ಪತ್ರಿಕೆಗಳನ್ನು ಓದುವುದರ ಮೂಲಕ ಬರುವ ಜ್ಞಾನ ಸಮೂಹ ಮಾಧ್ಯಮಗಳಿಂದ ಬರಲು ಸಾಧ್ಯವಿಲ್ಲ: ಶ್ರೀಶೈಲ ಸೋಮನಕಟ್ಟಿ

04GDG08
Published on

ಗದಗ: ಆಧುನಿಕ ದಿನಮಾನದಲ್ಲಿ ನ್ಯೂಸ್ ಚಾನೆಲ್, ಯುಟ್ಯೂಬ್ ಚಾನೆಲ್ ಸೇರಿ ಸಮೂಹ ಮಾಧ್ಯಮಗಳ ಅಬ್ಬರದ ನಡುವೆ ಇಂದಿಗೂ ಪತ್ರಿಕೆಗಳು ಮಹತ್ವ ಕಳೆದುಕೊಂಡಿಲ್ಲ. ಪತ್ರಿಕೆಗಳನ್ನು ಓದುವುದರ ಮೂಲಕ ಬರುವ ಜ್ಞಾನ ಸಮೂಹ ಮಾಧ್ಯಮಗಳಿಂದ ಬರಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಹೇಳಿದರು.

ಬೆಟಗೇರಿಯ ಟೆಂಗಿನಕಾಯಿ ಬಜಾರ್ ಸಮೀಪದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ 13ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಿಇಟಿ, ಕೆಎಎಸ್, ಐಎಎಸ್, ಐಪಿಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ ಸೇರಿದಂತೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ಪತ್ರಿಕೆಗಳು ನೆರವಾಗಲಿವೆ. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಸಿನಿಮಾ, ಕ್ರೀಡೆ, ವಾಣಿಜ್ಯ ಸೇರಿದಂತೆ ಹತ್ತು ಹಲವಾರು ಸಂಗತಿಗಳನ್ನು ಇಡೀ ಪತ್ರಿಕೆಗಳು ಒಳಗೊಂಡಿರುತ್ತವೆ. ಪ್ರತಿಯೊಬ್ಬರೂ ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. 

ಹಿರಿಯರು ಬೆಳಿಗ್ಗೆ ಪತ್ರಿಕೆಗಳನ್ನು ಓದದಿದ್ದರೆ ಚಹಾ, ಕಾಫಿ ಸೇರುತ್ತಿರಲಿಲ್ಲ. ಇಂದಿನ ಯುವ ಸಮೂಹ ಪತ್ರಿಕೆಗಳನ್ನು ಓದುವುದನ್ನು ಬಿಟ್ಟು ಮೊಬೈಲ್, ಟಿವಿಯಂತಹ ಸಮೂಹ ಮಾಧ್ಯಮಗಳ ಹಿಂದೆ ಬಿದ್ದು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಪತ್ರಿಕೆ ವಿತರಣೆ ಮಾಡುತ್ತ ಸಾಧನೆ ಮಾಡಿರುವ ಸಾಧಕರು ನಮ್ಮ ಕಣ್ಣ ಮುಂದೆ ಇದ್ದಾರೆ. ಮಾಜಿ ರಾಷ್ಟçಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಬೆಳವಣಿಗೆ ಹೊಂದಬೇಕು ಎಂದು ಹೇಳಿದರು.  

ಅಸಂಘಟಿತ ವಲಯದಲ್ಲಿ ಬರುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದೊಂದಿಗೆ ಆಕಸ್ಮಿಕವಾಗಿ ಮರಣ ಹೊಂದಿದರೆ ಸರಕಾರದಿಂದ 2 ಲಕ್ಷ ರೂ., ಶಾಶ್ವತ ಅಂಗವಿಕಲರಾದರೆ, ಮಾರಣಾಂತಿಕ ಕಾಯಿಲೆ ತುತ್ತಾಗಿದ್ದರೆ ಪರಿಹಾರದ ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 97 ವಿತರಕರು ಈಗಾಗಲೇ ಇ-ಶ್ರಮ ಪೋರ್ಟಲ್‌ನಲ್ಲಿ ನೊಂದಣಿ ಮಾಡಿಕೊಂಡಿದ್ದು, ಉಳಿದ ಅರ್ಹ ಪತ್ರಿಕಾ ವಿತರಕರು ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು. 

ಕರ್ನಾಟಕ ಪತ್ರಕರ್ತರÀ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜೆ ಮಾತನಾಡಿ, ಪತ್ರಿಕಾ ವಿತರಕರು ಇ-ಶ್ರಮ ನೊಂದಣಿಗೆ ಕೆಲ ಅಡತಡೆಗಳಿದ್ದು, ಆಯಾ ಪತ್ರಿಕೆಗಳ ಸಂಪಾದಕರು ನೀಡುವ ಶಿಫಾರಸು ಪತ್ರದ ಅನ್ವಯ ನೊಂದಣಿಯಾಗಬೇಕಿದೆ. ಅಲ್ಲದೇ, ದೇಶದಲ್ಲಿ ಅಸಂಖ್ಯಾತ ಪತ್ರಿಕೆಗಳಿದ್ದು, ಲಕ್ಷಾಂತರ ಪತ್ರಿಕೆ ವಿತರಕರಿದ್ದಾರೆ. ಅಂತಹ ಒಂದು ದೊಡ್ಡ ಸಮುದಾಯದ ಕ್ಷೇಮಾಭಿವೃದ್ಧಿ ಸಲುವಾಗಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ವೀರಬಸಯ್ಯ ವಿರಕ್ತಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯಿಂದ ಸಧ್ಯ ಮರಣಾನಂತರ ಸೌಲಭ್ಯಗಳಿವೆ. ಅದರ ಜೊತೆಗೆ ವಿತರಕರು ಜೀವಂತರಿರುವಾಗಲೇ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಪತ್ರಿಕಾ ವಿತರಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೌಲಭ್ಯ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ ಮಾತನಾಡಿ, ಮಳೆ, ಚಳಿ, ಗಾಳಿಯೆನ್ನದೆ ಪತ್ರಿಕಾ ವಿತರಕರು ಕೆಲಸ ಮಾಡುತ್ತ ಬಂದಿದ್ದು, ಕೆಲಸ ಸಣ್ಣದೆನಿಸಿದರೂ ಶ್ರಮದಾಯಕವಾಗಿರುತ್ತದೆ. ಸಂಘಟನೆ ಕೊರತೆಯಿದೆ. ಗ್ರಾಮೀಣ ಭಾಗದ ವಿತರಕರು ಸಹಕಾರ ನೀಡಿದಾಗ ಇನ್ನಷ್ಟು ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಸರಕಾರ ಪತ್ರಿಕಾ ವಿತರಕರನ್ನು ಅಸಂಘಟಿತ ವಲಯಕ್ಕೆ ಸೇರಿಸಿದೆ. ಆದರೆ, ಶೈಕ್ಷಣಿಕವಾಗಿ ನೆರವು ನೀಡುವ ಯೋಜನೆ ರೂಪಿಸಿಲ್ಲ. ಪತ್ರಿಕಾ ವಿತರಕರಿಗೂ ಕಟ್ಟಡ ಕಾರ್ಮಿಕರಿಗೆ ಇರುವ ಸೌಲಭ್ಯಗಳನ್ನು ದೊರಕುವಂತಾಗಬೇಕು. ಪತ್ರಿಕಾ ವಿತರಕರಿಗೆ ಕಟ್ಟಡ ಕಾರ್ಮಿಕರಿಗೆ ನೀಡುವ ಕಿಟ್‌ಗಳನ್ನು ಪೂರೈಸಬೇಕು ಎಂದು ಹೇಳಿದರು.

ಉದ್ಯಮಿ ಕಿಶನ್ ಮೇರವಾಡೆ ಮಾತನಾಡಿ, ಪತ್ರಿಕೆ ವಿತರಕರು ಮಳೆ, ಗಾಳಿ, ಚಳಿಯೆನ್ನದೇ ಕೆಲಸ ನಿರ್ವಹಿಸುತ್ತಿದ್ದು, ಪತ್ರಿಕೆಗಳನ್ನು ಓದುವ ಓದುಗರು ಬಿಲ್ ನೀಡುವ ಸಂದರ್ಭದಲ್ಲಿ ಗೋಳಾಡಿಸದೇ ಮನೆಗೆ ಬಂದ ಸಂದರ್ಭದಲ್ಲಿ ಪಾವತಿಸಬೇಕು. ಅಲೆದಾಡುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. 

ಮುಕ್ಕಣ್ಣೇಶ್ವರ ಮಠದ ಶಂಕರಾನಾAದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುನಾಲ್ ಅಬ್ಬಿಗೇರಿ, ರಮೇಶ ಭಜಂತ್ರಿ, ಸಂಘದ ಉಪಾಧ್ಯಕ್ಷ ಈರಣ್ಣ ಮಳೇಕರ, ದತ್ತಾತ್ರೆಯ ಮುಂಡರಗಿ, ವಿನಾಯಕ ಬದಿ, ಗಣೇಶ ಶಿರಹಟ್ಟಿ, ಗುರುರಾಜ ಕಲಾಲ, ಹಿರಿಯ ಸಲಹೆಗಾರರಾದ ಕೆ.ಎಸ್. ಹಿರೇಮಠ, ಪ್ರಮೋಶ ಜೋಶಿ, ಗಂಗಾಧರ ಮಡ್ಡಿ, ಸಿದ್ಧಲಿಂಗೇಶ ಮಡಿವಾಳರ ಇದ್ದರು. ಸಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕುಬನೂರ ಸ್ವಾಗತಿಸಿದರು. ಶಂಕರಗುರು ಕಂದಗಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net