ಒಳ ಮೀಸಲಾತಿ ಜಾರಿಯಾಗದಿದ್ದರೇ  ಹೋರಾಟ: ಉಡಚಪ್ಪ ಹಳ್ಳಿಕೇರಿ

11GDG04
Published on
ವಿಜಯವಾಣಿ ಸುದ್ದಿಜಾಲ ಗದಗ
ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸುವ ಹಕ್ಕನ್ನು ಆಯಾ ರಾಜ್ಯಗಳಿಗೆ ನೀಡಿದೆ. ಅದರಂತೆ ಹರಿಯಾಣ, ಪಂಜಾಬ್, ತೆಲಂಗಾಣ ಸೇರಿ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಯಾಗಿದೆ. ಆದರೆ, ಕರ್ನಾಟಕದಲ್ಲಿ ಇದೂವರೆಗೂ ಜಾರಿಗೆ ಬಂದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಗೆ ತರಬೇಕು. ಮಾದಿಗ ಸಮುದಾಯಕ್ಕೆ ಶೇ. 6 ರಷ್ಟು ಒಳ ಮಿಸಲಾತಿ ನೀಡಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ನಿಶ್ಚಿತ ಎಂದು ಸಮುದಾಯದ ಮುಖಂಡ ಉಡಚಪ್ಪ ಹಳ್ಳಿಕೇರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯಾಧೀಶ ಚಂದ್ರಚೂಡ ಅವರು ಒಳ ಮೀಸಲಾತಿ ಆದೇಶ ಮಾಡಿ ಒಂದು ವರ್ಷ ಕಳೆದಿದೆ. ದೇಶದ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಅನಷ್ಠಾನ ಮಾಡಿ ಶೋಷಿತರ ಬೆಂಬಲಕ್ಕೆ ಇತರೆ ರಾಜ್ಯಗಳು ನಿಂತಿವೆ. ರಾಜ್ಯ ಸರ್ಕಾರ ದತ್ತಾಂಶದ ನೇಪ ಇಟ್ಟುಕೊಂಡು ಇದೂವರೆಗೂ ಒಳ ಮೀಸಲಾತಿ ಜಾರಿ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಶೋಷಿತರ ಪರ ಎಂದು ಕೇವಲ ಭಾಷಣ ಮಾತ್ರ ಮಾಡುತ್ತಾರೆ. ಶೋಷಿತರ ಹೆಸರಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಆ. 16 ರಂದು ನಡೆಯಲಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಪ್ರೋ. ಸತೀಶ ಮಾತನಾಡಿ, ರಾಜ್ಯ ಸರ್ಕಾರ ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದೆ. ಸರ್ಕಾರ ಬಂದ ಮೊದಲನೇ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗೋಳಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಈಗ ದಲಿತರ ಮತ ಪಡೆದು ಅಧಿಕಾರ ನಡೆಸುತ್ತಿದ್ದಾರೆ. ಎಲ್ಲ ವರದಿಗಳು ಮಾದಿಗರು ಬಹುಸಂಖ್ಯಾತರರು ಎಂಸು ಸ್ಪಷ್ಟವಾಗಿ ಹೇಳಿವೆ. ಆದರೂ ಮೀಸಲಾತಿ ಜಾರಿಗೋಳಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾವನೂರ ವರದಿ ಜಾರಿ ಮಾಡುವಾಗ ವಿರೋಧ ಇತ್ತು. ವಿರೋಧದ ನಡುವೆಯೂ ಹಾವನೂರ ವರದಿಯನ್ನು ಅಂದಿನ ಸರ್ಕಾರ ಜಾರಿಗೋಳಿಸಿದೆ ಎಂದು ಆರೋಪಿಸಿದರು.
ಸಮುದಾಯದ ಮುಖಂಡ ಚಂದ್ರಶೇಖರ ಹರಿಜನ ಮಾತನಾಡಿ, ಬೆಂಗಳೂರಿನಲ್ಲಿ ಮೀಸಲಾತಿಗಾಗಿ ಸೋಮವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಗದಗ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಅಧಿವೇಶನದಲ್ಲಿ ಕಾನೂನು ಸಚಿವ ಎಚ್. ಕೆ ಪಾಟೀಲ ಮೀಸಲಾತಿ ಬಗ್ಗೆ ಪ್ರಸ್ತಾಪಿಸಬೇಕು. ಇಲ್ಲದಿದ್ದರೇ ಜಿಲ್ಲೆಯಲ್ಲಿ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸುತ್ತೇವೆ ಎಂದರು.
ಬಸವರಾಜ ಮುಳ್ಳಾಳ, ಶೇಖಪ್ಪ ಮಾದರ, ಗಣೇಶ ಹುಬ್ಬಳ್ಳಿ, ರಾಘವೇಂದ್ರ ಪರಾಪೂರ, ಸದಾನಂದ ಬಾರಿಗಿಡದ, ಮಂಜುನಾಥ ಗಜಾಕೋಶ, ರಾಘವೇಂದ್ರ ಗುತ್ತೆಮ್ಮನವರ ಉಪಸ್ದಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net