

ಗದಗ: ರೈತರು ತಮ್ಮ ಹೊಲದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಯುವ ಮೂಲಕ ಅಮೂಲ್ಯ ನೈಸಗಿರ್ಕ ಸಂಪತ್ತಿನ ರಕ್ಷಣೆಗೆ ಮುಂದಾಗಬೇಕು. ಈ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಸಂಸ್ಥೆಗಳು ಸಹಕರಿಸಬೇಕು ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಹೇಳಿದರು.
ಸಮೀಪದ ನಾಗಾವಿಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಕೌಶಲ ವಿಕಾಸ ಭವನದಲ್ಲಿ ಅರಣ್ಯ ಇಲಾಖೆ, ಆಯುಷ್ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಧರಿತ್ರಿ ಕೃಷಿ ಪರಿವಾರ ಮತ್ತು ಕಪ್ಪತ್ತಮಲ್ಲೇಶ್ವರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ನಡೆದ ಸಸ್ಯ ಸಂಜೀವಿನಿ ಔಷಧಿ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಒಕ್ಕೂಟದ ಸಮ್ಮೇಳನ, ಸಂವಾದ ಮತ್ತು ಸಮನ್ವಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಳಿವಿನಂಚಿನಲ್ಲಿ ಇರುವ ಔಷಧೀಯ ಸಸ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಒಕ್ಕೂಟ ಗಮನ ಹರಿಸಬೇಕು. ರೈತರಿಗೆ ಉಪಯುಕ್ತವಾಗುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಸದಾ ಉತ್ಸುಕರಾಗಿದ್ದೇವೆ. ವಿಶ್ವವಿದ್ಯಾಲಯದ ಮುಖ್ಯ ಉದ್ದೇಶಗಳಲ್ಲಿ ಒಂದಾದ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಈ ಕಾರ್ಯಕ್ರಮ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.
ಕಪ್ಪತ್ತಗುಡ್ಡದ ಸುತ್ತಲಿನ ನೈಸಗಿರ್ಕ ವೈವಿಧ್ಯತೆ, ಔಷಧ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿಯ ಅಗತ್ಯತೆ ಕುರಿತು ವಿಸತವಾಗಿ ಅವರು ಮಾತನಾಡಿದರು. ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಔಷಧಿ ಸಸ್ಯ ತಜ್ಞರಾದ ಬಿ.ಎಂ. ನಾಗಭೂಷಣ್, ಜಗನ್ನಾಥ್ ರಾವ್, ಸಸ್ಯ ಸಂಜೀವಿನಿ ಮುಖ್ಯ ಸಂಯೋಜಕ ಡಿ. ಕೆ. ಮಹೇಶ್ ಕುಮಾರ್, ರೈತ ಜಿ. ಆರ್. ಓದುಗೌಡರ ಮಾತನಾಡಿದರು.
ದೇವರೆಡ್ಡಿ ಅಗಸನಕೊಪ್ಪ, ರುದ್ರಣ್ಣ ಗುಳಗುಳಿ ಹಾಗೂ ವಿಶ್ವವಿದ್ಯಾಲಯ ತೋಟಗಾರಿಕೆ ಅಧೀಕ್ಷಕ ಉಡಚಪ್ಪ ಪೂಜಾರ ಕಾರ್ಯಕ್ರಮ ಸಂಯೋಜಿಸಿದರು.