

ವಿಜಯವಾಣಿ ಸುದ್ದಿಜಾಲ ಗದಗ
ಯುವಕರು ಐಶಾರಾಮಿ ತಂತ್ರಜ್ಞಾನದ ದಾಸರಾಗದೇ ಅದನ್ನು ಸದ್ಬಳಕೆ ಮಾಡಿಕೊಂಡು ಪರಿಶ್ರಮ ಜೀವಿಗಳಾಗಿ, ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಜ್ಞಾನ ಸಂಪಾದನೆಗೆ ಪ್ರಯತ್ನ ಮಾಡಬೇಕು ಎಂದು ಪ್ರೊ. ಸಿದ್ದು ಯಾಪಲಪವಿರ್ ಹೇಳಿದರು.
ಕಲ್ಯಾಣಸಿರಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಷಿರ್ಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಮೂಲತಃ ಮೂರ್ಖರು ಆಗಿರುವುದಿಲ್ಲ. ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಸಾಮರ್ಥ್ಯ ಕೌಶಲ್ಯ ಇದ್ದೇ ಇರುತ್ತದೆ. ಅದನ್ನು ಅರಿತುಕೊಂಡು ಸಕಾರಾತ್ಮಕ ವಿಚಾರಗಳು ಮತ್ತು ಸನ್ಮಾರ್ಗದ ಮೂಲಕ, ವಿಶಾಲವಾದ ಈ ಜಗತ್ತಿನಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಯುವಕರು ಸಕಾರಾತ್ಮಕ ಆಲೋಚನೆಯೊಂದಿಗೆ ಉತ್ತಮ ಆತ್ಮ ಬಲ ಹೊಂದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನಿಡಿದರು.
ಡಾ. ಗಣೇಶ ಸುಲ್ತಾನಪುರ ಮಾತನಾಡಿ, ವಿದ್ಯಾಥಿರ್ಗಳು ತಮ್ಮ ಜೀವನದಲ್ಲಿ ಅನುಭವಿಗಳ ಆದರ್ಶಗಳನ್ನು ಮತ್ತು ಅವರ ಜೀವನಾನುಭವವನ್ನು ತಮ್ಮ ಜೀವನದಲ್ಲಿ ಮಾದರಿಯಾಗಿ ಇಟ್ಟುಕೊಂಡು ಶುದ್ಧ ಸಿದ್ದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಮತ್ತು ಸಾಧಕರಾಗಿ ಉನ್ನತ ಜೀವನಕ್ಕೆ ಅಡಿಯಿಡಬೇಕು ಎಂದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಾ. ಬಿ. ಬಿ. ಗೌಡರ ಮಾತನಾಡಿ, ವ್ಯಕ್ತಿಯಲ್ಲಿ ಕೀಳರಿಮೆ ಪ್ರಜ್ಞೆ ಇದ್ದರೆ ಅದು ಅವನ ಕಾರ್ಯ ಚೈತನ್ಯನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಂದರಲ್ಲೂ ವ್ಯಕ್ತಿಯನ್ನು ಹಿಂದೇಟು ಹಾಕುವಂತೆ ಮಾಡಿ ಅಪ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಯುವಕರು ತಮ್ಮಲ್ಲಿ ಅಡಗಿರುವ ಅಗಾಧವಾದ ಶಕ್ತಿಯನ್ನು ಅರಿತುಕೊಂಡು, ಕಾಲ ಮಿಂಚಿಹೋಗುವ ಮೊದಲೇ ಉತ್ಸಾಹ ಮತ್ತು ಭರವಸೆಗಳೊಂದಿಗೆ ಮುನ್ನುಗ್ಗಿ ಛಲದಂಕ ಮಲ್ಲರಂತೆ ಕೆಲಸ ಮಾಡಿದರೆ ಸುಲಭವಾಗಿ ಸಾಧಿಸಲು ಸಾಧ್ಯ.
ಪ್ರಸಕ್ತ ಸಾಲಿನಲ್ಲಿ ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆಗೈದ ಕ್ರೀಡಾ ಸಾಧಕರಿಗೆ ಮತ್ತು ಪ್ರತಿಭಾನ್ವಿತ ವಿದ್ಯಾಥಿರ್ಗಳಿಗೆ ಸನ್ಮಾನಿಸಲಾಯಿತು.
ಪ್ರೊ. ಸಂತೋಷ ಡೋಣಿ, ಪ್ರೊ. ಅಶ್ವಿನಿ ಪುಠಾಣಿ, ಡಾ. ರೇಣುಕಾ ನವಲಗುಂದ ಇತರರು ಇದ್ದರು.