ಕಡಲೆ ಬಾಕಿ ಬಿಲ್​ ವಿಳಂಬ! ಮೂರನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

oplus_2
oplus_2
Published on

ಕ್ರಿಮಿನಾಶಕ ಸೇವಿಸಿದ ಮಹಿಳಾ ಪ್ರತಿಭಟನಾಕಾರರು! ಪ್ರಾಣಾಪಾಯದಿಂದ ಪಾರು

ವಿಜಯವಾಣಿ ಸುದ್ದಿಜಾಲ ಗದಗ

ಕಡಲೆ ಬಾಕಿ ಹಣ ಬಿಡುಗಡೆಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ನಡೆಸುತ್ತಿರುವ ಅಹೋ ರಾತ್ರಿ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ತೀವ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ ಪೊಲೀಸರ ಮತ್ತು ರೈತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಮುಂದುವರಿದು ಇಬ್ಬರು ಪ್ರತಿಭಟನಾ ನಿರತ ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಟನೆಯೂ ಜರುಗಿತು.

ಬುಧವಾರ ಏನಾಯಿತು?

ಎರಡನೇ ದಿನಕ್ಕೆ ಕಾಲಿಟ್ಟ ರೈತ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಹೋರಾಟಗಾರರು ಜಿಲ್ಲಾಡಳಿತ ಭವನದ ಗೇಟ್​ಗೆ ಜಾನುವಾರು ಕಟ್ಟಿ, ಮೇವು ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು. ಮಹಿಳಾ ಪ್ರತಿಭಟನಾಕಾರರು ಜಿಲ್ಲಾಡಳಿತ ಮುಂಭಾಗದ ರಸ್ತೆಯಲ್ಲಿ ಊರುಳಾಡಿ, ಅಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಮುಂಭಾಗದಲ್ಲಿನ ಹೆದ್ದಾರಿ ಬಂದ್​ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಸಂಚಾರವು ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನೆ ಗಂಟೆಗಳ ಕಾಲ ನಡೆದರೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆ ರೈತರು ಆಕ್ರೋಶ ಹೆಚ್ಚಾಗಿತ್ತು.

ಹೆದ್ದಾರಿಯಲ್ಲಿ ಹೊರಳಾಡಿ ಪ್ರತಿಭಟನೆ.

ಹೆದ್ದಾರಿ ಮಧ್ಯದಲ್ಲಿಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರು ಸರ್ಕಾರದ ನಡೆಯನ್ನು ಖಂಡಿಸಿ ಹೆದ್ದಾರಿಯಲ್ಲಿ ಹೊರಳಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಶವದ ಮುಂದೆ ಅಳುವಂತೆ ಸರ್ಕಾರವೇ ಸತ್ತು ಹೋಗಿದೆ ಎಂದು ಅಳುತ್ತಲೇ ಪ್ರತಿಭಟನೆ ಮಾಡಿದರು. ಹೆದ್ದಾರಿಯಲ್ಲಿ ಹೊರಳಾಡುತ್ತಿದ್ದ ರೈತ ಮಹಿಳೆಯರನ್ನು ಸಮಾಧಾನ ಪಡಿಸಲು ಮಹಿಳಾ ಪೊಲೀಸ್​ ಸಿಬ್ಬಂದಿಗಳು ಪರದಾಡಿದರು. ಈ ವೇಳೆ ಆತ್ಮಹತ್ಯೆ ಪ್ರಯತ್ನ ಜರುಗಿತು.

ರೈತ ಮಹಿಳೆಯರು ವಿಷ ಸೇವನೆ:

ಪ್ರತಿಭಟನೆ ವೇಳೆ ಇಬ್ಬರೂ ರೈತ ಮಹಿಳೆಯರು ಏಕಾಏಕಿ ಕೈಯಲ್ಲಿದ್ದ ಕ್ರಿಮಿನಾಶಕ ಬಾಟಲಿ ತೆಗೆದು ವಿಷ ಸೇವನೆ ಮಾಡಿದರು. ಕ್ರಮಿನಾಶಕ ಸೇವಿಸುತ್ತಿದ್ದಂತೆ ಕೂಗಾಟ, ದಿಕ್ಕಾರ ಘೋಷಣೆ ಹೆಚ್ಚಾಯಿತು. ಕೆಲಹೊತ್ತು ಪ್ರತಿಭಟನಾಕಾರರು ವಿಚಲಿತಗೊಮಡರು. ತಕ್ಷಣವೇ ಸ್ಥಳದಲ್ಲಿದ್ದ ಆ್ಯಂಬುಲೆನ್ಸ್​ ಮೂಲಕ ವಿಷಸೇವನೆ ಮಾಡಿದ್ದ ರೈತ ಮಹಿಳೆಯರನ್ನು ಸರಸ್ವತಿ ದಾಸರ, ಗೀತಾ ಬಾಲಪ್ಪನವರ ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗಾಗಿ ದಾಖಲಿಸಲಾಯಿತು.

ರಸ್ತೆ ತಡೆ ಹಿಂದಕ್ಕೆ

ವಿಷ ಸೇವನೆ ಪ್ರಕರಣದಿಂದ ಗೊಂದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಎಸ್ಪಿ ಬಿ.ಎಸ್​.ನೇಮಗೌಡ ಸ್ಥಳಕ್ಕೆ ಆಗಮಿಸಿ ರೈತ ಮಹಿಳೆಯರ ಮನಮೊಲಿಸಲು ಪ್ರಯತ್ನಿಸಿದರು. ಕೆಲ ಹೊತ್ತು ಪ್ರತಿಭಟನಾಕಾರರು ವಾಗ್ವಾದಕ್ಕೆ ಇಳಿದರು. ಜಿಪಂ ಸಿಇಓ ಸ್ಥಳಕ್ಕೆ ಬಂದ ನಂತರ ರಸ್ತೆ ತಡೆಯನ್ನು ಹಿಂದಕ್ಕೆ ಪಡೆದು ಮಾತುಕತೆ ಮುಂದಾದರು.

ಪ್ರತಿಭಟನೆ ಏಕೆ:

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್​ಆರ್​ಎಲ್​ಎಂ) ಒಕ್ಕೂಟದಡಿ ಕಾರ್ಯ ನಿರ್ವಹಿಸುವ ಮಹಿಳಾ ಸ್ವಸಹಾಯ ಸಂಗಳ ಮೂಲಕ ಜಿಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಮೆಳವಣಿಕಿ ಹಾಗೂ ತಾಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ಮದ್ಯಸ್ಥಿಕೆ ವಹಿಸಿ ದಾವಣಗೆರೆಯ ಮಾರುತಿ ಗೌಡ ಎಂಬುವರಿಗೆ 27 ಕೋಟಿ ಮೌಲ್ಯದ ಕಡಲೆ ಮಾರಾಟ ಮಾಡಿದ್ದಾರೆ. ಅಂದಾಜು 20 ಕೋಟಿ ಪಾವತಿ ಆಗಿದೆ. ಬಾಕಿ ಉಳಿದ 6.50 ಕೋಟಿ ರೂ ಮೊತ್ತವನ್ನು ಖರಿದಿದಾರರು ಪಾವತಿಸಿಲ್ಲ. ಹಾಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net