ಆಂಧ್ರದಿಂದ ಗದಗ ವರೆಗೆ ಗಾಂಜಾ ನಂಟು

IMG-20250714-WA0020
Published on
ಮಾದಕ ವಸ್ತು ಜಾಲಕ್ಕೆ ಬಿದ್ದ 'ಸಿಕಾರಿ' ಮಾಫಿಯಾ: ಗದಗ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ: 
ಗದಗ: ಗದಗ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಭಾರೀ ಬಲೆ ಬೀಸಿದ್ದಾರೆ. ಒಟ್ಟಾರೆಯಾಗಿ 6.7 ಕಿಲೋಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು, 6 ಆರೋಪಿತರನ್ನು ಬಂಧಿಸಿದ್ದಾರೆ. ಅಂದಾಜು 6,70,000 ರೂ.ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರು ತಿಳಿಸಿದರು.
ಈ ಕುರಿತು ಇಂದು ಗದಗನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಅವರು ಮಾತನಾಡಿದರು.
 ಅಕ್ರಮ ಗಾಂಜಾ ಪತ್ತೆಯ ಹೊರತಾಗಿಯೂ, ಪೊಲೀಸರು ಒಂದು ಬೈಕ್, 6 ಮೊಬೈಲ್ ಫೋನುಗಳು ಮತ್ತು 1,000 ನಗದು ಹಣವನ್ನೂ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಬಿ.ಎಸ್.ನೇಮಗೌಡ ಅವರು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗುವದು ಎಂದು ಘೋಷಿಸಿದ್ದಾರೆ.
ಗದಗ ಉಪ-ವಿಭಾಗದ ಡಿಎಸ್‌ಪಿ  ಮುರ್ತುಜಾ ಖಾದ್ರಿ, ಡಿವೈಎಸ್ಪಿ ಮಹಾಂತೇಶ ಸಜ್ಜನ ಇವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿದ್ದರಾಮೇಶ್ವರ ಗಡೇದ, ಪಿಎಸ್‌ಐ ಎ.ಆರ್.ರಾಮೇನಹಳ್ಳಿ, ಎಸ್.ಬಿ.ಕವಲೂರ ಮತ್ತು ಸಿಬ್ಬಂದಿಯವರಾದ ಪ್ರಕಾಶ ಗಾಣಗೇರ, ಅಶೋಕ ಬೂದಿಹಾಳ, ಅನೀಲ ಬನ್ನಿಕೊಪ್ಪ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಇದ್ದರು ಎಂದು ನೇಮಗೌಡ ಅವರು ತಿಳಿಸಿದರು.
ಬಂಧಿತ ಆರೋಪಿಗಳು:
ಕೋಟುಮಚಗಿ ಗ್ರಾಮದ ಬಾಪು ಪುಣಜಪ್ಪ ಹರಣಸಿಕಾರಿ (48),  ಚಂದಪ್ಪ ಪುಣಜಪ್ಪ ಹರಣಸಿಕಾರಿ (48), ಬಿಂಕದಕಟ್ಟಿ ನಿವಾಸಿ ಗಾಯಿತ್ರಿ ಮಾರುತಿ ಕಾಳೆ (35), ಬೆಟಗೇರಿ ನಿವಾಸಿ ಮಾರುತಿ ಶೇಖಪ್ಪ ಕಾಳೆ (39), ಕೊಪ್ಪಳ ಜಿಲ್ಲೆಯ ಅಳವಂಡಿ ತಾಲೂಕಿನ ಗೋಪಾಲ ರಾಮಚಂದ್ರ ಬಸವಾ (57), ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣಬಾಬು ಚಿನ್ನನಾಗು (23) ಬಂಧಿತರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net