ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್​ ಉದ್ಘಾಟನೆ ಕಾರ್ಯಕ್ರಮ

28GDG01A
Published on

ಕಿತ್ತೂರು ರಾಣಿ ಚೆನ್ನಮ್ಮ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ
2ಎ ಮೀಸಲಾತಿಗೆ ಆಗ್ರಹಿಸಿದ ಬಸವಜಯ ಮೃತ್ಯುಂಜಯ ಶ್ರೀಗಳು

ವಿಜಯವಾಣಿ ಸುದ್ದಿಜಾಲ ಗದಗ
ಪಂಚಮಸಾಲಿ ಸಮುದಾಯ ವತಿಯಿಂದ ಚೆನ್ನಮ್ಮ ಉತ್ಸವ ಮಾಡಿದ ರಾಜ್ಯದ ಮೊದಲ ನಗರ ನರಗುಂದ ಪಟ್ಟಣ. ಕೂಡಲಸಂಗಮ ಪೀಠ ಸ್ಥಾಪನೆಗೆ ಮೂಲ ಬುನಾದಿ ಹಾಕಿದ್ದು ಗದಗ ನಗರ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ನಗರದ ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್​ ಉದ್ಘಾಟನೆ, ಪಂಚಮಸಾಲಿ ಸಮುದಾಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಲವು ದಿನಗಳ ಕೊರತೆ ಇಂದು ನೀಗಿದಂತಾಗಿದೆ. ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಹಿರಿಯರು ಒಂದಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಳ್ಳೆಯ ಬೆಳವಣಿಗೆ ಎಂದರು.
ಸಚಿವ ಎಚ್​.ಕೆ. ಪಾಟೀಲ ಮಾತನಾಡಿ, ಕಿತ್ತೂರು ರಾಣಿ ಸಮುದಾಯ ಭವನಕ್ಕೆ ಕಾಂಗ್ರೆಸ್​ ಸರ್ಕಾರ 1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಅಭಿವೃದ್ಧಿ ಕೆಲಸಗಳು ಆರಂಭವಾಗಬೇಕು. ಮುಂಬರುವ 2025 ಜು. 28 ರಂದು ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೂತನ ಭವನದಲ್ಲಿ ಜರುಗುವಂತಾಗಲಿ ಎಂದು ಎಚ್​. ಕೆ. ಪಾಟೀಲ ಹೇಳಿದರು.
ಶಿಕ್ಷಣದ ಮೂಲಕ ಬದಲಾವಣೆ, ಬೆಳವಣಿಗೆ, ಶಿಕ್ಷಣದ ಮೂಲಕ ಶ್ರೀಮಂತಿಕೆ, ಶಿಕ್ಷಣದ ಮೂಲಕ ಸಮುದಾಯದ ಅಭಿವೃದ್ಧಿ ಸಾಧ್ಯ. ಆಧುನಿಕ ಯುಗದಲ್ಲಿ ಕೃಷಿಯಿಂದ ಬದಲಾವಣೆ ಸಾಧ್ಯವಿಲ್ಲ. ಅಭಾದಿತ ಮಳೆಯಿಂದ ಕೃಷಿಯಿಂದ ಲಾಭ ಸಿಗುತ್ತಿಲ್ಲ. ಹಾಗಾಗಿ ಕೃಷಿಯನ್ನೇ ನಂಬಿರುವ ಪಂಚಮಸಾಲಿ ಸಮಾಜ ಶೈಕ್ಷಣಿಕ ಕ್ಷೇತ್ರದಲ್ಲೂ ಬೆಳೆಯಬೇಕು. ಸ್ವಂತ ಶಕ್ತಿ ಶ್ರಮದಿಂದ ಬೆಳೆಯುವ ವ್ಯಕ್ತಿಗೆ ಲಾಭ ಅಧಿಕ. ಯಾವ ಸಮುದಾಯದಲ್ಲಿ ಶಿಕ್ಷಣ ಉನ್ನತ ಸ್ಥಾನದಲ್ಲಿ ಇರುತ್ತದೆಯೋ, ಆ ಸಮಾಜ ಉನ್ನತ ಸ್ಥಾನದಲ್ಲಿ ಇರುತ್ತದೆ. ಪಂಚಮಸಾಲಿ ಸಮಾಜ ಗ್ರಾಮೀಣ ಭಾಗದಲ್ಲಿ ಅಧಿಕವಾಗಿ ನೆಲೆಸಿದ್ದು, ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.
ಸಂ ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭದ ಕೆಲಸ. ಆದರೆ, ಸಮಾಜದ ಕೆಲಸ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ಒಕ್ಕಲಿಗರ ನಂತರ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ದೊಡ್ಡ ಸಮಾಜವಾಗಿದೆ ಎಂದರು.
ಸಿ.ಸಿ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜವು ಎಂದಿಗೂ ಬಸವರಾಜ ಬೊಮ್ಮಾಯಿ ಅವರನ್ನು ಮರೆಯಲು ಸಾದ್ಯವಿಲ್ಲ. ಬೆಂಗಳೂರಿನಲ್ಲಿ ಸಮಾಜದ ಕಟ್ಟಡ ನಿಮಿರ್ಸಲು ಭೂಮಿಯನ್ನು ಒದಗಿಸಿಕೊಟ್ಟರು. ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮತ್ತು 2ಸಿ ಮೀಸಲಾತಿ ಜಾರಿ ಮಾಡಿದರು. ಆದರೆ ಕೆಲವರು ಆದೇಶದ ವಿರುದ್ಧ ಕೋರ್ಟ ಮೆಟ್ಟಿಲೇರಿದ ಹಿನ್ನೆಲೆ ಮೀಸಲಾತಿ ಅನುಷ್ಠಾನ ಜಾರಿ ಆಗಲಿಲ್ಲ. ಕಾಂಗ್ರೆಸ್​ ಸರ್ಕಾರ ಕೋರ್ಟನಲ್ಲಿ ಇರುವ ತಡೆಯಾಜ್ಞೆ ತೆರವುಗೊಳಿಸಿ 2ಡಿ, 2ಸಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. ಸಮುದಾಯ ಭವನ ಕಟ್ಟಡಕ್ಕೆ ರಾಜ್ಯ ಸರ್ಕಾರ 1 ಕೋಟಿ ಅನುದಾನ ಕೊಟ್ಟಿದ್ದನ್ನು ಸ್ವಾಗತಿಸಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಮೀಸಲಾತಿ ಹೋರಾಟ ನ್ಯಾಯಯುತವಾಗಿತ್ತು. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ನ್ಯಾಯಯುತವಾಗಿ ಮೀಸಲು ನೀಡಲಾಗಿತ್ತು. ಆದೆ ಇಂದಿನ ಸರ್ಕಾರಕ್ಕೆ ಪಂಚಮಸಾಲಿ ಮಿಸಲು ಬಗ್ಗೆ ಆಸಕ್ತಿ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಕೂಡಲಸಂಗಮ ಬಸವಜಯ ಮೃತ್ಯುಂಜಯ ಶ್ರೀಗಳು, ಹರಿಹರ ಪೀಠದ ವಚನಾನಂದ ಶ್ರೀಗಳಿಗೆ ಸನ್ಮಾಸಿ ಗೌರವ ಸರ್ಮಪಿಸಲಾಯಿತು. ಸಮುದಾಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್​.ವಿ. ಸಂಕನೂರು, ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರ, ಮೋಹನ ಮಾಳಶೆಟ್ಟಿ, ವಿಜಯಕುಮಾರ ಗಡ್ಡಿ, ಉಮೇಶಗೌಡ ಪಾಟೀಲ, ಸಿದ್ದು ಪಾಟೀಲ, ಅಕ್ಬರಸಾಬ ಬಬಚಿರ್, ರಾಜು ಗುಡಿಮನಿ, ವೀರಶೈವ ಮಹಾಸಭಾ ಸದಸ್ಯರು ಇತರರು ಇದ್ದರು

ಮೀಸಲಾತಿಗೆ ಆಗ್ರಹ: ಕಾರ್ಯಕ್ರಮದಲ್ಲಿ ಮೀಸಲಾತಿ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ ಕೂಡಲಸಂಗಮ ಪೀಠದ ಶ್ರೀಗಳು, ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಸರ್ಕಾರ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮಾಜದ ಧ್ವನಿಯಾಗಿ ಸಿ.ಸಿ. ಪಾಟೀಲ ಇದ್ದರು. ಹಿಂದಿನ ಸರ್ಕಾರದಂತೆ ಈಗಿನ ಸರ್ಕಾರದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಅವಧಿಯಲ್ಲಿ ನಾವಿದ್ದಲಿಗೆ ಶಾಸಕರು ಬರುತ್ತಿದ್ದರು. ಈಗ ನಾನೇ ಶಾಸಕರ ಮನೆಗೆ ತೆರಳಿ ಮೀಸಲಾತಿ ಕುರಿತು ಸರ್ಕಾರದ ಮೇಲೆ ಒತ್ತಡ ಹಾಕುವ ಸ್ಥಿತಿ ನಿರ್ಮಾಣ ಆಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಮೀಸಲಾತಿ ಚರ್ಚೆಗೆ ಅವಕಾಶ ನೀಡಿಲ್ಲ: ಸಿ. ಸಿ. ಪಾಟೀಲ: ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಸಿ. ಪಾಟೀಲ, ಪಂಚಮಸಾಲಿ ಮೀಸಲಾತಿ ಕುರಿತು ಅಧಿವೇಶನದಲ್ಲಿ ಚರ್ಚೆಗೆ ನಾನು, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ ಅಲ್ಪಕಾಲ ಚರ್ಚೆಗೆ ಅವಕಾಶ ಕೇಳಿದ್ದೆವು. ವಿಧಾನಸಭೆ ಸ್ಪೀಕರ ಚರ್ಚೆಗೆ ಅವಕಾಶ ನೀಡಿಲ್ಲ. ವಿಧಾನ ಸಭೆ ಸಭಾಪತಿ ಅವರು ಈ ಅಧಿವೇಶನದಲ್ಲಿ ಏಕಪಕ್ಷೀಯವಾಗಿ ಕಾಂಗ್ರೆಸ್​ ಪರವಾಗಿ ನಡೆದುಕೊಂಡಿದ್ದಾರೆ ಎಂದರು. ರಾಮನಗರ ಜಿಲ್ಲೆ ಹೆಸರು ಪರಿವರ್ತನೆ ವಿಚಾರವಾಗಿ ಮಾತನಾಡಿದ ಅವರು, ರಾಮನಗರ ಪಾರಂಪರಿಕವಾಗಿ ತನ್ನದೇ ಆದ ಹೆಸರು ಉಳಿಸಿಕೊಂಡು ಬಂದಿತ್ತು. ಬೆಂಗಳೂರು ಸಾಕಷ್ಟು ವಿಸ್ತಾರವಾಗಿದೆ. ಬೆಂಗಳೂರು ದಕ್ಷಿಣ ಎಂಬ ಹೆಸರು ನೀಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್​ ಸರ್ಕಾರಕ್ಕೆ ಬಹುಮತ ಎಂಬುದು ದೊಡ್ಡ ಮದ ತಂದಿದೆ ಎಂದು ವ್ಯಂಗವಾಡಿದರು.

ಕೋಟ್​:
ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯವನ್ನು ಅಳವಡಿಸಿಕೊಳ್ಳಬೇಕು. ಮೀಸಲಾತಿ ವಿಚಾರದಲ್ಲಿ ಹರಿಹರ ಪೀಠ ಸ್ಪಷ್ಟತೆ ಹೊಂದಿದೆ. ಪೀಠದ ಸ್ವಾಮೀಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಭಿನ್ನಾಭಿಪ್ರಾಯಗಳು ರಾಜಕೀಯ ವ್ಯಕ್ತಿಗಳಲ್ಲಿ ಇದೆ. ಎಲ್ಲ ಭಿನ್ನಾಭಿಪ್ರಾಯ ಬದೀಗಿಟ್ಟು ಸಮಾಜದ ಏಳ್ಗೆಗೆ ಒಂದಾಗಬೇಕು
ವಚನಾನಂದ ಶ್ರೀಗಳು, ಹರಿಹರ ಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net