

140ಕ್ಕೂ ಹೆಚ್ಚು ಆಟೋ, ಟಂಟಂಗಳು ಸೀಜ್
ವಿಜಯವಾಣಿ ಸುದ್ದಿಜಾಲ ಗದಗ
ಸಂಚಾರಿ ನಿಯಮಗಳನ್ನು ಪಾಲಿಸದಿರುವುದು, ಅಗತ್ಯಕ್ಕಿಂತ ಹೆಚ್ಚನ ಪ್ರಯಾಣಿಕರನ್ನು ಕರೆದೊಯ್ಯವುದು ಸೇರಿ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಆಟೋ, ಟಂಟಂಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಶುಕ್ರವಾರ ಮತ್ತು ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿತು.
ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ ನಗರದ ವಿವಿಧೆಡೆ ಆಟೋ, ಟಂಟಂಗಳನ್ನು ಪರಿಶೀಲಿಸಿ ದಂಡ ವಿಧಿಸಲಾಯಿತು.
ಡಿವೈಎಸ್ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಿ ನಗರದ ಭೂಮರಡ್ಡಿ ವೃತ್ತ, ರೋಟರಿ ಸರ್ಕಲ್, ಕೆ. ಎಚ್. ಪಾಟೀಲ ವೃತ್ತ, ಮಹಾತ್ಮ ಗಾಂಧಿ ವೃತ್ತ ಸೇರಿ ನಗರದ ವಿವಿಧೆಡೆ ಆಟೋ, ಟಂಟಂಗಳ ಪರಿಶೀಲನೆ ಜತೆಗೆ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ 160ಕ್ಕೂ ಹೆಚ್ಚು ಆಟೋ, ಟಂಟಂಗಳನ್ನು ಸೀಜ್ ಮಾಡಲಾಯಿತು.
ಗದಗ&ಬೆಟಗೇರಿ ಅವಳಿ ನಗರದಲ್ಲಿ ಆಟೋ, ಟಂಟಂಗಳ ಹಾವಳಿ ಹೆಚ್ಚಿದ್ದು, ನಡುರಸ್ತೆಯಲ್ಲಿ ವಾಹನ ನಿಲ್ಲಿಸಿ, ಪ್ರಯಾಣಿಕರನ್ನು ಕರೆದೊಯ್ಯುವುದು, ರಸ್ತೆ ಸಂಚಾರಕ್ಕೆ ಅಡೆತಡೆ ಉಂಟು ಮಾಡುವುದು, ಮ್ಯೂಸಿಕ್ ಪ್ಲೇಯರ್ಗಳ ಸೌಂಡ್ ಹೆಚ್ಚಿಸಿ ಶಬ್ದ ಮಾಲಿನ್ಯ ಉಂಟುಮಾಡುವುದು, ಡೆವರ್ ಪಕ್ಕದಲ್ಲಿ ಸಹ ಪ್ರಯಾಣಿಕರನ್ನು ಕೂಡಿಸಿಕೊಳ್ಳುವುದು, ವಾಹನದ ಕಾಗದ ಪತ್ರಗಳಿಲ್ಲದೆ ಸಂಚರಿಸುವುದು ಸೇರಿ ಟ್ರಾಫಿಕ್ ನಿಯಮಗಳನ್ನು ಪಾಲಿಸದಿರುವ ಆಟೋ ಟಂಟಂಗಳನ್ನು ಪತ್ತೆ ಹಚ್ಚಿ, ಪರಿಶೀಲಿಸಿ ಪೊಲೀಸ್ ಇಲಾಖೆ ವಶಪಡಿಸಿಕೊಂಡಿತು.
ಈ ವೇಳೆ ಪೋಲೀಸರುಮ, ಆಟೋ ಟಂಟಂ ಚಾಲಕರಿಗೆ ಹಾಗೂ ಮಾಲೀಕರಿಗೆ ವಾಹನಾ ಚಾಲನಾ ನಿಯಮಗಳನ್ನು ಪಾಲಿಸಬೇಕು, ಸರಿಯಾಗಿ ಕಾಗದ ಪತ್ರಗಳನ್ನು ಹೊಂದಿರಬೇಕು, ಚಾಲನಾ ಸಮವಸ್ತ್ರ ಧರಿಸಬೇಕು, ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ನಿಯಂತ್ರಿಸಬೇಕು, ಚಾಲಕನ ಪಕ್ಕದಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಳ್ಳುವುದು, ಸೌಂಡ್ ರೆಕಾರ್ಡರ್ಗಳನ್ನು ಹೆಚ್ಚಿಗೆ ಇಟ್ಟು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಬೇಕು ಪೊಲೀಸರು ಎಚ್ಚರಿಕೆ ನೀಡಿದರು.
ಕೋಟ್
ಆಟೋ ಹಾಗೂ ಟಂಟಂಗಳಲ್ಲಿ ವಾಹನ ಚಾಲನಾ ಮಿತಿ ಹಾಗೂ ಕಾನೂನು ಬಾಹಿರವಾಗಿ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು, ಕಾಗದ ಪತ್ರಗಳಿಲ್ಲದೆ ಸಂಚರಿಸುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಡಿವೈಎಸ್ಪಿ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಿ ವಿಶೇಷ ಕಾರ್ಯಾಚರಣೆ ಮೂಲಕ ಆಟೋ, ಟಂಟಂಗಳನ್ನು ಸೀಜ್ ಮಾಡಲಾಗಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಕಾಗದ ಪತ್ರಗಳು ಸರಿಯಾಗಿರುವ ಆಟೋ ಟಂಟಂಗಳಿಗೆ ದಂಡ ಹಾಕಿ ಬಿಡುಗಡೆ ಗೊಳಿಸಲಾಗುವುದು. ಕಾಗದ ಪತ್ರಗಳಿರದ ಆಟೋ&ಟಂಟಂಗಳನ್ನು ಸಂರ್ಪೂಣವಾಗಿ ಸೀಜ್ ಮಾಡಲಾಗುವುದು.
ಬಿ. ಎಸ್. ನೇಮಗೌಡ, ಎಸ್ಪಿ ಗದಗ