ಬೀದಿದೀಪ ನಿರ್ವಹಣೆ ಗುತ್ತಿಗೆ! ನಗರಸಭೆ ಪ್ರತಿಪಕ್ಷ ಮೌನ

20240111_104343
Published on

ಕಾಂಗ್ರೆಸ್​ ಸದಸ್ಯರ ನಡೆ, ಅನುಮಾನಕ್ಕೆ ಎಡೆ ! ಪ್ರಜಾಪ್ರಭುತ್ವಕ್ಕೆ ಧಕ್ಕೆ
ಶಿವಾನಂದ ಹಿರೇಮಠ, ಗದಗ
ನಗರಸಭೆಯಲ್ಲಿ ನಾನಾ ಅಕ್ರಮಗಳು ಹೊರ ಬಂದರೂ ಪ್ರತಿಪಕ್ಷದ ಕಾಂಗ್ರೆಸ್​ ಸದಸ್ಯರು ಪ್ರತಿಭಟಿಸದೇ, ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್​ ಸದಸ್ಯರ ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿದ್ದಲ್ಲದೇ, ಇಂತಹ ಅಕ್ರಮಕ್ಕೆ ಕುಮ್ಮಕ್ಕೂ ನೀಡುವ ರೀತಿಯಲ್ಲಿ ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಲಾಗುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ವತಿರ್ಸಬೇಕಿದ್ದ ಪ್ರತಿಪಕ್ಷದ ಕರ್ತವ್ಯವನ್ನು ಕಾಂಗ್ರೆಸ್​ ಮರೆತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂತಹ ನಡೆಗಳು ಮಾರಕವಾಗಲಿವೆ. ಟೆಂಡರ್​ ಪ್ರಕ್ರಿಯೆಯನ್ನೇ ಬುಡಮೇಲು ಮಾಡಿದ ಆಡಳಿತ ಪಕ್ಷ ಮತ್ತು ನಗರಸಭೆ ಅಧಿಕಾರಿಗಳ ವಿರುದ್ಧ ಈ ವರೆಗೂ ಒಂದೇ ಒಂದು ಮನವಿಯನ್ನು ಸಲ್ಲಿಸುವುದಾಗಲಿ, ಮೌನ ಪ್ರತಿಭಟನೆ ಮಾಡುವುದಾಗಲಿ ಕ್ರಮ ಕೈಗೊಂಡಿಲ್ಲ. ಪಾರದರ್ಶಕ ಟೆಂಡರ್​ ಪ್ರಕ್ರಿಯೆಯನ್ನು ವಿರೂಪಗೊಳಿಸಿ ಅಧಿಕ ಬಿಡ್​ ಮಾಡಿದವರಿಗೆ ಟೆಂಡರ್​ ನೀಡಿದ ಅಕ್ರಮ, ಬಿಡ್​ ತೆರಯುವ ಮುನ್ನವೇ ದರ ನಿಗದಿ ಪಡಿಸುವುದು ಹಾಗೂ ಕೆಟಿಪಿಪಿ ನಿಯಮ ಉಲ್ಲಂಘಿಸಿ ಟೆಂಡರ್​ ನೀಡಿದ್ದ ಪ್ರಕರಣ ಬೆಳಕಿಗೆ ಬಂದು ಎರಡೂ ವಾರವೇ ಕಳೆದರೂ ಈ ಅಕ್ರಮ ವಿರುದ್ಧ ಕಾಂಗ್ರೆಸ್ಸಿನ ಪ್ರಭಾವಿ ನಗರಸಭೆ ಸದಸ್ಯರು ಮೌನ ವಹಿಸಿದ್ದಾರೆ. ಈ ಹಿನ್ನೆಲೆ ಕೆಲ ಕಾಂಗ್ರೆಸ್​ ಸದಸ್ಯರಲ್ಲೇ ಅಸಮಧಾನ ಬುಗಿಲೆದ್ದಿದೆ. ಆಡಳಿತ ಪಕ್ಷದ ನಡೆಯನ್ನು ಖಂಡಿಸುವಲ್ಲಿ ಕಾಂಗ್ರೆಸ್​ ವಿಲವಾಗಿದೆ ಮತ್ತು ಉದ್ದೇಶಪೂರ್ವಕವಾಗಿ ಕಾಂಗ್ರೆಸ್​ ಮೌನವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂತಹ ನಡೆಗಳಿಂದ ಕಾಂಗ್ರೆಸ್ಸಿಗೆ ಮುಜುಗುರವಾಗಲಿದೆ ಎಂದು ಕಾಂಗ್ರೆಸ್ಸಿನ ಕೆಲ ಸದಸ್ಯರಲ್ಲಿ ಅಸಮಧಾನ ಮೂಡಿದೆ. ನಗರಸಭೆಯಲ್ಲಿ ಆಡಳಿತ ಮತ್ತು ಪ್ರತಿಕ್ಷದ ಪ್ರಭಾವಿ ಸದಸ್ಯರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಈ ಬೆಳವಣಿಗೆ ಸಾಕರಿಸುವಂತಿದೆ.

ಇದೇ ಮೊದಲೇನಲ್ಲ?
ನಗರಸಭೆಯಲ್ಲಿ ಕಾಂಗ್ರೆಸ್​ ಮೌನಕ್ಕೆ ಶರಣಾಗಿದ್ದು ಇದೇ ಮೊದಲೇನಲ್ಲ ಎಂಬುದು ಕೂಡ ಸತ್ಯ. ಕೋಟ್ಯಂತರ ರೂ. ವೆಚ್ಚದ ನಕಲಿ ಠರಾವು ಪ್ರಕರಣದಲ್ಲಿ ಬಿಜೆಪಿ ಸದಸ್ಯರೇ ಬಿಜೆಪಿ ಆಡಳಿತದ ವಿರುದ್ಧ ಈ ಮೊದಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರು. ತದ ನಂತರ ಜಿಲ್ಲಾಧಿಕಾರಿಗಳೇ ಖುದ್ದು ನಗರಸಭೆಗೆ ಆಗಮಿಸಿ ಯುಜಿಡಿ ಅಕ್ರಮ ಕುರಿತು ನಗರಸಭೆಯಲ್ಲಿ ಸಭೆ ನಡೆಸಿದ್ದರು. ಆಗಲೂ ಕಾಂಗ್ರೆಸ್​ ಪ್ರತಿಕ್ಷದ ನಾಯಕರು ಮೌನಕ್ಕೆ ಶರಣಾಗಿದ್ದರು. ನಗರಸಭೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆಡಳಿತ ಪಕ್ಷದ ಬಿಜೆಪಿಯ ಕೆಲ ಸದಸ್ಯರು ನಗರಸಭೆಗೆ ಬೀಗ ಜಡಿದು ಅಧ್ಯಕ್ಷರ ವಿರುದ್ಧವೇ ಪ್ರತಿಭಟನೆ ನಡೆಸಿದ್ದು ಇನ್ನೂ ನಗರಸಭೆ ಆವರಣದಿಂದ ಮಾಸಿಲ್ಲ. ಬೀದಿದೀಪ ನಿರ್ವಹಣೆ ಗುತ್ತಿಗೆಯಲ್ಲಿ ಅಧಿಕಾರಿ ವರ್ಗ, ಆಡಳಿತ ಪಕ್ಷವು ಬಹಿರಂಗವಾಗಿಯೇ ಟೆಂಡರ್​ ಪ್ರಕ್ರಿಯೆಲ್ಲಿ ತಪ್ಪೆಸಗಿದರೂ ಕೂಡ ಕಾಂಗ್ರೆಸ್​ ಪ್ರತಿಕ್ರಿಯಿಸಿಲ್ಲ. ಈ ಎಲ್ಲ ಪ್ರಕರಣಗಳಲ್ಲಿನ ಕಾಂಗ್ರೆಸ್​ ನಡೆಯನ್ನು ಜನರು ಪ್ರಶ್ನಿಸುವಂತಾಗಿದೆ.

ಟೆಂಡರ್​ ಅಸಿಂಧುಗೊಳಿಸಲು ಆಗ್ರಹ:
ಕೆಟಿಪಿಪಿ ನಿಯಮ ಉಲ್ಲಂಘಿಸಿ ನಡಾವಳಿ ಸೃಷ್ಟಿಸಿ ಟೆಂಡರ್​ ನೀಡಿದ ಪ್ರಕ್ರಿಯೆಯನ್ನು ಮೌಖಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಅವರು ನಗರಾಭಿವೃದ್ಧಿ ಕೋಶಕ್ಕೆ ಆದೇಶ ಮಾಡಿದ್ದಾರೆ ವಿನಹ ಲಿಖಿತವಾಗಿ ಟೆಂಡರ್​ ಸ್ಥಗಿತಗೊಳಿಸುವಂತೆ ನಗರಾಭಿವೃದ್ಧಿ ಕೋಶವು ಇನ್ನೂ ಅದೇಶಿಸಿಲ್ಲ. ಈ ನಡುವೆ ಕಡಿಮೆ ಬಿಡ್​ ಮಾಡಿದ ಬೆಂಗಳೂರಿನ ಚೈತನ್ಯ ಎಲೆಕ್ಟ್ರಿಕಲ್ಸ್​ ಅವರಿಗೆ ಗುತ್ತಿಗೆ ನೀಡಬೇಕು ಎಂಬುದಾಗಿ ಸಭೆ ನಡೆಸಲಾಗಿದೆ ಎಂಬ ಮಾಹಿತಿ ನಗರಸಭೆ ಮೊಗಸಾಲೆಯಲ್ಲೇ ಕೇಳಿ ಬರುತ್ತಿದೆ. ಆದರೆ, ಈ ಪ್ರಕ್ರಿಯೆಯೂ ಕೂಡ ನಿಯಮದ ಉಲ್ಲಂನೆ ಆಗಿದ್ದು, ಈಗಿನ ಟೆಂಡರ್​ ಅಸಿಂಧುಗೊಳಿಸಿ ಹೊಸದಾಗಿ ಟೆಂಡರ್​ ಪ್ರಕ್ರಿಯೆ ಜರುಗಿಸುವುದು ನಿಯಮಾನುಸಾರ ಸೂಕ್ತ ಎಂಬುದಾಗಿ ಕಾನೂನು ಪಂಡಿತರು ಅಭಿಪ್ರಾಯಿಸಿದ್ದಾರೆ.

ಗುತ್ತಿಗೆದಾರನಿಗೆ ದೊಂಬಾಲು:
ಬೀದಿದೀಪ ನಿರ್ವಹಣೆ ಗುತ್ತಿಗೆಯೂ ಇನ್ನೂ ಸಂಪೂರ್ಣವಾಗಿ ರದ್ದಾಗಿಲ್ಲ. ಈ ನಡುವೆ ಕಡಿಮೆ ಬಿಡ್​ ಮಾಡಿದ ಚೈತನ್ಯ ಎಲೆಕ್ಟ್ರಿಕಲ್ಸ್​ ಅವರಿಗೆ ಗುತ್ತಿಗೆ ನೀಡುವ ಮಾತು ನಗರಸಭೆ ಮೊಗಸಾಲೆಯಲ್ಲಿ ಕೇಳಿ ಬರುತ್ತಿವೆ. ಈ ಹಿನ್ನೆಲೆ ಹಲವು ನಗರಸಭೆ ಸದಸ್ಯರು ಗುತ್ತಿಗೆಯಲ್ಲಿ ಪಡೆಯುವ ಪ್ರಕ್ರಿಯೆಯಲ್ಲಿ ನಮ್ಮನ್ನೂ ಪಾರ್ಟನರ್​ ಮಾಡಿಕೊಳ್ಳಬೇಕು ಚೈತನ್ಯ ಎಲೆಕ್ಟ್ರಿಕಲ್ಸ್​ ಗುತ್ತಿಗೆದಾರನಿಗೆ ದೊಂಬಾಲು ಬಿದ್ದಿದ್ದಾರೆ. ಈ ನೋವನ್ನು ನನ್ನ ಬಳಿ ಗುತ್ತಿಗೆದಾರರು ಹಂಚಿಕೊಂಡಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ನಗರಸಭೆ ಮಾಜಿ ಅಧ್ಯಕ್ಷರೊಬ್ಬರು ತಿಳಿಸಿದ್ದಾರೆ.

ಕೋಟ್​:
ಬೀದಿದೀಪ ನಿರ್ವಹಣೆ ಎಂಬುದು ದೊಡ್ಡ ಮಾಫಿಯಾ ಆಗಿದೆ. ತಿಂಗಳ ಕೊನೆಯಲ್ಲಿ ಅಧಿಕಾರಿಗಳ ಜತೆ ಹೊಂದಾಣಿಕೆ ಮಾಡಿಕೊಂಡು ಬಿಲ್​ ಪಡೆದು ಗುತ್ತಿಗೆದಾರರು ಹೋಗಿಬಿಡುತ್ತಾರೆ. ಈ ಅಕ್ರಮ ತನಿಖೆ ಆಗಬೇಕು. ನಡಾವಳಿ ಬರೆಸಿದವರು ಯಾರು? ನಿಯಮ ಗೊತ್ತಿದ್ದರೂ ಅಧಿಕಾರಿಗಳಿಗೆ ನಿಯಮ ಬಾಹಿರ ಕೆಲಸ ಮಾಡಲು ಕುಮ್ಮಕ್ಕೂ ನೀಡಿದವರು ಯಾರು ಎಂಬುದು ಜನರಿಗೆ ತಿಳಿಯಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು.
-ಕೃಷ್ಣ ಪರಾಪುರೆ, ಹಾಲಿ ನಗರಸಭೆ ಸದಸ್ಯರು. ಮಾಜಿ ನಗರಸಭೆ ಅಧ್ಯಕ್ಷರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net