

ಗದಗ:
ಗದಗ ನಗರದಿಂದ ಧಾರವಾಡ ಜೈಲಿಗೆ ಖೈದಿಗಳ ವರ್ಗಾವಣೆ ಮಾಡುವ ವಾಹನ ಚಾಲನೆ ಮಾಡುವ ವೇಳೆಯಲ್ಲಿಯೇ ಮುಖ್ಯ ಪೇದೆಯೊರ್ವರಿಗೆ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಧಾರವಾಡ ಕೋರ್ಟ ವೃತ್ತದ ಬಳಿ ಭಾನುವಾರ ಜರುಗಿದೆ.
ಗದಗ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ವಾಹನ ಚಾಲಕ, ಮುಖ್ಯ ಪೇದೆ ಬಸವರಾಜ ವಿಠಲಾಪೂರ (41) ಸಾವನ್ನಪ್ಪಿದ ಸಿಬ್ಬಂದಿಯಾಗಿದ್ದು, ಗದಗನಿಂದ ಧಾರವಾಡಕ್ಕೆ ಖೈದಿ ವರ್ಗಾವಣೆ ಮಾಡುವಾಗಲೇ ಈ ಘಟನೆ ಜರುಗಿದೆ. ವಾಹನ ಚಾಲನೆ ಮಾಡುವ ವೇಳೆಯಲ್ಲಿಯೇ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ರಸ್ತೆ ಪಕ್ಕಕ್ಕೆ ಚಾಲಕ ಬಸವರಾಜ ವಾಹನ ನಿಲ್ಲಿಸಿದ್ದಾರೆ. ಕ್ಷಣ ಮಾತ್ರದಲ್ಲಿಯೇ ತೀವ್ರ ಹೃದಯಾಘಾತವಾಗಿದ್ದು, ವಾಹನದಲ್ಲಿದ್ದ ಇನ್ನುಳಿದ ಸಿಬ್ಬಂದಿ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದರೂ ಪ್ರಯೋಜನವಾಗಿಲ್ಲ.
2002 ರ ಬ್ಯಾಚ್ ನ ಬಸವರಾಜ ವಿಠಲಾಪೂರ ಮೂಲತ ಹಾವೇರಿ ಜಿಲ್ಲೆಯ ಬಂಕಾಪೂರ ಗ್ರಾಮದವರಾಗಿದ್ದಾರೆ. ಬಸವರಾಜ ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.