ಉರಿ ಬಿಸಿಲಿನಲ್ಲಿ ರೈತರ “ಉರುಳು ಸೇವೆ” ಮೂಲಕ ಬೃಹತ್ ಪ್ರತಿಭಟನೆ

IMG-20250906-WA0020
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಮುಳಗುಂದ ನಾಕಾದಿಂದ ಜಿಲ್ಲಾಡಳಿತ ಭವನದವರೆಗೆ ಬಗರಹುಕುಂ ಸಾಗುವಳಿದಾರ ರೈತರು ಶನಿವಾರ ಉರಿ ಬಿಸಿಲಿನಲ್ಲಿ “ಉರುಳು ಸೇವೆ” ಮೂಲಕ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಸತತ 20 ದಿನಗಳಿಂದ ಉತ್ತರ ರ‍್ನಾಟಕ ಮಹಾಸಭಾ ನೇತೃತ್ವದಲ್ಲಿ ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ರೈತರು ಹಾಗೂ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ, ಸುಡುವ ದಾರಿಯ ಮೇಲೆ ಮಲಗಿ ಉರುಳುತ್ತಾ, ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ, ಜಿಲ್ಲಾಡಳಿತ ಭವನದವರೆಗೆ ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಸಿದರು.
ಅವರು “ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡಬೇಕು, ನಾಗಾವಿ ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಅಥವಾ ರ‍್ಯಾಯ ಜಮೀನು ನೀಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ, ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ವಾರಕ್ಕೊಮ್ಮೆ ಜಿಲ್ಲೆಗೆ ಬಂದು ಕರ‍್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇಪ್ಪತ್ತು ದಿನಗಳಿಂದ ರೈತರು ಮನೆಯಿಂದ ದೂರವಿದ್ದು, ತೀವ್ರ ಬಿಸಿಲಿನಲ್ಲಿ ಧರಣಿ ಕುಳಿತಿರುವ ವಿಚಾರ ಅವರ ಗಮನಕ್ಕೆ ಬರುತ್ತಿಲ್ಲವೇ? ಕಳೆದ ಬಾರಿ ನಮ್ಮ ಸಮಸ್ಯೆ ಪರಿಹರಿಸುತ್ತೇನೆಂದು ಭರವಸೆ ನೀಡಿದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ಸಂಕಷ್ಟವನ್ನು ಕಡೆಗಣಿಸುವುದು ಸರಿಯಲ್ಲ. ಸಮಸ್ಯ ಪರಿಹರಿಸುವ ವರೆಗೂ  ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
 ರಮೇಶ ಮಜ್ಜೂರ, ಚಂಬಣ್ಣ ಪರಸಾಪೂರ, ಶಾಂತವ್ವ ನಾಗಾವಿ, ಸೋಮನಾಥ ಜಾಧವ, ನಾಮದೇವ ಮಾಂಡ್ರೆ, ನಬಿಸಾಬ ನದಾಫ, ಈಶಪ್ಪ ಕಡಕೋಳ, ದ್ಯಾಮಣ್ಣ ಲಮಾಣಿ, ಫಿರೋಜ್ ನದಾಫ್, ಖಾದೀರ್ ಸಾಬ್, ಮಹಮ್ಮದ್ ಶಲವಡಿ ಸೇರಿದಂತೆ ನಾಗಾವಿ, ಬೆಳಧಡಿ, ಶಿರಹಟ್ಟಿ, ಲಕ್ಷ್ಮೇಶ್ವರ, ಎಲ್ಲಾಪೂರ, ಮುರುಡಿ ಸೇರಿದಂತೆ ರೈತರು ಇದ್ದರು.
ರೊಟ್ಟಿ ಚಳುವಳಿ ಇಂದು..!
ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ದೀಡ್ ನಮಸ್ಕಾರ, ಉರುಳು ಸೇವೆ, ಪೊರಕೆ ಚಳುವಳಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಮುಂದುವರಿದ ಭಾಗವಾಗಿ ಭಾನುವಾರ “ರೊಟ್ಟಿ ಬಡಿಯೋ ಚಳುವಳಿ” ಆಯೋಜಿಸಲಾಗಿದೆ ಎಂದು  ರವಿಕಾಂತ ಅಂಗಡಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net