46 ಲಕ್ಷ ಮೌಲ್ಯದ ಬಂಗಾರ, 16 ಲಕ್ಷ ಮೌಲ್ಯದ ಬೆಳ್ಳಿ ಆಭರಣ ವಶಕ್ಕೆ. ತನಿಖೆ ಬೆನ್ನತ್ತಿದ್ದ ಪೊಲೀಸರಿಂದ ಕೊಲೆ ಪ್ರಕರಣವು ಬೆಳಕಿಗೆ. ಜೈಲು ವಾರ್ಡನ್ ಸೇರಿ ಮೂವರು ಆರೋಪಿಗಳ ಬಂಧನ

IMG-20240910-WA0019
Published on

ವಿಜಯವಾಣಿ ಸುದ್ದಿಜಾಲ ಗದಗ
ಮಧ್ಯ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸರಗಳ್ಳತನ, ದೇವಸ್ಥಾನದ ಆಭರಣ ಕಳುವು ಮಾಡಿ ತಲೆ ಮರೆಸಿಕೊಳ್ಳುತ್ತಿದ್ದ ಮೂವರು ಅಂತರ ಜಿಲ್ಲಾ ಖದೀಮರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದು, ಆರೋಪಿತರಿಂದ 46 ಲಕ್ಷ ಮೌಲ್ಯದ ಬಂಗಾರ, 16 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದೆ. ತನಿಖೆಯ ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿತರು ಕೊಲೆ ಪ್ರಕರಣದಲ್ಲಿ ಭಾಗಿ ಆಗಿರುವುದು ಕಂಡು ಬಂದಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.ಲಕ್ಷ್ಮೇಶ್ವರ, ಗದಗ, ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 7 ಸರಗಳ್ಳತನ ಪ್ರಕರಣ, ಶಿರಹಟ್ಟಿ, ಹೊಸದುರ್ಗಾ, ರಾಣೆಬೆನ್ನೂರು ಮತ್ತು ಹಾವೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 8 ದೇವಸ್ಥಾನಗಳ ಆಭರಣ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಆರೋಪಿತರಾದ ರಾಣೆಬೆನ್ನೂರು ಮೂಲದ ಸಹೋದರರಾದ ಪ್ರಸಾದ(ವರ್ಷ 28, ಎ1), ಪ್ರದಿಪ್(ವರ್ಷ 24, ಎ2) ಮತ್ತು ಕಳ್ಳತನಕ್ಕೆ ಸಲಹೆ ನೀಡುತ್ತಿದ್ದ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿ ಆದ ಜೈಲು ವಾರ್ಡ್ನ್ ಶ್ರೀಕಾಂತ ಗುಡಗೂರು(ವರ್ಷ 29, ಎ3) ಅವರನ್ನು ಬಂಧಿಸಿ ಜೈಲಿಗಟ್ಟಿದೆ. ಕಳ್ಳತನ ಮತ್ತು ಕೊಲೆ ಪ್ರಕರಣ ಬೇದಿಸಿರುವ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಎಸ್ಪಿ ಎಂ.ಬಿ. ಸಂಕದ, ಪೊಲೀಸ್ ಅಧಿಕಾರಿಗಳಾದ ನಾಗರಾಜ ಮಾಡಳ್ಳಿ, ಈರಪ್ಪ ರಿತ್ತಿ, ಮಾರುತಿ ಎಸ್.ಜೆ, ಶೇಖರ್ ಕಡುಬಿನ ಇತರರು ಇದ್ದರು.

ಜೈಲು ವಾರ್ಡನ್ ಕೈಚಳ:
ಚಿತ್ರದುರ್ಗ ಜಿಲ್ಲೆಯಲ್ಲಿ ಜೈಲು ವಾರ್ಡನ್ ಆಗಿದ್ದ ಶ್ರೀಕಾಂತ ಗುಡಗೂರು ಕಳ್ಳರ ಗ್ಯಾಂಗಿನ ಕಿಂಗ್ ಪಿನ್ ಎನ್ನಲಾಗಿದೆ. ಚಿತ್ರದುರ್ಗ ಜೈಲಿನಲ್ಲಿ ಆರೊಪಿ ಪ್ರಸಾದ(ಎ1) ಪರಿಚಯ ಮಾಡಿಕೊಂಡಿದ್ದ ಆರೋಪಿತ ಶ್ರೀಕಾಂತ ಈ ಹಿಂದೆ ಆರೋಪಿ ಪ್ರಸಾದ ಗೆ  1.90 ಲಕ್ಷ ರೂ ಖರ್ಚು ಮಾಡಿ ಜಾಮೀನು ಕೊಡಿಸಿದ್ದನು. ಕಳ್ಳತನದಿಂದ ಬಂದ ಹಣದಲ್ಲೇ ಶ್ರೀಕಾಂತನಿಗೆ ಹಣ ಮರುಕಳಿಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಶ್ರೀಕಾಂತ ನಿಂದ ಕೊಲೆ ಕೇಸ್ ಬೆಳಕಿಗೆ:
ಸರ್ಕಾರಿ ನೌಕರನಾಗಿದ್ದರೂ ಸಹ ಕಳ್ಳತನದಲ್ಲಿ ಭಾಗಿ ಆಗಿರುವುದು ಏತಕ್ಕೆ ಎಂದು ಪೊಲೀಸ್ ತನಿಖೆ ವೇಳೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಕೊಲೆ ಪ್ರಕರಣವನ್ನು ಶ್ರೀಕಾಂತ್ ಬಾಯಿಬಿಟ್ಟಿದ್ದಾನೆ. "ರಾಮು, ಪ್ರಸಾದ ಮತ್ತು ಪ್ರದಿಪ ಮೂವರು ಸಹೋದರರು ಕಳ್ಳತನದಲ್ಲಿ ಸಕ್ರಿಯರಾಗಿದ್ದರು. ಈ ವೇಳೆ ಜೈಲಿನಲ್ಲಿ ಪರಿಚಯವಾದ ಪ್ರಸಾದ ಮೂಲಕ ಶ್ರೀಕಾಂತ ಕಳ್ಳತನ ಮಾಡಲು ಸಲಹೆ, ಸಹಕಾರ ನೀಡಲು ಮುಂದಾಗುತ್ತಾನೆ. ಗೂಗಲ್ ಮ್ಯಾಪ್ ಮೂಲಕ ದೇವಸ್ಥಾನಗಳನ್ನು ಗುರುತಿಸಿ ಕಳ್ಳತನ ಟಾರ್ಗೆಟ್ ನಿಗದಿಪಡಿಸುತ್ತಾನೆ. ಆರೊಪಿ ಜೈಲು ವಾರ್ಡನ್ ಶ್ರೀಕಾಂತ ಯೋಜನೆಯಂತೆ ಕಳ್ಳತನ ನಡೆಯುತ್ತಿರುತ್ತವೆ. ಕಳ್ಳತನ ಮುಂದಾಳತ್ವವನ್ನು ಶ್ರೀಕಾಂತ್ ವಹಿಸಿಕೊಂಡ ಹಿನ್ನೆಲೆ ಸಹೋದರರಾದ ರಾಮು, ಪ್ರಸಾದ ಮತ್ತು ಪ್ರದಿಪ ನಡುಗೆ ವೈಮನಸ್ಸು ಮೂಡಿ ಗಲಾಟೆ ಶುರುವಾಗುತ್ತದೆ. ಈ ಕಾರಣದಿಂದ ಆರೋಪಿತ(ಎ1) ಮತ್ತು ಆರೋಪಿತ ಜೈಲು ವಾರ್ಡನ್ ಶ್ರೀಕಾಂತ(ಎ3) ಇಬ್ಬರೂ ಜತೆಗೂಡಿ ರಾಮು ನನ್ನು ಮೆ.10, 2023 ರಂದು ಕೊಲೆ ಮಾಡಿರುತ್ತಾರೆ. ರಾಣೆಬೆನ್ನೂರು ಹೊರ ವಲಯದ ಖಾಲಿ ಜಾಗೆಯಲ್ಲಿ ಪಾಟಿರ್ ಮಾಡುತ್ತ ಕುಳಿತಿದ್ದ ರಾಮು ತಲೆ ಮೇಲೆ ಸಹೋದರ ಪ್ರಸಾದ ಮತ್ತು ಶ್ರೀಕಾಂತ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಕೊಲೆ ಪ್ರಕರಣದಲ್ಲಿ ಬೆಂಬಲ ನೀಡಿದ್ದ ಕಾರಣದಿಂದ ಮುಂದೆ ನಡೆದ ಕಳ್ಳತನ ಪ್ರಕರಣದಲ್ಲೂ ಸಹಕಾರ ನೀಡಿದ್ದಾಗಿ ಶ್ರೀಕಾಂತ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಅಮರನಾಥ ರೆಡ್ಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.  

ದೇವಸ್ಥಾನ ಕಳ್ಳತನ ಪ್ರಕರಣ:
* ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ ಅಂಭಾಭವಾನಿ ದೇವಸ್ಥಾನ
* ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಹೇಮಗಿರಿಮಠ
* ಶಿರಹಟ್ಟಿ ತಾಲೂಕಿನ ವಡವಿ ಗ್ರಾಮದ ದುರ್ಗಅದೇವಿ ಮತ್ತು ಮಾರುತಿ ದೇವಸ್ಥಾನ
* ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಗ್ರಾಮದ ತುಮ್ಮಿನಕಟ್ಟೆ ಗ್ರಾಮದ ಬನಶಂಕರಿ ದೇವಸ್ಥಾನ
* ಹಾವೇರಿ ತಾಲೂಕಿನ ನೀಲಗಿರಿ ಗ್ರಾಮದ ಗ್ರಾಮದೇವತೆ ದೇವಸ್ಥಾನ
* ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನ ಗೂಳಿಹೊಸಳ್ಳಿ ಗ್ರಾಮದ ರಾಮೇಶ್ವರ ಗಂಗಮ್ಮ ದೇವಸ್ಥಾನ

ಸರಗಳ್ಳತನ ಪ್ರಕರಣ:

* ಗದಗ ಶಹರ
* ವಿಜಯ ನಗರ ಜಿಲ್ಲೆಯ ಕೊಟ್ಟೂರು ಶಹರ
* ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣ
* ಶಿವಮೊಗ್ಗ ಜಿಲ್ಲೆಯ ಆವನಟ್ಟಿ ನಗರ
* ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರ.

ಏನೇನು ವಶಕ್ಕೆ:
* 46.20 ಲಕ್ಷ ಮೌಲ್ಯದ 328 ಗ್ರಾಂ ಚಿನ್ನಾಭರಣ
* 15.90 ಲಕ್ಷ ಮೌಲ್ಯದ 19 ಕೆಜಿ ಬೆಳ್ಳಿ ಆಭರಣ
* 5 ಲಕ್ಷ ಮೌಲ್ಯದ ಸ್ಕಾಪಿರ್ಯೋ
* 1.10 ಲಕ್ಷ ಮೌಲ್ಯದ ಪಲ್ಸರ್ ದ್ವಿಚಕ್ರ ವಾಹನ

ಯಾವೆಲ್ಲ ಸೆಕ್ಷನ್:
ಜುಲೈ 2024ರ ಪೂರ್ವದಲ್ಲಿ ಬಡೆದ ಕಳ್ಳತನ, ಕೊಲೆ ಪ್ರಕರಣಗಳನ್ನು ಐಪಿಸಿ ಅಡಿಯಲ್ಲಿ ಮತ್ತು ಜುಲೈ 1, 2024ರ ನಂತರ ನಡೆದ ಪ್ರಕರಣಗಳನ್ನು ಬಿಎನ್ಎಸ್ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರೋಪಿತರ ಮೇಲೆ ಈಪಿಸಿ ಸೆಕ್ಷನ್ 380, 454, 457 ಹಾಗೂ ಬಿಎನ್ಎಸ್ ಅಡಿಯಲ್ಲಿ 309(4) ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೋಟ್:
ಲಕ್ಷ್ಮೇಶ್ವರದಲ್ಲಿ ನಡೆದ ಕಳ್ಳತನ ಪ್ರಕರಣದ ಸಿಸಿ ಕೆಮಾರ ದೃಶ್ಯಾವಳಿ ಆಧರಿಸಿ ಪ್ರಕರಣ ಬೇಧಿಸಲಾಗಿದೆ. ಇಲಾಖೆಗೆ ಸವಾಲೆನಿಸಿದರೂ ಸಿಬ್ಬಂದಿಯ ಕರ್ತವ್ಯ ಮೆಚ್ಚುವಂತದ್ದು.
- ಅಮರನಾಥ ರೆಡ್ಡಿ, ಪ್ರಭಾರ ಎಸ್ಪಿ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net