ಮಾರ್ಚ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

IMG-20240229-WA0105(1)
Published on

23 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಲಿದ್ದಾರೆ 12,308 ವಿದ್ಯಾರ್ಥಿಗಳು

ಗದಗ: ಇಂದಿನಿಂದ (ಮಾ. 1ರಿಂದ) ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಮಾ. 22ರ ವರೆಗೆ ಜರುಗಲಿವೆ.ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗ ಸೇರಿ ಒಟ್ಟು 12,308 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲಾಡಳಿತ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಸುರಕ್ಷಿತ ಹಾಗೂ ಸುಸಜ್ಜಿತವಾಗಿ ಪರೀಕ್ಷೆ ನಡೆಸಲು ಸನ್ನದ್ಧವಾಗಿದ್ದು ಪ್ರಶ್ನೆ ಪತ್ರಿಕೆ ಸರಬರಾಜು ಕೇಂದ್ರವಾದ ಜಿಲ್ಲಾ ಖಜಾನೆ ಕಚೇರಿ ಸೇರಿದಂತೆ 23 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿಗೊಳಿಲಾಗಿದೆ.  

ಗದಗ-ಬೆಟಗೇರಿ ಅವಳಿ ನಗರದಲ್ಲಿ 9, ಗಜೇಂದ್ರಗಡ 5, ರೋಣ 1, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿಯಲ್ಲಿ ತಲಾ 2ರಂತೆ ಒಟ್ಟು 23 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲೂ 500ರಿಂದ 1200 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಿಗೊಬ್ಬರಂತೆ 23 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ವೀಕ್ಷಕರನ್ನಾಗಿ, ತಲಾ ಪರೀಕ್ಷಾ ಕೇಂದ್ರದಲ್ಲಿ 4 ಜನರಂತೆ ಪ್ಲೆಯಿಂಗ್ ಸ್ಕ್ವಾಡ್, ಜಿಲ್ಲಾ ಸ್ಕ್ವಾಡ್ ನೇಮಕ ಮಾಡಲಾಗಿದೆ. 

11,146 ರೆಗ್ಯುಲರ್ ವಿದ್ಯಾರ್ಥಿಗಳು, 736 ರಿಪಿಟರ್ಸ್ ಹಾಗೂ 426 ಖಾಸಗಿ ವಿದ್ಯಾರ್ಥಿಗಳು ಸೇರಿ ಒಟ್ಟು 12,308 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿದ್ದಾರೆ.

ಪರೀಕ್ಷೆಗೆ ಸಜ್ಜಾದ ವಿದ್ಯಾರ್ಥಿಗಳು: ತರಬೇತಿ, ಉಪನ್ಯಾಸ, ಕಲಿಕೆಯತ್ತ ಗಮನ, ವಿದ್ಯಾರ್ಥಿಗಳ ಅಧ್ಯಯನ ಪ್ರತಿದಿನ ಪರಿಶೀಲನೆ, ಪರೀಕ್ಷೆ ಹೇಗೆ ಎದುರಿಸುವುದು, ಬರಹ ಶುದ್ಧತೆ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ.

ಕಟ್ಟು ನಿಟ್ಟಿನ ಕ್ರಮ: ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು ಆಯಾ ದಿನದಂದು ಜಿಲ್ಲಾ ಖಜಾನೆ ಕಚೇರಿಯಿಂದ ರವಾನೆಯಾಗುವಂತೆ ವ್ಯವಸ್ಥೆ ಮಾಡಿಕೊಂಡಿದೆ. ಜತೆಗೆ ಪರೀಕ್ಷಾ ಗೌಪ್ಯ ಸಾಮಗ್ರಿ(ಪ್ರಶ್ನೆ ಪತ್ರಿಕೆ)ಗಳನ್ನು ವಿತರಿಸುವ ಮಾರ್ಗಾಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಟ್ರ‍್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ.  

ಪ್ರತಿಬಂಧಕಾಜ್ಞೆ ಜಾರಿ: 

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ. 1ರಿಂದ 22ರ ವರೆಗೆ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಜರುಗಲಿವೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಸುಗಮವಾಗಿ ಜರುಗಲು ಮತ್ತು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಪರೀಕ್ಷಾ ಸಮಯದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ಯಾಮರಾ ಹೊಂದಿರದ ಸಾಮಾನ್ಯ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದ್ದು ಉಳಿದ ಎಲ್ಲ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು, ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net