ಕನ್ನಡ ನಾಡು ನುಡಿಯ ಸೊಬಗು ಮೆರೆದ ಸಂಗೀತ ಸಂಜೆಯ ಸಡಗರ

WhatsApp Image 2025-11-04 at 4.58.25 PM
Published on

ಗದಗ: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮಹಿಮೆ ಸಾರುವ ಸುಂದರ ಸಂಗೀತ ಕಾರ್ಯಕ್ರಮ ನಗರದ ಭಾರತರತ್ನ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಸೋಮವಾರ ನಡೆಯಿತು.

ಖ್ಯಾತ ಗಾಯಕಿ ಸಾದ್ವಿನಿ ಕೊಪ್ಪ, ಗಾಯಕ ಡಾ. ಶ್ರೀರಾಮ ಕಾಸರ್, ತಬಲಾ ವಾದಕ ವಿಜಯಕುಮಾರ್, ಕೀಬೋರ್ಡ್ ವಾದಕ ಬಸವರಾಜ್, ಹಾಗೂ ರಿದಮ್ ಪ್ಯಾಡ್ ವಾದಕ ನಂದೀಶ್ ಬುವ ಮೊದಲಾದ ಪ್ರತಿಭಾವಂತ ಕಲಾವಿದರು ತಮ್ಮ ಮನಮೋಹಕ ಗಾಯನ ಮತ್ತು ವಾದ್ಯ ಕೌಶಲ್ಯದಿಂದ ಪ್ರೇಕ್ಷಕರ ಹೃದಯ ಗೆದ್ದರು.

ಕಾರ್ಯಕ್ರಮದ ಆರಂಭವು ಹುಯಿಲಗೋಳ ನಾರಾಯಣರಾಯರ "ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು" ಎಂಬ ಗೀತೆಯೊಂದಿಗೆ ಜರುಗಿತು. ಈ ಪದ್ಯದ ಧ್ವನಿಯಲ್ಲಿ ಕನ್ನಡದ ಆತ್ಮ ಪ್ರತಿಧ್ವನಿಸಿದಂತಾಯಿತು.

ಮುಂದಿನ ಹಂತದಲ್ಲಿ ರಾಜನ್–ನಾಗೇಂದ್ರ ಸಂಯೋಜನೆಯ "ಈ ದೇಶ ಚನ್ನಾ ಈ ಮಣ್ಣು ಚಿನ್ನ" (ಚಿತ್ರ: ಪರಸಂಗದ ಗೆಂಡೆತಿಮ್ಮ, 1978) ಗೀತೆಯನ್ನು ಡಾ. ಶ್ರೀರಾಮ ಕಾಸರ್ ಭಾವಪೂರ್ಣವಾಗಿ ಹಾಡಿ, ಹಾಲ್‌ನಲ್ಲಿದ್ದ ಪ್ರೇಕ್ಷಕರಲ್ಲಿ ದೇಶಭಕ್ತಿ ಮತ್ತು ಹೆಮ್ಮೆಯ ಜ್ವಾಲೆ ಉಕ್ಕಿಸಿದರು.

ಶಿಶುನಾಳ ಶರೀಪರ ಜನಪ್ರೀಯ ಗೀತೆಗಳಾದ “ತರವಲ್ಲ ತಗಿ ನಿನ್ನ ತಂಬೂರಿಸ್ವರ ಬರದೇ ಬಾರಿಸದಿರು ತಂಬೂರಿ”,

“ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ”,

ಹಾಗೂ “ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೋಡಗನ ಕೋಳಿ‌ ನುಂಗಿತ್ತ” ಈ ಗೀತೆಗಳು ಜನಮನದಾಳದಲ್ಲಿ ಕನ್ನಡ ನುಡಿಯ ಹಿರಿಮೆ ಮೂಡಿಸಿ, ಸಂಸ್ಕೃತಿಯ ಸೂಕ್ಷ್ಮ ಬಣ್ಣಗಳನ್ನು ಜೀವಂತಗೊಳಿಸಿತು.

ಕಾರ್ಯಕ್ರಮದಲ್ಲಿ “ನಮ್ಮ ಕಡೆ ಸಾಂಬಾರ ಅಂದ್ರೆ ನಿಮ್ಮ ಕಡೆ ತಿಳಿಯೋದಿಲ್ಲ” ಹಾಗೂ “ಕೇಳಿಸದೇ ಕಲ್ಲುಕಲ್ಲಿನಲಿ ಕನ್ನಡ ನುಡಿ” ಎಂಬ ಹಾಸ್ಯ–ಪ್ರಜ್ಞೆಯ ಶೈಲಿಯ ಕವನಗಳು ನಗುವಿನ ಜತೆ ಜಾಗೃತಿ ಮೂಡಿಸಿದವು.

ಅದಾದಮೇಲೆ ಕನ್ನಡದ ಚಿರಸ್ಮರಣೀಯ ನಟ ಡಾ. ರಾಜಕುಮಾರ ಅವರ ಚಿತ್ರ ಆಕಸ್ಮಿಕದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಜನಮನದ ಗೀತೆ ವೇದಿಕೆಯಲ್ಲೆ ನಾದಸಾಗರ ಸೃಷ್ಟಿಸಿತು. ಆ ಹಾಡಿನ ನಾದದೊಳು ಪ್ರೇಕ್ಷಕರು ಉತ್ಸಾಹದಿಂದ ತೇಲಿದರು.

ಕಾರ್ಯಕ್ರಮದ ಅಂತ್ಯದಲ್ಲಿ “ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ” (ಚಿತ್ರ: ಅಶ್ವಮೇಧ) ಹಾಗೂ “ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ” ಎಂಬ ಗೀತೆಗಳು ಶಾಂತಿ, ಸೌಹಾರ್ದ ಮತ್ತು ನಾಡಿನ ಏಕತೆ ಸಂದೇಶ ನೀಡಿದವು.

ಪ್ರತಿ ಹಾಡಿನ ಬಳಿಕ ಪ್ರೇಕ್ಷಕರ ಉತ್ಸಾಹಭರಿತ ಚಪ್ಪಾಳೆಗಳು ವೇದಿಕೆಯನ್ನು ಗದ್ದಲಗೊಳಿಸಿದವು. ಸಂಗೀತ ಸಂಜೆಯು ಕೇವಲ ಮನರಂಜನೆಗಷ್ಟೇ ಸೀಮಿತವಾಗಿರದೆ, ಕನ್ನಡ ನುಡಿ–ನಾಡಿನ ಗೌರವ, ಹೆಮ್ಮೆ ಮತ್ತು ಆತ್ಮೀಯತೆಯ ಹಬ್ಬವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net