ಅಂತರಾಳದ ಭಾವನೆಗಳ ಪ್ರಭಲ ಅಭಿವ್ಯಕ್ತಿ ಮಾಧ್ಯಮವೇ ಪತ್ರಗಳು: ತೋಂಟದ ಸಿದ್ದರಾಮ ಶ್ರೀಗಳು

20GDG02
ಗದಗ ತೊಂಟದಾರ್ಯ ಮಠದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಅಂಚೆ ಸೇವಕರಾಗಿ ಕಾರ್ಯ ನಿರ್ವಹಿಸಿದ ವೀರಪ್ಪ ಚನ್ನಬಸಪ್ಪ ಕುಪ್ಪಸ್ತ ಹಾಗೂ ಶಿವಲೀಲಾ ಅಶೋಕ್​ ಸವಿರ್ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಮ ಶ್ರೀಗಳು, ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಚಂದನಾ ದಂಡಿನ, ಐ. ಬಿ. ಬೆನಕೊಪ್ಪ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ರಾಜರ ಕಾಲದಲ್ಲಿ ಹಂಸ ಮೂಲಕ ಸಂದೇಶಗಳು ತಲುಪುತ್ತಿದ್ದವು. ಅದಕ್ಕಾಗಿಯೇ ಹಂಸ ಎಂದರೆ ಅಂಚೆ ಎಂಬ ಹೆಸರು ಬಂದಿದೆ. ಮನುಷ್ಯನ ಅಂತರಾಳದ ಭಾವನೆಗಳನ್ನು ಪ್ರಭಲವಾಗಿ ಅಭಿವ್ಯಕ್ತಿಸುವ ಮಾಧ್ಯಮವೇ ಪತ್ರ. ಇಂತಹ ಪತ್ರ ಬರವಣಿಗೆ ಇಂದು ಕಣ್ಮರೆಯಾಗುತ್ತಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾವನಭವದಲ್ಲಿ ವಿಶ್ವ ಅಮಚೆ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪತ್ರ ವ್ಯವಹಾರಗಳಲ್ಲಿ ಹಲವು ಪ್ರಕಾರಗಳಿವೆ. ಔಪಚಾರಿಕ ಪತ್ರ, ಅನೌಪಚಾರಿಕ ಪತ್ರ. ಪತ್ರಗಳು ವಿಮರ್ಶಾತ್ಮಕ ಓದುವಿಕೆ, ಆತ್ಮಾಭಿವ್ಯಕ್ತಿಯ ಬರಹ, ಚರ್ಚಾಸ್ಪದ ಬರಹ ಹೀಗೆ ಅನೇಕ ಪ್ರಕಾರಗಳಿವೆ. ಪತ್ರ ಬರೆಯುವುದೇ ಒಂದು ಕಲೆ ಆಗಿದೆ. ಅದರ ಮಹತ್ವ ತಿಳಿದವರು ಮಾತ್ರ ಪತ್ರ ಬರೆಯುವಲ್ಲಿ ಪರಿಣೀತಿ ಪಡೆಯುತ್ತಾರೆ ಎಂದರು. ಬರಹದಲ್ಲಿ ಅವರ ಭಾವನೆ, ೇಮ, ಸಮಾಚಾರ, ಎಲ್ಲವೂ ತಿಳಿಯುತ್ತದೆ. ಆದರೆ, ಈಗ ಇಮೇಲ್​, ಎಸ್​ಎಂಎಸ್​, ವಾಟ್ಸಪ್​ ಇವುಗಳ ಮಧ್ಯೆ ಬರವಣಿಗೆ ಕಮರಿದೆ ಎಂದರು.
ಅಂಚೆ ಇಲಾಖೆ ಕುರಿತು ಮಾತನಾಡಿದ ಅವರು, ಅಂಚೆ ಇಲಾಖೆಯು ಬ್ಯಾಂಕುಗಳಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕಿನ ಎಲ್ಲಾ ಸೇವೆಗಳನ್ನು ಅಂಚೆ ಇಲಾಖೆಯಲ್ಲಿ ಪಡೆಯಬಹುದು. ಅಮಚೆ ಇಲಾಖೆ ವಿವಿಧ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದರು.
ಅಂಚೆ ದಿನಾಚರಣೆ ನಿಮಿತ್ಯ ಉಪನ್ಯಾಸ ನೀಡಿದ ಅಂಚೆ ಇಲಾಖೆಯ ಅಧೀಕ ಜಯದೇವ ಕಡಗಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಸಿಗುವ 32 ಸೌಲಭ್ಯಗಳ ಬಗ್ಗೆ ವಿವರಿಸಿದರು. ಅವುಗಳನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಅಂಚೆ ಸೇವಕರಾಗಿ ಕಾರ್ಯ ನಿರ್ವಹಿಸಿದ ವೀರಪ್ಪ ಚನ್ನಬಸಪ್ಪ ಕುಪ್ಪಸ್ತ, ಶಿವಲೀಲಾ ಅಶೋಕ ಸವಿರ್ ಮತ್ತು ಕವಿವಿಯಿಂದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಶಿಲ್ಪಾ ರಮೇಶ್​ ಕುರಿ ಅವರನ್ನು ಸನ್ಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಚಂದನಾ ದಂಡಿನ, ಐ. ಬಿ. ಬೆನಕೊಪ್ಪ, ವಿದ್ಯಾವತಿ ಪ್ರಭು ಗಂಜಿಹಾಳ ಬಾಲಚಂದ್ರ ಭರಮಗೌಡ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net