ನಾಗಮೋಹನದಾಸ ವರದಿ ವಿರೋಧಿಸಿ ಅ. 6 ರಿಂದ ಗದಗಿನಲ್ಲಿ ಬೃಹತ್ ಪಾದಯಾತ್ರೆ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ

04GDG03
Published on
ಗದಗ: ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣವನ್ನು ವಿರೋಧಿಸಿ, ಅ 6 ರ ಸೋಮವಾರದಿಂದ ಗದಗಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.
​ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಹೋರಾಟವು ಬಂಜಾರ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣವನ್ನು ವಿರೋಧಿಸುವ ಸಮುದಾಯಗಳ ಹೋರಾಟ ಸಮಿತಿ'ಯ ಸಂಯುಕ್ತಾಶ್ರಯದಲ್ಲಿ (ನಾಯಕ, ಡಾವಸಾಣ, ಕಾರಭಾರಿ ಹಾಗೂ ಪಂಚರ ನೇತೃತ್ವದಲ್ಲಿ) ನಡೆಯಲಿದೆ.
​ ನಿವೃತ್ತ ನ್ಯಾ. ನಾಗಮೋಹನದಾಸ ಏಕ ಸದಸ್ಯ ಆಯೋಗದ ವರದಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ‌ ಅವರು, ​ಸುಪ್ರೀಂ ಕೋರ್ಟ್ ಮಾನದಂಡ ಉಲ್ಲಂಘನೆಯಾಗಿದೆ. ನಾಗಮೋಹನದಾಸ ವರದಿಯು ಸಂಪೂರ್ಣವಾಗಿ ಸುಪ್ರೀಂ ಕೋರ್ಟಿನ ಮಾನದಂಡಗಳನ್ನು ಉಲ್ಲಂಘಿಸಿದೆ ಮತ್ತು ಇದು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಮುಂದುವರೆದ ಭಾಗದಂತಿದೆ.
 ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಂಕಿ-ಅಂಶಗಳು ವಾಸ್ತವಿಕತೆಗೆ ದೂರವಾಗಿವೆ. ಕೆಲವು ಕುಟುಂಬಗಳು ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ ಎಂದು ಆಯೋಗವೇ ಹೇಳಿದ್ದರೂ, ಸರ್ಕಾರ ಈ ಅಪೂರ್ಣ ವರದಿಯನ್ನೇ ಜಾರಿಗೊಳಿಸಿದೆ.
​ಮೀಸಲಾತಿಯಲ್ಲಿ ಅನ್ಯಾಯ: ಆಯೋಗ ಸಿದ್ಧಪಡಿಸಿದ ಕೋಷ್ಟಕದಲ್ಲಿ, 'ಡಿ' ಗುಂಪಿನಲ್ಲಿರುವ ಲಂಬಾಣಿ ಮತ್ತು ಇತರೆ ಸಮುದಾಯವು 23 ಮಾನದಂಡಗಳಲ್ಲಿ ಕೇವಲ 6 ವಿಷಯಗಳಲ್ಲಿ ತುಸು ಮುಂದಿದೆ ಮತ್ತು ಉಳಿದ 17 ವಿಷಯಗಳಲ್ಲಿ ಸಿ ಗುಂಪಿಗಿಂತ ತುಂಬಾ ಹಿಂದುಳಿದಿದೆ ಎಂದು ತೋರಿಸಲಾಗಿದೆ. ಹೀಗಿದ್ದರೂ, ಡಿ ಗುಂಪಿಗೆ ಸಿ ಗುಂಪಿಗಿಂತ ಕಡಿಮೆ ಶೇಕಡವಾರು ಮೀಸಲಾತಿ ನೀಡಿರುವುದು ಯಾವ ಸಾಮಾಜಿಕ ನ್ಯಾಯ ಎಂದು ಅವರು ಪ್ರಶ್ನಿಸಿದರು.
​ 2011ರ ಜನಗಣತಿಯನ್ನು 2025 ಕ್ಕೆ ಹೋಲಿಸುವಾಗ ಕೆಲವು ಜಾತಿಗಳ ಜನಸಂಖ್ಯೆ ಶೇಕಡ 1.13 ರಷ್ಟು ಹೆಚ್ಚಳ ತೋರಿಸಿ, ಇನ್ನು ಕೆಲ ಜಾತಿಗಳಿಗೆ ಶೇ. 10 ರಿಂದ 12 ರಷ್ಟು ಹೆಚ್ಚು ತೋರಿಸಿರುವುದರ ಹಿಂದಿನ ಮರ್ಮವನ್ನು ನಾಗಮೋಹನದಾಸ ಅವರು ಬಹಿರಂಗಪಡಿಸಬೇಕಿದೆ.
 ಜಾತಿಗಳನ್ನು ಹಿಂದುಳಿದ ಸಮುದಾಯಗಳೆಂದು ವರ್ಗೀಕರಿಸಿದ ಆಯೋಗವು, ಮೀಸಲಾತಿ ವರ್ಗೀಕರಿಸುವಾಗ ಆಸಂವಿಧಾನಿಕ ಪದಗಳನ್ನು ಬಳಸಿರುವುದು ದುರದೃಷ್ಟಕರ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ವಿಧಾನಸಭೆಯಲ್ಲಿ ಇದೇ ಪದಗಳನ್ನು ಬಳಸಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ದೂರಿದರು.
  ಸುದ್ದಿಗೋಷ್ಠಿಯಲ್ಲಿ ಟಿ.ಎಲ್.ನಾಯಕ, ಚಂದು ನಾಯಕ, ಶಿವಪ್ಪ ನಾಯಕ, ಕೇಶಪ್ಪ ಕಾರಬಾರಿ, ಕುಬೇರಪ್ಪ‌ ನಾಯಕ, ಖೀಮಪ್ಪ ನಾಯಕ, ತೇಜು ನಾಯಕ, ಶಿವಪತ್ರ ನಾಯಕ, ಭೋವಿ ವಡ್ಡರ ಸಂದಕದ, ಪರಮೇಶ ನಾಯಕ, ಸುರೇಶ ಪೂಜಾರ ಮುಂತಾದವರು ಹಾಜರಿದ್ದರು.
ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಅ 6 ರಂದು ಬೆಳಗ್ಗೆ 11 ಕ್ಕೆ ಮಹಾತ್ಮಗಾಂಧಿ ಸರ್ಕಲ್‌ನಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆ ನಡೆಸಿ, ನಂತರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು.
...ರವಿಕಾಂತ ಅಂಗಡಿ.
ಸಾಮಾಜಿಕ ಹೋರಾಟಗಾರರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net