ರಾಜ್ಯ ಮಟ್ಟದ ಯುವಜನೋತ್ಸವ ಸಮಾರೋಪ ಸಮಾರಂಭ ಗದಗದಲ್ಲಿ ಆಯೋಜನೆ

22GDG02
Published on
ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯ ಎನ್. ಎಸ್. ಎಸ್. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಅವರ ಸಹಯೋಗದಲ್ಲಿ 5 ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇಂದು ಗದಗದಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಚುನಾವಣಾ ಆಯುಕ್ತರಾದ ಜಿ. ಎಸ್. ಸಂಗ್ರೇಶಿ ಅವರು ಭಾಗವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ  ಈ ವಿಶ್ವವಿದ್ಯಾಲಯದ ಮಹತ್ವವನ್ನು ವಿವರಿಸುವ ಮೂಲಕ, “ಈ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ಹಳ್ಳಿಗಳಾದ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅವಕಾಶಗಳನ್ನು ನೀಡುತ್ತದೆ. ಹಳ್ಳಿಯವರು ಶಿಕ್ಷಣ, ಕೃಷಿ, ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಅನೇಕ ಮಾರ್ಗಗಳನ್ನು ಅನ್ವೇಷಿಸಲು, ಈ ವಿಶ್ವವಿದ್ಯಾಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಚ್. ಕೆ. ಪಾಟೀಲರ ಕೊಡುಗೆಗಳು ಈ ಕ್ಷೇತ್ರದ ವೃದ್ಧಿಗೆ ನವಚೇತನ ನೀಡಿದಂತಿವೆ” ಎಂದು ಹೇಳಿದರು.
ಅವರು ಮುಂದುವರೆದು, ಯುವಕರಿನ್ನು ಉದ್ದೇಶಿಸಿ “ನೀವು ಪ್ರತಿಯೊಬ್ಬರೂ ನಿಮ್ಮ ಹಳ್ಳಿಯ ಅಭಿವೃದ್ಧಿಗೆ ಕೈಲಾದಂತೆ ಸೇವೆ ಸಲ್ಲಿಸುವ ಮೂಲಕ ದೇಶ ಮತ್ತು ಸಮಾಜಕ್ಕೆ ಪ್ರೇರಣೆಯಾದವರಾಗಿರಿ. ಯುವಕರಲ್ಲಿ ಅಪಾರ ಶಕ್ತಿ ಇರುತ್ತದೆ, ಅದು ಭಾರತ ದೇಶವನ್ನು ನವೀಕರಿಸಲು ಅಗತ್ಯವಾಗಿದೆ” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಪ್ರತಾಪ್ ಲಿಂಗಯ್ಯ ರಾಜ್ಯ ಎನ್ಎಸ್ಎಸ್ ಅಧಿಕಾರಿಗಳು, ಕರ್ನಾಟಕ ಸರ್ಕಾರ, ಅವರು ಮಾತನಾಡಿ, ಯುವಜನರಿಗೆ ತಮ್ಮ ಗುರಿಯನ್ನು ಪ್ರತ್ಯಕ್ಷವಾಗಿ ಗುರುತಿಸಲು, ಆತ್ಮವಿಶ್ವಾಸದಿಂದ ಬದುಕಲು ಹಾಗೂ ಸಮಾಜದ ಉತ್ತಮಕ್ಕಾಗಿ ಕಾರ್ಯನಿರ್ವಹಿಸಲು ಎನ್ಎಸ್ಎಸ್ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವದ ಜೊತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಎನ್ಎಸ್ಎಸ್ ಹೊಂದಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಅವರು ಅಧ್ಯಕ್ಷತೆಯನ್ನು ವಹಿಸಿ, ಯುವಜನರ ಸಬಲೀಕರಣ ಮತ್ತು ಸಮಾಜಕ್ಕೆ ಅವರ ಪಾತ್ರವನ್ನು ವಿವರಿಸಿ ಪ್ರೋತ್ಸಾಹಿಸಿದರು.
ನಂತರ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್. ಎಸ್. ಎಸ್. ಅಧಿಕಾರಿಗಳು ಮತ್ತು ರಾಜ್ಯದ ಹನ್ನೊಂದುವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಮತ್ತು ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಎನ್. ಎಸ್. ಎಸ್. ಸಮಿತಿಯ ಸದಸ್ಯರು ಮತ್ತು ವಿವಿಧ ನೂತನ ಯೋಜನೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಲು ಪ್ರೇರಿತರಾದರು.
ಎನ್. ಎಸ್. ಎಸ್. ಅಧಿಕಾರಿ ಡಾ. ಚೈತ್ರ ಅವರು ಸಮಾರಂಭವನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ವಿಶ್ವವಿದ್ಯಾಲಯದ ಎನ್. ಎಸ್. ಎಸ್. ಸ್ವಯಂ ಸೇವಕ ವಿದ್ಯಾರ್ಥಿಗಳು ಕು. ಕೃಷ್ಣ ಮತ್ತು ಶ್ವೇತ ಕೆ. ಅವರು ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮವು  ಐದು ದಿನಗಳವರೆಗೆ ವಿವಿಧ ಸಂಸ್ಕೃತಿಕ ಸ್ಪರ್ಧಾ ಚಟುವಟಿಕೆಗಳು ಮತ್ತು ವಿಶೇಷ ಉಪನ್ಯಾಸಗಳ  ಮೂಲಕ ಜರುಗಿತು. ಸ್ಪರ್ದೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net