ಬಂಜಾರರಿಗೆ ಮೋಸ ಮಾಡಿದ ಕಾಂಗ್ರೆಸ್ ಸರ್ಕಾರ: ಲೋಕೇಶ್ವರ ನಾಯ್ಕ

13GDG04
Published on
ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಸೋಮವಾರದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನೆ ಮತ್ತು ಅನಿರ್ಧಿಷ್ಟಾವಧಿಯ ಅಹೋರಾತ್ರಿ ಧರಣಿ ಗುರುವಾರ 9ನೇ ದಿನದತ್ತ ತಲುಪಿದೆ.
ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಮತ್ತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಸೋಮವಾರದಂದು ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ನಿಗದಿತ ವೇಳಾಪಟ್ಟಿಯಂತೆ ಗದಗ ತಾಲೂಕಿನ ಅಡವಿಸೋಮಾಪುರ (ಸಣ್ಣ ಹಾಗೂ ದೊಡ್ಡ ತಾಂಡಾ), ಮುಂಡರಗಿ ತಾಲ್ಲೂಕಿನ ಮುರಡಿ, ದಿಂಡೂರ ತಾಂಡಾ, ಶಿರಹಟ್ಟಿ ತಾಲೂಕಿನ ಕೆರಳ್ಳಿ ತಾಂಡಾ, ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಮತ್ತು ಕೊಂಡಿಕೊಪ್ಪ ತಾಂಡಾ, ಗಜೇಂದ್ರಗಡ ತಾಲೂಕಿನ ಅಮರಗಟ್ಟಿ ಮತ್ತು ನರೇಗಲ್ ತಾಂಡಾಗಳ ಸಾವಿರಾರು ಬಂಜಾರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ದೂರದ ಊರುಗಳಿಗೆ ಕೂಲಿಯ ಕೆಲಸಕ್ಕಾಗಿ ತೆರಳುವ ಬಂಜಾರ ಜನರು ಸಲಕೆ ಹಾಗೂ ಗುದ್ದಲಿಯೊಂದಿಗೆ ನಗರದ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿ, ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ನೀತಿಯನ್ನು ತೀವ್ರವಾಗಿ ವಿರೋಧಿಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಭಾರತ ಸರ್ಕಾರದ ಯುವಜನ ಸೇವೆ ಪ್ರಾಧಿಕಾರದ ಸದಸ್ಯ ಶ್ರೀ ಲೋಕೇಶ್ವರ ನಾಯ್ಕ ಎಂ ಅವರು,
“ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಬಂಜಾರ ಜನಾಂಗಕ್ಕೆ ಅವೈಜ್ಞಾನಿಕ ಒಳಮೀಸಲಾತಿ ಜಾರಿಗೆ ತಂದಿದ್ದು, ಇದು ದೊಡ್ಡ ಮೋಸವಾಗಿದೆ. ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟ ರಾಜ್ಯ ಮಟ್ಟದಷ್ಟೇ ಅಲ್ಲದೆ, ದೇಶವ್ಯಾಪಿ ಹೋರಾಟಕ್ಕೆ ದಾರಿದೀಪವಾಗಲಿದೆ. ಕೊಲಂಬೊ ಸಮುದಾಯವು ಶತಮಾನಗಳಿಂದ ಹಿಂದುಳಿದ ಸಮಾಜವಾಗಿದ್ದು, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಇನ್ನೂ ಹಿಂದುಳಿದ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಒಳಮೀಸಲಾತಿ ವರ್ಗೀಕರಣ ಕ್ರಮವು ಈ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವಂತಾಗಿದೆ,” ಎಂದು ಹೇಳಿದರು.
ಅವರು ಮುಂದುವರೆದು, ಸರ್ಕಾರವು ಸಮುದಾಯದ ನಿಜವಾದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಪರಿಗಣಿಸಿ ನ್ಯಾಯಯುತ ವರ್ಗೀಕರಣ ಮಾಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಮೂಲದ ಖ್ಯಾತ ಉದ್ಯಮಿ ಸೋನು ಲಮಾಣಿ ಮಾತನಾಡಿ,
“ರಾಜ್ಯಾದ್ಯಂತ ಕೊಲಂಬೊ ಸಮಾಜದ ಯುವಕರು ಹಾಗೂ ಹಿರಿಯರು ಸಂಘಟಿತವಾಗಿ ಹೋರಾಟ ಆರಂಭಿಸಿದ್ದು, ಸರ್ಕಾರವು ಒಳಮೀಸಲಾತಿ ವರ್ಗೀಕರಣವನ್ನು ಪುನರ್‌ಪರಿಶೀಲಿಸಿ ಸಮನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು. ಸರ್ಕಾರದ ಗಮನ ಸೆಳೆಯಲು ಸದ್ಯದಲ್ಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಎದುರು ಧರಣಿ ಮತ್ತು ಮನವಿ ಸಲ್ಲಿಕೆ ನಡೆಯಲಿದೆ,” ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ರವಿಕಾಂತ್ ಅಂಗಡಿ, ಕೆ.ಸಿ. ನಭಾಪುರ, ಪರಮೇಶ್ ನಾಯಕ್, ಚಂದು ನಾಯಕ್, ಧನಸಿಂಗ್ ನಾಯಕ್, ಈಶ್ವರ್ ನಾಯಕ್, ಐ.ಎಸ್. ಪೂಜಾರ್, ಟಿ.ಡಿ. ಪೂಜಾರ್, ವಿಠಲ್ ತೋಟದ, ಮನೋಜ್ ಕಾರಬಾರ, ಸಂತೋಷ ಪವಾರ್, ತೇಜಪ್ಪ ನಾಯಕ್, ಷಣ್ಮುಖ ಆರವಾರಿ, ನಾನೊಬ್ಬ ಡಾವ್, ಭೀಮಪ್ಪ ಲಮಾಣಿ, ಪಾಂಡಪ್ಪ ನಾಯಕ್, ಹರಿಶ್ಚಂದ್ರ ರಾಮಪ್ಪ ಲಮಾಣಿ, ಪವಾರ್ ಶಿವಪ್ಪ ಲಮಾಣಿ, ರಾಮಪ್ಪ ನಾಯಕ್, ರಾಜು ನಾಯಕ್, ಸೋಮಪ್ಪ ಕಾರಬಾರಿ, ಛತ್ರಪ್ಪ ಲಮಾಣಿ, ತುಕರಾಮ್ ರಾಮಪ್ಪ ನಾಯಕ್, ಶಿವಪ್ಪ ಕಾರಬಾರಿ, ಶಂಕರ್ ಚವಾಣ್, ಫಕೀರೇಶ ನಾಯಕ್, ಪರಮೇಶ್ ಕರಾವಳಿ, ಲಾಲಪ್ಪ ಡಾವ್, ಪರಶುರಾಮ್ ಪೂಜಾರಿ ಮತ್ತು ಸೋಮಪ್ಪ ಲಮಾಣಿ ಸೇರಿದಂತೆ ಅಡವಿ ಸೋಮಾಪುರ, ಸಣ್ಣ ಹಾಗೂ ದೊಡ್ಡ ತಾಂಡೆ, ದಿಂಡೂರ, ಕೆರಳ್ಳಿ, ನರೇಗಲ್, ಅಮರಗಟ್ಟಿ, ಅಡರಕಟ್ಟಿ, ಮಹಾಲಿಂಗಪುರ, ಶಿಗ್ಲಿ, ದೊಡ್ಡೂರ ಕಾಲೋನಿ, ಕೊಡಗಾನೂರ, ಸರ್ಜಾಪೂರ ಕೊಂಡಿಕೊಪ್ಪ ಮುಂತಾದ ತಾಂಡಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೋಟ್:
“ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕ್ರಮದಿಂದ ಕೊಲಂಬೊ ಸಮುದಾಯದ ಜನರು ತೀವ್ರ ಅನ್ಯಾಯಕ್ಕೆ ಒಳಗಾಗಿದ್ದಾರೆ. ಸರ್ಕಾರವು ಒಳಮೀಸಲಾತಿ ವರ್ಗೀಕರಣದ ವೇಳೆ ನಿಜವಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ ರಾಜಕೀಯ ಒತ್ತಡದಡಿ ತೀರ್ಮಾನ ಕೈಗೊಂಡಿದೆ.”
— ರವಿಕಾಂತ್ ಅಂಗಡಿ,
ವಕೀಲರು ಮತ್ತು ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net