ಮೇ 31ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡಬೇಕು: ಪ್ರಭುರಾಜ್‌ ಕೊಡ್ಲಿ

IMG-20250420-WA0012
Published on
ಗದಗ: ‘ಸರ್ಕಾರ ಗಡುವು ಪಡೆದುಕೊಂಡಂತೆ ಮೇ 31ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲವಾದರೆ ಜೂನ್‌ 9ರಂದು ಮಾದಿಗ ಸಮಾಜದ ಲಕ್ಷಾಂತರ ಮಂದಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಕ್ರಾಂತಿಕಾರಿ ರಥಯಾತ್ರೆ ಸಂಯೋಜಕ ಪ್ರಭುರಾಜ್‌ ಕೊಡ್ಲಿ ಎಚ್ಚರಿಸಿದರು.
ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಸಾಮಾನ್ಯ ಹೋರಾಟಗಾರರಲ್ಲ. ಸಮಾಜದ ಒಳಿತಿಗಾಗಿ ಜೀವ ತ್ಯಾಗಕ್ಕೂ ಸಿದ್ಧರಿದ್ದೇವೆ. ಸರ್ಕಾರ ಹೇಳಿದಂತೆ ನಡೆಯದಿದ್ದರೆ ನಮ್ಮ ಹೆಣಗಳು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬೀಳುತ್ತವೆ. ಪ್ರಾಣತ್ಯಾಗ ಮಾಡಿಯಾದರೂ ಒಳಮೀಸಲಾತಿ ಸೌಲಭ್ಯ ಪಡೆಯುತ್ತೇವೆ’ ಎಂದು
‘ಒಳ ಮೀಸಲಾತಿ ನಮ್ಮ ಸಮಾಜದ ಮಕ್ಕಳ ಅಳಿವು ಉಳಿವಿನ ಪ್ರಶ್ನೆ. ಹಾಗಾಗಿ, ಜಾತಿ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ನಮ್ಮವರೆಲ್ಲರೂ ಜಾತಿ ಕಾಲಂನಲ್ಲಿ ಸ್ಪಷ್ಟವಾಗಿ ಮಾದರ ಅಂತಲೇ ಬರೆಯಿಸಬೇಕು. ನಿಖರ ಜನಸಂಖ್ಯೆ ತೋರಿಸಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
‘ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಈಗಾಗಲೇ ಭಾಸ್ಕರ್‌ ಪ್ರಸಾದ್‌ ಅವರ ನೇತೃತ್ವದಲ್ಲಿ 380 ಕಿ.ಮೀ.ಗಳ ಕ್ರಾಂತಿಕಾರಿ ಪಾದಯಾತ್ರೆ ನಡೆಸಿ ಬೆಂಗಳೂರಿನಲ್ಲಿ ಬೃಹತ್‌ ಕ್ರಾಂತಿಕಾರಿ ಸಮಾವೇಶ ಮಾಡಲಾಗಿದೆ. ನಮ್ಮ ಹೋರಾಟಕ್ಕೆ ಸರ್ಕಾರ ಬಗ್ಗದಿದ್ದಾಗ ಉಪವಾಸ ಸತ್ಯಾಗ್ರಹ ಆರಂಭಿಸಿದೆವು. ಆಗ, ಪೊಲೀಸರು ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ನಮ್ಮನ್ನು ಭೇಟಿ ಮಾಡಿಸಿದರು. ಒಳಮೀಸಲಾತಿ ಜಾರಿ ಆಗುವವರೆಗೆ ಯಾವುದೇ ನೇಮಕಾತಿ, ಬಡ್ತಿ ನೀಡಬಾರದು ಎಂದು ಆಗ್ರಹಿಸಿದ್ದೆವು. ಸರ್ಕಾರ ನೇಮಕಾತಿ ಸ್ಥಗಿತಗೊಳಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಬಡ್ತಿ ನೀಡಿದೆ. ಇದು ಖಂಡನೀಯ’ ಎಂದರು.
‘ಚಳವಳಿ ಬಿಸಿ ತಾಗಿದಾಗ ಮಾತ್ರ ಸರ್ಕಾರಗಳು ಆಸ್ವಾಸನೆ ಕೊಡುತ್ತವೆ. ಸ್ಪಂದಿಸುವ ನಾಟಕವಾಡಿ ಮಾದಿಗ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ. ಸಮುದಾಯದ ಹೋರಾಟಗಾರರ ಹಕ್ಕಿಗೆ ಬೆಲೆ ಕೊಡುತ್ತಿಲ್ಲ. 35 ವರ್ಷಗಳ ಹೋರಾಟದಲ್ಲಿ ಮೂರೂ ಪಕ್ಷಗಳ ಸರ್ಕಾರಗಳು ಮೋಸ ಮಾಡಿವೆ’ ಎಂದು ಹರಿಹಾಯ್ದರು.
‘ಒಳಮೀಸಲಾತಿ ಜಾರಿ ಆಗುವವರೆಗೂ ಯಾವುದೇ ಬಡ್ತಿ ಮಾಡಬಾರದು. ನಮ್ಮ ಹೋರಾಟ ನಿರ್ಲಕ್ಷ್ಯ ಮಾಡಿದರೆ ನೀವು ತೆಗೆದುಕೊಂಡ ಸಮಯ ಮೇ 31 ಕ್ಕೆ ಮುಗಿಯಲಿದೆ. ಅಷ್ಟರಲ್ಲಿ ಜಾರಿ ಮಾಡಿ ನೇಮಕಾತಿ ಮಾಡದಿದ್ದರೆ ನಮ್ಮ ಸಮುದಾಯ ಜೂನ್‌ 9ಕ್ಕೆ ವಿಧಾನ ಸೌಧಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.
ಮಾದಿಗ ಸಮಾಜದ ಮುಖಂಡರಾದ ಫಕೀರಪ್ಪ, ತಿಪ್ಪೇಶ ಎನ್‌, ಪುಟ್ಟಣ್ಣ, ಕರಿಯಪ್ಪ, ಮೌನೇಶ್‌, ಬಸವರಾಜ ಹೊಸಮನಿ, ತೇಜು ನೆಲಮಂಗಲ, ಎಚ್‌.ನೀಲಕಂಠ, ರಾಹುಲ್‌, ದುರ್ಗಪ್ಪ, ವಿನೋದ್‌ ಕುಮಾರ್‌ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net