

ಸಚಿವ ಎಚ್.ಕೆ.ಪಾಟೀಲರು ರೈತರಿಗೆ ನೀಡಿದ ಮಾತು ಪಾಲಿಸಲಿ: ಬಿ.ಎಸ್.ಚಿಂಚಲಿ
ಗದಗ: ಸತತ 14 ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ಉತ್ತರ ಕರ್ನಾಟಕ ಮಹಾಸಭಾದಿಂದ ರೈತರ ವಿವಿಧ ಬೇಡಿಕೆಗಳ ಇಡೆರಿಕೆಗಾಗಿ ಜಿಲ್ಲೆಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಭಾನುವಾರ ಜಿಲ್ಲಾಡಳಿತದ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ರೈತರು ಸರ್ಕಾರದ ವಿರುದ್ಧ ಘೋಷಣೆ, ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತವಾಡಿದ ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷ ಬಿ.ಎಸ್.ಚಿಂಚಲಿ ಗದಗ ಜಿಲ್ಲೆಯ ನಾಗಾವಿ ಗ್ರಾಮದ ಹತ್ತಿರ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದು ಸ್ವಾಗತಾರ್ಹವಾದ ಕೆಲಸ. ಆದರೆ, ಈ ವಿಶ್ವವಿದ್ಯಾಲಯದ ಹೆಸರಿನಲ್ಲಿ ನೂರಾರು ರೈತ ಕುಟುಂಬಗಳನ್ನು ಒಕ್ಕಲಿಬಿಸಿ ಯಾವುದೇ ಪರಿಹಾರ ಹಾಗೂ ಜಮೀನು ನೀಡದೆ ರೈತರನ್ನು ಬೀದಿಗೆ ತಳ್ಳಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಲೆತಲಾಂತರಗಳಿAದ ಆ ಜಮೀನಿನ ಮೇಲೆ ಅವಲಂಬಿತರಾಗಿದ್ದ ರೈತರ ಸಭೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಹಾಗೂ ಅಧಿಕಾರಿಗಳು ನಡೆಸಿ, “ನಿಮ್ಮ ಜಮೀನಿನಲ್ಲಿ ವಿಶ್ವವಿದ್ಯಾಲಯ ಮಂಜೂರಾಗಿದೆ, ಜಮೀನು ಬಿಟ್ಟುಕೊಡಿ. ಬದಲಾಗಿ ನಿಮಗೆ ಬೇರೆಡೆ ಜಮೀನು ಖರೀದಿಸಿ ಕೊಡಲಾಗುತ್ತದೆ. ಜೊತೆಗೆ ಸರಕಾರದಿಂದ ಸೂಕ್ತ ಪರಿಹಾರ ಹಾಗೂ ಧನಸಹಾಯ ದೊರಕುತ್ತದೆ” ಎಂದು ಭರವಸೆ ನೀಡಿದ್ದರು.
ಸಚಿವರ ಮಾತಿಗೆ ನಂಬಿಕೆ ಇಟ್ಟು ರೈತರು ತಮ್ಮ ಜಮೀನನ್ನು ಬಿಟ್ಟುಕೊಟ್ಟರು. ಆದರೆ, ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಹಲವು ವರ್ಷಗಳಾದರೂ ರೈತರಿಗೆ ಪರಿಹಾರ ದೊರೆಯದೇ, ಬದಲಿಗೆ ಬೇರೆಡೆ ಜಮೀನನ್ನೂ ಮಂಜೂರು ಮಾಡದೇ ಸರ್ಕಾರ ನಿರ್ಲಕ್ಷ್ಯ ತೋರಿದೆ. ರೈತರು ಅನೇಕ ಬಾರಿ ಮನವಿ ಮಾಡಿದರೂ, ಸಚಿವರಿಂದ ಕೇವಲ ತಾತ್ಸಾರ ಉತ್ತರ ಸಿಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2023ರಲ್ಲಿ ರೈತರು ಉತ್ತರ ಕರ್ನಾಟಕ ಮಹಾಸಭಾದ ನೇತೃತ್ವದಲ್ಲಿ ಗದಗ ಜಿಲ್ಲಾ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ, ಉಸ್ತುವಾರಿ ಸಚಿವರು ಸ್ವತಃ ಧರಣಿ ಸ್ಥಳಕ್ಕೆ ಬಂದು “ಬಹಳ ಬೇಗ ಪರಿಹಾರ ನೀಡಲಾಗುತ್ತದೆ” ಎಂದು ಭರವಸೆ ನೀಡಿದ್ದರು. ಅದನ್ನು ನಂಬಿ ರೈತರು ಧರಣಿಯನ್ನು ಹಿಂತೆಗೆದುಕೊAಡು ಎರಡು ವರ್ಷ ಕಳೆದರೂ ಸಹ ರೈತರಿಗೆ ಯಾವುದೇ ಪರಿಹಾರ ದೊರೆಯದೇ ಇರುವುದರಿಂದ, ರೈತರು ಕಳೆದ 14 ದಿನಗಳಿಂದ ಗದಗ ಜಿಲ್ಲಾ ಕಚೇರಿ ಎದುರು ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೂ ಸಚಿವರು ತಲೆ ಕೆಡಿಸಿಕೊಳ್ಳದೇ ಇತ್ತ ಕಣ್ಣೆತ್ತೂ ನೋಡದಿರುವುದು ವಿಷಾದನೀಯ ಸಂಗತಿಯಾಗಿದೆ.
ಸರ್ಕಾರವು “ಲಕ್ಷಾಂತರ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿದ್ದೇವೆ” ಎಂಬ ಹೇಳಿಕೆಯನ್ನು ನೀಡುತ್ತಿದ್ದುದು ಕೇವಲ ಜನಮನ ಗೆಲ್ಲುವ ಊಹಾಪೋಹದ ಮಾತೇ ಹೊರತು ವಾಸ್ತವಕ್ಕೆ ಸಂಬAಧಪಟ್ಟಿಲ್ಲ ಎಂದು ಅವರು ಟೀಕಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಉತ್ತರಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಎನ್.ಟಿ.ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ, ಫಿರೋಜ ನಧಾಪ್ ಸೇರಿದಂತೆ ಜಿಲ್ಲೆಯ ಹಲವು ರೈತರು, ಮಹಿಳೆಯರು ಹಾಗೂ ಇನ್ನಿತರರು ಇದ್ದರು.
ಕೋಟ್ :
ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾನ್ಯ ಎಚ್.ಕೆ.ಪಾಟೀಲರು ತಮ್ಮ ಪ್ರಭಾವವನ್ನು ಬಳಸಿ ರೈತರಿಗೆ ತಾವು ನೀಡಿದ ಭರವಸೆಯನ್ನು ತಕ್ಷಣ ಪಾಲಿಸಬೇಕು, ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಈ ವಿಷಯವನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ, ಮಾನ್ಯ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿಲಿ..
- ಬಿ.ಎಸ್.ಚಿಂಚಲಿ,
ಮಾಜಿ ಅಧ್ಯಕ್ಷರು, ತಾ.ಪಂ ಗದಗ.