

ವಿಜಯವಾಣಿ ಸುದ್ದಿಜಾಲ ಗದಗ
ಬ್ರೀಟಿಷ್ ಆಗಮನದ ನಂತರ ಭಾರತದಲ್ಲಿ ಆಹಾರ ಪದ್ಧತಿ ಬದಲಾಗಿದೆ. ಬ್ರೀಟಿಷರಿಂದ ಭಾರತೀಯರು ಮೈದಾ, ಗೋಧಿಯಂಥ ಪಾಶ್ಚಾತ್ಯ ಆಹಾರದ ಕಡೆಗೆ ವಾಲಿದರು ಎಂದು ಕೆಎಲ್ಇ ಮಹಾವಿದ್ಯಾಲಯದ ಉಪನ್ಯಾಸಕಿ ವೀಣಾ ತಿರ್ಲಾಪೂರ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ತೋಂಟದಾರ್ಯ ಮಠದ 2024ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಮಹಿಳೆಯರಿಗಾಗಿ ಸಿರಿಧಾನ್ಯಗಳ ಅಡುಗೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಿರಿಧಾನ್ಯಗಳೇ ಭಾರತೀಯರ ಮೂಲ ಆಹಾರ ಪದ್ಧತಿ ಆಗಿತ್ತು. ಪಾಶ್ಚಾತ್ಯ ಖಾದ್ಯಗಳಿಂದ ಪ್ರಭಾವಿತರಾಗಿ ನಮ್ಮ ಮೂಲ ಆಹಾರವಾದ ಸಿರಿಧಾನ್ಯಗಳನ್ನು ನಾವು ಕಡೆಗಣಿಸಿದ ಲವಾಗಿ ಆಧುನಿಕ ದಿನಗಳಲ್ಲಿ ರೋಗಗಳು ಹೆಚ್ಚಾಗುತ್ತಿವೆ. ರೋಗಮುಕ್ತವಾದ ಆರೋಗ್ಯಕರ ಜೀವನಕ್ಕೆ ಸಿರಿಧಾನ್ಯಗಳ ಬಳಕೆ ಅವಶ್ಯಕ. ಮಠದ ಜಾತ್ರೆಯು ತನ್ನ ಸಾಮಾಜಿಕ ಕಾಳಜಿಗೆ ಹೆಸರುವಾಸಿಯಾಗಿದೆ. ಈ ಬಾರಿ ಸಿರಿಧಾನ್ಯಗಳ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಅಡುಗೆ ತಯಾರಿಕೆಯ ಸ್ಪರ್ಧೆ ಆಯೋಜಿಸಿದೆ ಎಂದರು.
ನಿರ್ಣಾಯಕರಾಗಿ ಭಾಗವಹಿಸಿದ್ದ ಅನುಸೂಯಾ ದೇವಾಂಗಮಠ ಮಾತನಾಡಿ, ಅಡುಗೆ ಹೆಣ್ಣಿಗೆ ದೈವದತ್ತವಾಗಿ ಒಲಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಅಡುಗೆಕೋಣೆಯನ್ನೂ ಮೀರಿ ಅನೇಕ ೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ವಿಶೇಷ. ಸ್ಪರ್ಧಾಳುಗಳೆಲ್ಲರೂ ಸಿರಿಧಾನ್ಯಗಳನ್ನು ಬಳಸಿ ರುಚಿಯಾದ ಅಡುಗೆ ಮಾಡಿದ್ದು, ಯಾರಿಗೆ ಬಹುಮಾನ ನೀಡಬೇಕು ಎಂಬುದೇ ಜಿಜ್ಞಾಸೆಯಾಗಿದೆ. ಇಂಥ ಅರ್ಥರ್ಪೂಣ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ವಿನಹ ಗೆಲ್ಲುವುದಷ್ಟೇ ಅಲ್ಲ ಎಂದರು.
ಸಿರಿಧಾನ್ಯಗಳ ಸಿಹಿ ಅಡುಗೆ ತಯಾರಿಕೆಯಲ್ಲಿ ಸುಧಾ ಕೆರೂರ ಪ್ರಥಮ, ವಿದ್ಯಾ ಗಂಜಿಹಾಳ ದ್ವೀತಿಯ, ಲತಾ ಮಾನೆ ತೃತೀಯ ಸ್ಥಾನ ಪಡೆದರು. ಸಿರಿಧಾನ್ಯಗಳ ಖಾರದ ಅಡುಗೆಯಲ್ಲಿ ಸುಮಲತಾ ಕೋರಿಶೆಟ್ಟರ ಪ್ರಥಮ, ವಿದ್ಯಾ ಗಂಜಿಹಾಳ ದ್ವೀತಿಯ, ರತ್ನಕ್ಕ ತೆಲ್ಲೂರ ತತೀಯ ಸ್ಥಾನ ಪಡೆದರು.
ಕೆ.ಎಚ್. ಬೇಲೂರ, ಶ್ರೀದೇವಿ ಶೆಟ್ಟರ್, ಪ್ರವಿಣ ವಾರಕರ, ಎಂ. ಎಸ್. ಅಂಗಡಿ, ಅಮರೇಶ ಅಂಗಡಿ, ಗವಿಸಿದ್ಧಪ್ಪ ಗಾಣಿಗೇರ, ಶಿವಲೀಲಾ ಅಕ್ಕಿ, ಸುರೇಖಾ ಪಿಳ್ಳೆ, ಅಕ್ಕಮಹಾದೇವಿ ಚಟ್ಟಿ, ರತ್ನಕ್ಕ ಪಾಟೀಲ, ಪ್ರಭು ಗಂಜಿಹಾಳ ಹಲವರು ಇದ್ದರು.