ಜಂಬೂ ಸವಾರಿಯಲ್ಲಿ ಪ್ರಶಸ್ತಿ ಗೆದ್ದ ಸೂಡಿ ಜೋಡು ಕಳಸ ದೇವಾಲಯದ ಸ್ತಬ್ಧಚಿತ್ರ

06GDG04
Published on
ಗದಗ: ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಸೂಡಿ ಗ್ರಾಮದ ಐತಿಹಾಸಿಕ ಜೋಡು ಕಳಸ (ನಾಗೇಶ್ವರ) ದೇವಾಲಯದ ಸ್ತಬ್ಧಚಿತ್ರ, ಬೆಳಗಾವಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದೆ.
ಜೋಡ ಕಳಸದ ಸ್ತಬ್ಧಚಿತ್ರ ಜಿಲ್ಲೆಯ ಪುರಾತನ ಕಲೆ ಮತ್ತು ವಾಸ್ತುಶಿಲ್ಪದ ಶ್ರೀಮಂತಿಕೆಯನ್ನು ಅನಾವರಣಗೊಳಿಸಿ, ಜಿಲ್ಲೆಗೆ ಹೆಮ್ಮೆ ತಂದಿದೆ. ಜಿಲ್ಲೆಯ ಪ್ರಾಚೀನ ಪರಂಪರೆಯನ್ನು ಬಿಂಬಿಸಿದ ಈ ಸ್ತಬ್ಧಚಿತ್ರವು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ನಿರೀಕ್ಷೆಯಂತೆ ಈ ಬಾರಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಸ್ತಬ್ಧಚಿತ್ರವನ್ನು ಸ್ಥಳೀಯ ಕಲಾವಿದರಾದ ರವಿ ಶಿಶ್ವನಹಳ್ಳಿ, ಕಿರಣ ಓದುಗೌಡರ, ಷಹಜಾನ್ ಮುದಕವಿ, ಫಕ್ಕಿರೇಶ ಕುಳಗೇರಿ, ಜಿ.ಕೆ. ಬಡಿಗೇರ, ರವಿ ಬಾದಾಮಿ, ಅರುಣ, ಕೊಟ್ರೇಶ ಮೊದಲಾದವರ ಕೈಚಳಕದಲ್ಲಿ ಅತ್ಯಂತ ನೈಪುಣ್ಯತೆಯಿಂದ ನಿರ್ಮಿಸಲಾಗಿದೆ. ಕಲಾವಿದರ ತಂಡದ ಸೂಕ್ಷ್ಮ ಕೆತ್ತನೆಗಳು ಮತ್ತು ವಿವರಗಳು ದೇವಾಲಯದ ಮೂಲ ಸ್ವರೂಪಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಈ ಸ್ತಬ್ಧಚಿತ್ರ, ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿಯಿತು. ಜಿಲ್ಲೆಗೆ ಕೀರ್ತಿ ತಂದ ಕಲಾವಿದರ ತಂಡದ ಕಾರ್ಯವನ್ನು ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಪ್ರದರ್ಶನವು ಗದಗ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕಲೆಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net