಿ 29 ಸೂಚ್ಯಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಮಂಡಳಿಯ ವರದಿಯಂತೆ ಗಾಳಿ ಗುಣಮಟ್ಟದ ಸೂಚ್ಯಂಕದಲ್ಲಿ 0&50 ಬಂದರೆ ತುಂಬಾ ಕಡಿಮೆ ಕಲುಷಿತ ಗಾಳಿ ಎಂದು ಪರಿಗಣಿಸಲಾಗುತ್ತದೆ.

ಕಪ್ಪತಗುಡ್ಡವು ಗದಗ ಜಿಲ್ಲೆಯ ಹೆಮ್ಮೆ. ಇದನ್ನು ಉಳಿಸಿ ಬೆಳೆಸಿದ ಪರಿಣಾಮ ಈಗ ದೇಶದಲ್ಲೇ ಗದಗ ಶುದ್ಧ ಹವೆ ಬೀಸುವ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ. ಕಪ್ಪತಗಿರಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ ಆಗಬೇಕು. | ಶ್ರೀ ಶಿವಕುಮಾರ ಸ್ವಾಮೀಜಿ ನಂದಿವೇರಿ ಸಂಸ್ಥಾನಮಠ, ಡೋಣಿ ಗದಗನಲ್ಲಿ ಸ್ವಚ್ಛ ಮತ್ತು ಶುದ್ಧ ಗಾಳಿ ಬೀಸುತ್ತಿದೆ. ಆದರೆ, ದೇಶದ ನಂ.1 ನಗರ ಎಂದು ಹೇಳಲಿಕ್ಕೆ ಆಗುವುದಿಲ್ಲ. ಏಕೆಂದರೆ 24 ಗಂಟೆಗೊಮ್ಮೆ ಶುದ್ಧ ಗಾಳಿ ಮಾಪನ ಪ್ರಕ್ರಿಯೆ ನಡೆಯುತ್ತಿರುತ್ತದೆ. | ಶೋಭಾ ಪೋಳ ಪರಿಸರ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net