

ಗದಗ: ಇತ್ತಿಚೆಗೆ ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್ಎಚ್ಎಂ ಯೋಜನೆ ಅಡಿ ಗುತ್ತಿಗೆ ಆಧಾರದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ 195 ಆಶಾ ಮೆಂಟರ್ಗಳನ್ನು ದೀಡಿರನೇ ಕರ್ತವ್ಯದಿಂದ ಬಿಡುಗಡೆಗೊಳಿಸಿದೆ. ಸರ್ಕಾರದ ಈ ನಿರ್ಧಾರ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ 2023ರ ಮೇ ತಿಂಗಳಲ್ಲಿ ಜರುಗಿದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಎನ್ಎಚ್ಎಂ ಸಿಬ್ಬಂದಿಯನ್ನು ಖಾಯಂ ಗೊಳಿಸುವುದಾಗಿ ಹೇಳಿ ಮತ್ತು ಇತ್ತೀಚೆಗೆ ಅವರು ನಡೆಸಿದ ಹೋರಾಟದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಖುದ್ದಾಗಿ ಹೋಗಿ ಬೆಂಬಲ ನೀಡಿ ಖಾಯಂ ಮಾಡುವುದಾಗಿ ಹೇಳಿದ್ದರು. ಸರ್ಕಾರ ಮಾತು ಕೊಟ್ಟಂತೆ ನಡೆದುಕೊಳ್ಳದೆ ಎನ್ಎಚ್ಎಂ ಸಿಬ್ಬಂದಿಗಳನ್ನು ಈಗ ಸೇವೆಯಿಂದ ಬಿಡುಗಡೆ ಗೊಳಿಸುತ್ತಿರುವುದು ಮೋಸದ ಹಾಗೂ ಅನ್ಯಾಯದ ವಿಷಯ ಎಂದು ತಿಳಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಎನ್.ಎಚ್.ಎಂ ಸಿಬ್ಬಂದಿಗಳನ್ನು ಖಾಯಂ ಗೊಳಿಸಲಾಗಿದೆ. ಕರ್ನಾಟಕ ಸರ್ಕಾರವು ಖಾಯಂಗೊಳಿಸಲು ಮುಂದಾಗಬೇಕು ಮತ್ತು 195 ಆಶಾ ಮೆಂಟರ್ಗಳನ್ನು ಬಿಡುಗಡೆಗೊಳಿಸುವ ಆದೇಶವನ್ನು ತಣ ಹಿಂಪಡೆಯಬೇಕೆಂದು ಎಸ್.ವಿ. ಸಂಕನೂರ ಆಗ್ರಹಿಸಿದ್ದಾರೆ.