ಶೈಕ್ಷಣಿಕ ಸಾಧನೆಯ ಜೊತೆಗೆ ವಿದ್ಯಾರ್ಥಿಗಳ ಪ್ರತಿಭಾ ಅನಾವರಣವೂ ಮುಖ್ಯ : ವ್ಹಿ . ಎಸ್ ಪೂಜಾರ

26GDG09
Published on

ಗದಗ : ಪ್ರತಿಭಾ ಕಾರಂಜಿಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಬಹಿರಂಗಗೊಳಿಸಲು ಇರುವ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ವಿಷಯವಾರು ಶೈಕ್ಷಣಿಕ ಸಾಧನೆಯ ಜೊತೆಗೆ ತಮ್ಮ ಪ್ರತಿಭೆಯನ್ನು ಸೂಕ್ತ ವೇದಿಕೆ ಬಳಸಿಕೊಂಡು ಅನಾವರಣಗೊಳಿಸಬೇಕು ಎಂದು ವಿ.ಎಸ್. ಪೂಜಾರ ನುಡಿದರು.
ಅವರು ಇತ್ತೀಚೆಗೆ ನಗರದ ವಿದ್ಯಾದಾನ ಸಮಿತಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿಕ್ಷಕರು ಮಕ್ಕಳನ್ನು ಹೆಚ್ಚು ಅಂಕಗಳಿಸುವAತೆ ಪ್ರೇರೇಪಿಸುವುದರ ಜೊತೆಗೆ ಅವರ ಆಸಕ್ತಿಗಳು ಏನೆಂದು ತಿಳಿದುಕೊಂಡು ಅವರ ಪ್ರತಿಭೆಯನ್ನು ಪೋಷಿಸುವ ಕೆಲಸ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್ ಬುರಡಿ ಮಾತನಾಡಿ, ಈ ವರ್ಷ ಶಿಕ್ಷಕರಿಗಾಗಿ ಇಲಾಖೆ ವತಿಯಂದ ಹಲವು ವೆಬಿನಾರ್‌ಗಳನ್ನು ಹಮ್ಮಿಕೊಳ್ಳಲಾಗಿದ್ದು, ಶಿಕ್ಷಣದ ಗುಣಮಟ್ಟ ಕಾಪಾಡಲು ಇಲಾಖೆ ಬದ್ಧವಾಗಿದೆ. ಪ್ರತಿಭಾ ಕಾರಂಜಿಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದ್ದು, ಪೂಜಾರ ಅವರು ಯಾವುದೇ ಫಲಾಪೇಕ್ಷೆ ಇಲ್ಲದೇ ವಿದ್ಯಾರ್ಥಿಗಳಿಗಾಗಿ ಮತ್ತು ಶಿಕ್ಷಕರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾದಾನ ಸಮಿತಿ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದ್ದು, ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಿರಂತರ ಶ್ರಮ ವಹಿಸುತ್ತಿದ್ದು, ಶಿಕ್ಷಕ ವರ್ಗಕ್ಕೆ ಹಲವಾರು ತರಬೇತಿಗಳನ್ನು ಹಮ್ಮಿಕೊಳ್ಳುವುದರ ಮೂಲಕ ಶಿಕ್ಷಕರನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕಾರಣೀಭೂತರಾಗಿದ್ದಾರೆ ಎಂದರು.
ಬಿ.ಆರ್.ಪಿ ಪ್ರಕಾಶ ಮಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕೆ.ಎಂ. ಗೌಡರ ಕಾರ್ಯಕ್ರಮವನ್ನು ನಿರೂಪಿಸಿದರು. ಸಿ.ಆರ್.ಸಿ ರವಿ ಹೆಬ್ಬಳ್ಳಿ ಸ್ವಾಗತಿಸಿ ವಂದಿಸಿದರು
ಮುಖ್ಯ ಅತಿಥಿಗಳಾಗಿ ಗದಗ ಗ್ರಾಮೀಣ ಬಿ.ಇ.ಓ ವ್ಹಿ.ವ್ಹಿ. ನಡುವಿನಮನಿ, ಗದಗ ಶಹರದ ಸಮನ್ವಾಯಧಿಕಾರಿಗಳಾದ ಎಸ್.ಪಿ. ಪ್ರಭಯ್ಯನಮಠ, ವಿದ್ಯಾದಾನ ಸಮಿತಿಯ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಂಗೂಬಾಯಿ ಪವಾರ, ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಂಕರ ಹಡಗಲಿ, ಗದಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಕೆ. ಮಂಗಳಗುಡ್ಡ, ಎಂ.ಎಸ್ ತಳವಾರ, ಎಂ.ಎಸ್ ತೊಂಡಿಹಾಳ, ಬಿ.ಆರ್.ಪಿ. ಡಿ.ಟಿ. ಬೇವಿನಮರದ, ಎಸ್.ಎಸ್ ಉಣ್ಣಿಮಠ, ಪಿ.ಸಿ. ಕನಾಜಿ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net