

ಗದಗ: ಪಂಚ ಗ್ಯಾರಂಟಿ ಯೋಜನೆಗಳು ರೈತರು, ಮಹಿಳೆಯರು, ಬಡವರು, ನಿರ್ಗತಿಕರ ಬದುಕಿಗೆ ಭದ್ರ ಅಡಿಪಾಯ ಹಾಕಿ, ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ 16ನೇ ವಾರ್ಡ್ ನಲ್ಲಿ 2023-24ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಸದಾ ಬಡವರ ಪರ ಚಿಂತನೆ ಮಾಡುತ್ತದೆ. ಜನರು ನೆಮ್ಮದಿ, ಪ್ರೀತಿ, ವಾತ್ಸಲ್ಯ, ಶಾಂತಿಯಿಂದ ಸಹಬಾಳ್ವೆ ನಡೆಸುವಂತಹ ಭ್ರಾತೃತ್ವದ ವಾತಾವರಣ ಕಲ್ಪಿಸುತ್ತದೆ. ಬಡವ ಬಲ್ಲಿದ ಎನ್ನದೆ ಎಲ್ಲರೂ ನೆಮ್ಮದಿಯಿಂದ ಬದುಕು ಸಾಗಿಸಬೇಕೆಂಬ ಮಹದಾಸೆಯಿಂದ ಪಂಚ ಗ್ಯಾರಂಟಿ ಯೋಜನೆ ಹಮ್ಮಿಕೊಂಡಿದೆ. ಈ ಯೋಜನೆಯಿಂದ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಲಾಗಿದೆ ಎಂದರು.
ಹಸಿದವರಿಗೆ ಅನ್ನ, ಯುವಕರಿಗೆ ಉದ್ಯೋಗ ಹುಡುಕಿಕೊಳ್ಳಲು ಯುವ ನಿಧಿ, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮತ್ತು ಕುಟುಂಬ ನಿರ್ವಹಣೆಗೆ ಪ್ರೋತ್ಸಾಹ ಧನ, ಹೀಗೆ ಸಕಲ ಸೌಲತ್ತು ನೀಡುವ ಮೂಲಕ ಬಡವರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಟೊಂಕ ಕಟ್ಟಿ ನಿಂತಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳಲ್ಲಿ ಅಕ್ರಮ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಡಿಜಿಟಲೀಕರಣದ ಮೂಲಕ ನೇರವಾಗಿ ಫಲಾನುಭವಿ ಖಾತೆಗೆ ಹಣ ಸಂದಾಯ ಮಾಡಲಾಗಿದೆ. ಗುತ್ತಿಗೆದಾರರು ಈ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮತ್ತು ಗುಣಮಟ್ಟದಿಂದ ಮಾಡಬೇಕು. ಸಾರ್ವಜನಿಕರು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡುವ ಮೂಲಕ ಗುಣಮಟ್ಟದ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಹೇಳಿದರು.
ಇದಕ್ಕೂ ಮೊದಲು ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಸಂಗೀತಾ ಲಕ್ಕಪ್ಪನವರ ಅವರನ್ನು ಸಚಿವರು ಸನ್ಮಾನಿಸಿದರು.
ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ದೇವಪ್ಪ ಲಮಾಣಿ, ಹುಮಾಯೂನ್ ಮಾಗಡಿ, ಮಂಜುನಾಥ ಗಂಟಿ, ಹೊನ್ನಪ್ಪ ಶಿರಹಟ್ಟಿ, ಸಂದೀಪ ಕಪ್ಪತ್ತನವರ, ದೇವಪ್ಪ ಆಡೂರ, ಆನಂದ ಮಾಳೆಕೋಪ್ಪ ಇದ್ದರು.