ಗದಗ ನಗರದ ಸಂಗಮೇಶ್ವರ ಆಸ್ಪತ್ರೆಯ ವೈದ್ಯರ ಸಾಧನೆ

30GDG01
Published on

ವಿಜಯವಾಣಿ ಸುದ್ದಿಜಾಲ ಗದಗ

ರೋಣ ಪಟ್ಟಣದ 68 ವರ್ಷದ ವೃದ್ಧೆಯೊಬ್ಬರ ಗರ್ಭಕೋಶದ ಎಡ ಅಂಡಾಂಶದಲ್ಲಿ ಬೆಳೆದಿದ್ದ 23.9 ಕೆ.ಜಿ.ಯಷ್ಟು ಬೃಹತ್​ ಗಾತ್ರದ ಗಂಟನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವಲ್ಲಿ ನಗರದ ಸಂಗಮೇಶ್ವರ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಅಂಡಾಂಶ ಗಂಟಿನ ಶಸ್ತಚಿಕಿತ್ಸೆಯಲ್ಲಿ ವಿಶೇಷ ಏನಿಲ್ಲ. ಆದರೆ, ಈ ಪ್ರಕರಣದಲ್ಲಿ 24 ಕೆ.ಜಿ.ಯಷ್ಟು ದೊಡ್ಡ ಗಂಟು ಬೆಳೆದಿತ್ತು. ಇದನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ರೋಗಿ ಆರೋಗ್ಯದಿಂದ ಇದ್ದು, ಆಸ್ಪತ್ರಯಿಂದ ಡಿಸ್​ಚಾರ್ಜ ಮಾಡಲಾಗಿದೆ ಎಂದು ಸಂಗಮೇಶ್ವರ ಆಸ್ಪತ್ರೆ ವೈದ್ಯರಾದ ಡಾ. ಪ್ರಶಾಂತ್​ ಧನ್ನೂರ ಮತ್ತು ಡಾ. ಅನ್ನರ್ಪೂಣ ಧನ್ನೂರ ತಿಳಿಸಿದ್ದಾರೆ.

ಹಾಮೋರ್ನಲ್​ ಬದಲಾವಣೆ ಕಾರಣಕ್ಕೆ ಗರ್ಭಕೋಶದ ಅಂಡಾಂಶಗಳಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ. ಇದು ಯಾವುದೇ ವಯೋಮಾನದವರಲ್ಲಿ ಕಾಣಿಸಿಕೊಳ್ಳಬಹುದು. ಗಂಟು ಆರೇಳು ಸೆಂಟಿ ಮೀಟರ್​ ಆಗುತ್ತಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ಆದರೆ, ಈ ಪ್ರಕರಣದಲ್ಲಿ ಅಜ್ಜಿಗೆ ನೋವು ಕಾಣಿಸಿಕೊಂಡಿಲ್ಲ. ಬೊಜ್ಜು ಎಂದು ತಿಳಿದುಕೊಂಡು ಸುಮ್ಮನಿದ್ದರು. ಈಚೆಗೆ ಮೂತ್ರ ತಡೆದುಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಸಿಟಿ ಸ್ಕಾನ್​ ಮಾಡಿದಾಗ ಗರ್ಭಕೋಶದ ಎಡ ಅಂಡಾಂಶದ ಗಂಟು ಬೆಳೆದಿರುವುದು ಗೊತ್ತಾಗಿದೆ ಎಂದು ಡಾ. ಅನ್ನರ್ಪೂಣ ಧನ್ನೂರ ತಿಳಿಸಿದ್ದಾರೆ.

ಅಜ್ಜಿಗೆ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನಿಂದ ಕೂಡಿತ್ತು. ಕರುಳಿಗೆ ಅಂಟಿಕೊಳ್ಳುವಿಕೆ ಮತ್ತು ಶ್ವಾಸಕೋಶ ಮೇಲಕ್ಕೆ ಹೋಗಿತ್ತು. ಅಂಗಾಂಗಳಿಗೆ ಅಂಟಿಕೊಂಡಿದ್ದ ಗಂಟನ್ನು ಬಿಡಿಸಿ ತೆಗೆಯುವುದು ಕಷ್ಟಕರ ಟಾಸ್ಕ ಆಗಿತ್ತು. ಆದರೆ, ನಮ್ಮ ಆಸ್ಪತ್ರೆಯ ವೈದ್ಯರ ತಂಡ ಅದನ್ನು ಯಶಸ್ವಿಯಾಗಿ ನಿಭಾಯಿಸಿತು ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹೆಚ್ಚುವರಿ ಕೊಬ್ಬು ಮತ್ತು ಚರ್ಮ ತೆಗೆದು ಹೊಟ್ಟೆಯ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿದೆ. ರೋಗಿ ಆರಾಮವಾಗಿದ್ದಾರೆ. ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಅದು ಯಾವ ಮಾದರಿಯ ಗಂಟು ಎಂಬುದನ್ನು ತಿಳಿಯಲು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಲಾಗಿದೆ ಎಂದು ಡಾ. ಪ್ರಶಾಂತ್​ ಧನ್ನೂರ ತಿಳಿಸಿದ್ದಾರೆ. ಸಂಗಮೇಶ್ವರ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಜನರು ಶ್ಲಾನೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net