ರವಿ ಗುಂಜೀಕರ ನಿವೃತ್ತಿ ಅಂಗವಾಗಿ ಸರ್ಕಾರಿ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮ

06GDG03
Published on

ರವಿ ಗುಂಜೀಕರ ಅವರಲ್ಲಿ ಚುನಾಯಿತ ಪ್ರತಿನಿಧಿಗಳ ಕರ್ತವ್ಯಬದ್ಧತೆ ಇದೆ : ಎಸ್.ವ್ಹಿ ಸಂಕನೂರ

ಗದಗ : ಸಾಮಾನ್ಯವಾಗಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುವಂತೆ ಸರ್ಕಾರಗಳು ಚುನಾಯಿತ ಪ್ರತಿನಿಧಿಗಳಿಗೆ ನಿರ್ದೇಶನ ನೀಡುತ್ತವೆ, ಆದರೆ ಓರ್ವ ನಿವೃತ್ತ ಸರ್ಕಾರಿ ಅಧಿಕಾರಿಗಳಾಗಿ ಈ ಕಲ್ಯಾಣಕಾರ್ಯಕ್ಕೆ ಮುಂದಾಗಿರುವ ರವಿ ಗುಂಜೀಕರ ಅವರಲ್ಲಿ ಚುನಾಯಿತ ಪ್ರತಿನಿಧಿಗಳ ಕರ್ತವ್ಯದ್ಧತೆ ಕಾಣಬಹುದಾಗಿದೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯರಾದ ಎಸ್.ವ್ಹಿ ಸಂಕನೂರ ನುಡಿದರು.

ಅವರು ದಿ.05 ರಂದು ಇಲ್ಲಿನ ವೀರನಾರಾಯಣ ದೇವಸ್ಥಾನದ ಹತ್ತಿರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಗುಂಜೀಕರ ಅವರ ನಿವೃತ್ತಿ ಅಂಗವಾಗಿ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿದ ಸರ್ಕಾರಿ ಹಿರಿಯ ಕನ್ನಡ ಗಂಡುಮಕ್ಕಳ ಶಾಲೆ ನಂ.2ರ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,

ಸರ್ಕಾರಿ ನೌಕರರ ಸಾಂಕೇತಿಕ ನಿವೃತ್ತಿ ಕಾರ್ಯಕ್ರಮಗಳನ್ನು ಸಾಕಷ್ಟು ನೋಡಿದ್ದೇನೆ, ಆದರೆ ರವಿ ಗುಂಜೀಕರ ಅವರಂತೆ ತಮ್ಮ ನಿವೃತ್ತಿಯನ್ನು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಾರ್ಥಕಗೊಳಿಸಿದ ನಿದರ್ಶನಗಳು ಇರಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಮೇಲಧಿಕಾರಿಗಳ, ಸಾರ್ವಜನಿಕರ ಹಾಗೂ ಚುನಾಯಿತ ಪ್ರತಿನಿಧಿಗಳ ಒತ್ತಡದಿಂದ ಬೇಸತ್ತು ನಿವೃತ್ತಿಯಾದರೆ ಸಾಕೆಂಬ ಮನೋಭಾವ ತಲುಪಿದ್ದಾರೆ, ಇಂಥ ಸಂಧಿಗ್ದ ಸ್ಥಿತಿಯಲ್ಲಿ ಒಂದೂ ಕಪ್ಪುಚುಕ್ಕೆಗಳಿಲ್ಲದಂತೆ ವೃತ್ತಿ ಬದುಕನ್ನು ಪೂರೈಸಿ ನಿವೃತ್ತಿಯಲ್ಲೂ ಮಾದರಿಯಾಗಿರುವ ರವಿ ಗುಂಜೀಕರ ಅವರ ನಿವೃತ್ತಿ ಜೀವನ ಸಮಾಜಮುಖಿಯಾಗಿಯೂ, ಸುಖಕಾರವಾಗಿಯೂ ಇರಲಿ ಎಂದು ಹಾರೈಸಿದರು.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ, ವಿಶೇಷವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಕಣ್ಮುಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಇಂಥ ವಿಷಮ ಪರಿಸ್ಥಿತಿಯಲ್ಲಿ ತಾವು ಕಲಿತ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿರುವ ಗುಂಜೀಕರ ಹಾಗೂ ಅವರ ಅಭಿಮಾನಿ ಬಳಗದ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯರಾದ ಜಿ.ಎಸ್ ಹಿರೇಮಠ ಮಾತನಾಡಿ, ಇಲ್ಲಿ ಹೆಣ್ಣಮಕ್ಕಳ ಹಾಗೂ ಗಂಡುಮಕ್ಕಳ ಶಾಲೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದು, ಎರಡೂ ಬಡಮಕ್ಕಳ ಶಾಲೆಗಳಾಗಿವೆ. ರವಿ ಗುಂಜೀಕರ ಅವರು ಎರಡೂ ಶಾಲೆಗಳ ಅಭಿವೃದ್ಧಿಗೂ ನೆರವಾಗಬೇಕು ಎಂದು ಮನವಿ ಮಾಡಿದರು.

ಶಾಲಾ ಶಿಕ್ಷಕರ ಸಂಘಟನೆಗಳು ಹಾಗೂ ಗಂಡುಮಕ್ಕಳ ಸರ್ಕಾರಿ ಶಾಲೆ ನಂ.2 ರ ವತಿಯಿಂದ ನಿವೃತ್ತಿಗೊಂಡ ರವಿ ಗುಂಜೀಕರ ಹಾಗೂ ನೂತನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವಿ ಗುಂಜೀಕರ ಮಾತನಾಡಿ, ಇದೇ ಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದ ಅರುಣಕುಮಾರ ಚವ್ಹಾಣ ಈಗ ಉತ್ತಮ ಉದ್ದಿಮೆದಾರನಾಗಿ ಬೆಳೆದಿದ್ದು ನಾವಿಬ್ಬರೂ ಕೂಡಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಗೊಳಿಸುವ ಯೋಜನೆ ಹಾಕಿಕೊಂಡಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸರ್ಕಾರದ ಜೊತೆಗೆ ಸಮುದಾಯದ ಪಾತ್ರ ಮುಖ್ಯವಾಗಿದ್ದು, ಇಂಥ ಸಾಮಾಜಿಕ ಕಾರ್ಯಗಳ ಮೂಲಕ ನನ್ನ ನಿವೃತ್ತಿ ಸಾರ್ಥಕವಾಗಿದೆ ಎಂದರು.

ಚಾAದಸಾಬ ಕೊಟ್ಟೂರ ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಗರಸಭೆ ಸದಸ್ಯೆ ಶ್ರೀಮತಿ ಮುಲ್ಲಾ, ಅರುಣಕುಮಾರ ಚವ್ಹಾಣ, ವಿ.ಎಂ ಹಿರೇಮಠ, ಗ್ರಾಮೀಣ ಬಿಇಓ ನಡುವಿನಮನಿ, ಕಾಸಿಮಸಾಬ ತಹಶೀಲ್ದಾರ, ಆರ್.ವ್ಹಿ ಸಂಕಣ್ಣವರ, ಉಮೇಶ ಹಿರೇಮಠ, ಸುರೇಶ ಕೊಪ್ಪದ, ಶಿವಯೋಗಿ ಬಂಡಿ, ಶಾಲೆಯ ಪ್ರಧಾನ ಶಿಕ್ಷಕಿ ಎಫ್.ಎ ದಲಬಂಜನ, ಪಿ.ಎ ಕಣಾಜ, ಐ.ಕೆ ಕಮ್ಮಾರ ಸೇರಿದಂತೆ ರವಿ ಗುಂಜೀಕರ ಅಭಿಮಾನಿಗಳು ಹಾಜರಿದ್ದರು.

ಬಾಕ್ಸ್

“ತಾವು ಕಲಿತ ಶಾಲೆಯನ್ನು ಬಹುತೇಕರು ಮರೆತುಹೋಗುವುದು ಸಹಜ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ರವಿ ಗುಂಜೀಕರ ಅವರು ವಿದ್ಯೆ ಕಲಿತ ಶಾಲೆಯನ್ನೇ ದತ್ತು ತೆಗೆದುಕೊಂಡು ಅದರ ಏಳಿಗೆಗೆ ಮುಂದಾಗಿದ್ದಾರೆ. ತಾವು ಕಲಿಯುವಾಗ ಅನೇಕ ಕೊರತೆಗಳನ್ನು ಎದುರಿಸಿದ್ದ ರವಿ ಅವರು ಈಗ ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ಕೊರತೆ ಉಂಟಾಗದAತೆ ಶಾಲೆಯ ಸರ್ವಾಂಗೀಣ ಪ್ರಗತಿಯ ಕನಸು ಹೊತ್ತಿದ್ದಾರೆ”

ಎಸ್.ಆರ್ ಹಿರೇಮಠ, ಉಪಾಧ್ಯಕ್ಷರು ರವಿ ಗುಂಜೀಕರ ಅಭಿಮಾನಿ ಬಳಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net