ಸೂಡಿಯ ನಗರೇಶ್ವರ ದೇವಾಲಯದ ಬಲಕಂಬದಲ್ಲಿ ಹೊಸ ಶಾಸನ ಪತ್ತೆ

19GDG04
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಇತಿಹಾಸ ಪ್ರಸಿದ್ಧ ಸೂಡಿ ನಗರೇಶ್ವರ ದೇವಾಲಯಲ್ಲಿ ಹೊಸ ಶಾಸಕ ಸಿಕ್ಕಿದ್ದು, ಒಟ್ಟಾರೆ ಇಲ್ಲಿ ದೊರೆತ ಶಾಸನಗಳ ಸಂಖ್ಯೆ 17ಕ್ಕೇ ಏರಿದೆ ಎಂದು ನಿವೃತ್ತ ಕೆಎಎಸ್​ ಅಧಿಕಾರಿ, ಶಾಸನ ತಜ್ಞೆ ಹನುಮಾ ಗೋಗಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಮೊದಲು 16 ಶಾಸನಗಳನ್ನು ಗುರುತಿಸಲಾಗಿತ್ತು. ಸೂಡಿಯಲ್ಲಿ ಅತಿ ವಿಸ್ತಾರವೂ ಸುಂದರವೂ ಆದ ನಗರೇಶ್ವರ ದೇವಾಲಯವನ್ನು ನಿಮಿರ್ಸಿದ ರೂವಾರಿಗಳ ಬಗೆಗೆ ಇದುವರೆಗೆ ದಾಖಲೆಗಳು ದೊರೆತಿರಲಿಲ್ಲ. ಈಗ ಅದೇ ದೇವಾಲಯದ ಕಂಬವೊಂದರ ಕೆಳಭಾಗದ ಪಟ್ಟಿಕೆಯಲ್ಲಿ ದೊರೆತ 11ನೇ ಶತಮಾನದ ಅರಗಳಲ್ಲಿ 5 ಸಾಲುಗಳಲ್ಲಿರುವ ಶಾಸನವು, ಮಹಾಪ್ರಧಾನನೂ ವಡ್ಡರಾವುಳದ ದಣ್ಡನಾಯಕನೂ ಆದ "ಗೋವಿಂದರಸರ ತೊತ್ತು, ಕೇತೋಝರ ಪುತ್ರನೂ ಆದ, ಸರಸ್ವತಿ ಪಾದಪಂಕಜ ಭ್ರಮರ, ಸರಸ್ವತಿ ಗಣಮಿತ್ರ, ಬಿರುದ ರೂವಾರಿ ಮಾಯಚಿತ್ತಾರ, ಅರಿ ಬಿರುದ ರೂವಾರಿ, ವೇಸ್ಯಾಭುಜಂಗ, ದುಷ್ಟ ರೂವಾರಿ ರಟ್ಟ, ಶಿಷ್ಟ ಜನ ಹೃದಯ ಸಂತೋಷ, ಚಿತ್ರಶಾಸ್ತ್ರ ವಿದ್ಯಾ ಪ್ರವಿಣ, ಸರಸ್ವತಿ ಲಬ್ಧ ವರಪ್ರಸಾದ ವಿಶೇಷಣಗಳನ್ನುಳ್ಳ ಚಾವೋಜರ ವಿದ್ಯಾಥಿರ್ ಎನಿಸಿದ ಚಟ್ಟೋಜನು' ಎಂಬ ಉಲ್ಲೇಖಿತ ಶಾಸನ ದೊರೆತಿದೆ. ದೇವಸ್ಥಾನ ನಿಮಿರ್ಸಿದ್ದು ಯಾರು ಎಂಬ ಬಗ್ಗೆ ಸ್ಪಷ್ಟ ಒಕ್ಕಣೆಯಿಲ್ಲದಿದ್ದರೂ ಈ ಶಾಸನೋಕ್ತ ಚಟ್ಟೋಜನೇ ದೇವಾಲಯವನ್ನು ನಿಮಿರ್ಸಿದನೆಂದು ಸಂಭಾವ್ಯ ಊಹೆ ಮಾಡಬಹುದು ಎಂದು ತಿಳಿಸಿದ್ದಾರೆ.

ನಗರೇಶ್ವರದ ಪ್ರತಿಬದ್ಧ ನಾಗೇಶ್ವರ ಎಂದು ಕ್ರಿ.ಶ.1060ರ ಸೂಡಿಯ ಶಾಸನ, ನಗರೇಶ್ವರದ ಪ್ರತಿಬದ್ಧ ಪಂಚ ಲಿಂಗೇಶ್ವರ ಎಂದು ಕ್ರಿ.ಶ.1075ರ ಸೂಡಿ ಶಾಸನಗಳಲ್ಲಿ ಈ ದೇವಾಲಯದ ಉಲ್ಲೇಖವಿದೆ. ಕ್ರಿ.ಶ.1113ರ ಸೂಡಿಯ ಶಾಸನದಲ್ಲಿಯೂ ನಗರೇಶ್ವರ ದೇವಾಲಯದ ಪ್ರಸ್ತಾಪವಿದೆ. ಇದರಿಂದ ಕ್ರಿ.ಶ.1060ಕ್ಕಿಂತ ಮುಂಚೆಯೇ ಈ ದೇವಾಲಯವಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಸೂಡಿಯಲ್ಲಿಯ ದೇವಾಲಯಗಳು ಇದಕ್ಕೆ ಪ್ರತಿಬದ್ಧವಾಗಿರುವುದನ್ನು ಗಮನಿಸಿದರೆ ಇಲ್ಲಿಯ ಸ್ಥಾನಾಚಾರ್ಯರ ಅಧಿಕಾರಕ್ಕೆ ಒಳಪಟ್ಟಿದ್ದರು ಎಂಬುದು ಗಮನಾರ್ಹ. ಈಗ ಉಳಿದಿರುವ ಸುಂದರವಾದ ಕಂಬಗಳು ಮತ್ತು ಅಳಿದುಳಿದ ಅಧಿಷ್ಠಾನದ ವಿಸ್ತಾರಗಳನ್ನು ಗಮನಿಸಿದರೆ ತುಂಬ ದೊಡ್ಡ ದೇವಾಲಯವಾಗಿತ್ತೆಂದು ಊಹಿಸಬಹುದು. ಆದರೆ ಇದುವರೆಗೆ ಅದರ ನಿರ್ಮಾಣ ಕುರಿತಾದ ಸ್ಪಷ್ಟ ಮತ್ತು ಖಚಿತ ಲಿಖಿತ ದಾಖಲೆಗಳು ಸಿಕ್ಕಿಲ್ಲ ಎಂದು ಹನುಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net