ನಡೆ, ನುಡಿ ಒಂದಾದಾಗ ಮಾತ್ರ ಶರಣನಾಗಲು ಸಾಧ್ಯ: ಗಿರಿಜಕ್ಕ ಧರ್ಮರೆಡ್ಡಿ

Published on

ವಿಜಯವಾಣಿ ಸುದ್ದಿಜಾಲ ಗದಗ

ನಾವು ಸಾಮಾನ್ಯವಾಗಿ ವ್ಯಕ್ತಿಗಳಿಗೆ ಗೌರವಯುತವಾಗಿ ಕರೆಯಲು "ಶರಣ'ನೆಂಬ ಪದ ಬಳಸುತ್ತೇವೆ. ಅವರನ್ನು "ಶರಣರೆ' ಎನ್ನುತ್ತೇವೆ. ಆದರೆ ಬಸವಾದಿ ಶರಣರ ವಿಚಾರಧಾರೆಯಲ್ಲಿ ಶರಣರೆಂದರೆ ಬರೀ ಕರೆಯುವ, ಮಾತನಾಡಿಸುವ ಅಲಂಕಾರಿಕ ಪದವಲ್ಲ. ಇಲ್ಲಿ ಶರಣರೆಂದರೆ ಅನುಭಾವಿ, ಆಚಾರವುಳ್ಳವ, ಜ್ಞಾನದ ಅರಿವನ್ನು ಹೊಂದಿರುವ ವ್ಯಕ್ತಿ ಎಂದು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಹಾಗೂ ತಾಲೂಕ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಬುಧವಾರ ಬಸವದಳದಲ್ಲಿ ನಡೆದ 1626ನೇ ಶರಣ ಸಂಗಮ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ ಪ್ರಕಾರ ಹುಟ್ಟಿದ ಮನುಷ್ಯ ಹೇಗೆಂದರೆ ಹಾಗೆ ಬದುಕುವುದಲ್ಲ. ಆತನಿಗೆ ಸಂಸ್ಕಾರ ಮುಖ್ಯವಾಗಿರುತ್ತದೆ. ಈ ಸಂಸ್ಕಾರವೇ ಆತನನ್ನು ಹಂತ ಹಂತವಾಗಿ ದೈವತ್ವದ ಕಡೆ ಒಯ್ಯುತ್ತದೆ. ಬಹಳಷ್ಟು ಶರಣರ ವಚನಗಳಲ್ಲಿ "ಶರಣ'ನೆಂಬ ಪದಕ್ಕೆ ತಮ್ಮದೇ ಆದ ವ್ಯಾಖ್ಯಾನಗಳಿವೆ. ಆದರೆ ಬಹುತೇಕ ಶರಣರು ಷಟ್​ಸ್ಥಲಗಳ ಬಗ್ಗೆ ವಿವರಿಸುತ್ತಾ ಮೊದಲು ಮೆಟ್ಟಿಲು ಭಕ್ತನಾಗುವುದು, ಹಂತ ಹಂತವಾಗಿ ಒಂದೊಂದೇ ಮೆಟ್ಟಿಲನ್ನು ದಾಟುತ್ತ ನಡೆದು ಐದನೇ ಮೆಟ್ಟಿಲು ಮುಟ್ಟಿದಾಗ ಆತನಿಗೆ ಶರಣತ್ವ ಲಭಿಸುತ್ತದೆ. ಈ ಐದೂ ಹಂತಗಳನ್ನು ಮುಟ್ಟಿದಾತ ಮಾತ್ರ ಶರಣನಾಗಲು ಸಾಧ್ಯ ಎಂದು ಹೇಳಿದರು.

ಅನೇಕ ಶರಣರು ಧರ್ಮಗುರು ಬಸವಣ್ಣನವರು ದೇವರು ಮತ್ತು ಭೂವಿಗೆ ನಿಚ್ಚಣಿಕೆಯಾಗಿ ಆಗಿದ್ದಾರೆಂದು ತಮ್ಮ ವಚನದಲ್ಲಿ ಹೇಳುತ್ತಾರೆ. ಹಾಗೆಯೇ ಬಸವಣ್ಣನವರು ಭಕ್ತಿಯ ದಾರಿ ತುಳಿದಾಗ ಮಾತ್ರ ಶರಣ ಮಾರ್ಗ ಲಭಿಸುತ್ತದೆ ಎನ್ನುತ್ತಾರೆ. ಇಲ್ಲಿ ಭಕ್ತಿಯೆಂದರೆ ಆಡಂಬರವಲ್ಲ. ಬರೀ ವಿಭೂತಿ, ರುದ್ರಾ ಧಾರಣಿಸಿದ ಪೂಜೆ ಮಾತ್ರವಲ್ಲ. ಆತ ದೇವನಲ್ಲಿ ಅನನ್ಯವಾಗಿ ಪ್ರೀತಿ ಇಡುವುದು. ಅದನ್ನೇ ಶರಣರು ಭಕ್ತಿ ಎನ್ನುವರು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ರೇಣಕ್ಕ ಕರಿಗೌಡ್ರ, ಎಸ್​. ಎ. ಮುಗದ, ವಿ.ಕೆ. ಕರಿಗೌಡರ, ಕೆ. ಎ. ಬಳಿಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net