

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ನರೇಗಲ್ ಪಟ್ಟಣ, ಅಕ್ಕಪಕ್ಕದ ಕೃಷಿ ಜಮೀನು ಮತ್ತು ಗ್ರಾಮಗಳಲ್ಲಿ ಅಕ್ರಮ ಗರಸು ಗಣಿಗಾರಿಕೆ, ಗರಸು ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಸ್ಥಳಿಯ ಪ್ರಭಾವಿಗಳು ರಾಜಾರೋಷವಾಗಿ ಈ ಅಕ್ರಮ ನಡೆಸುತ್ತಿದ್ದರೂ ಕಂಡು ಕಾಣದಂತೆ ಸಂಸ್ಥಳಿಯ ಸಂಸ್ಥೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ ಕಂದಾಯ ನಷ್ಟ ಆಗುತ್ತಿದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ನರೇಗಲ್ ಪಟ್ಟಣದ ಪ್ರವಾಸಿ ಮಂದಿರ ಹಿಂದುಗಡೆ, ಕೋಡಿಕೊಪ್ಪದ ನೆಟ್ ಬೋಲ್ಟ್ ್ಯಾಕ್ಟರಿ ಸಮೀಪ, ಬಂಡಿಹಾಳ ಗ್ರಾಮ ರಸ್ತೆ, ಜಕ್ಕಲಿ ಗ್ರಾಮದ ರಸ್ತೆ, ನರೇಗಲ್ & ಗಜೇಂದ್ರಗಡ ರಸ್ತೆ ಸೇರಿದಂತೆ ಹಲವಡೆ ಈ ಅಕ್ರಮ ನಡೆಯುತ್ತಿದೆ. ಲಾರಿ ಸಾಗಾಟದ ಭಾರಕ್ಕೆ ರಸ್ತೆಗಳು ಹಾಳಾಗುತ್ತಿದ್ದು, ಹಾಳಾದ ರಸ್ತೆ ದುರಸ್ಥಿಗೆ ಹೊಸ ಟೆಂಡರ್ ಕರೆದು ಗುತ್ತಿಗೆ ನೀಡುವ ಸನ್ನಿವೇಶ ಸೃಷ್ಟಿ ಆಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೋವು ತೋಡಿಕೊಂಡಿದ್ದಾರೆ.
ದಿನನಿತ್ಯ ರಾತ್ರಿ ಹಗಲೆನ್ನದೆ 35 ಕ್ಕೂ ಅಧಿಕ ಲಾರಿಗಳು ಅಕ್ರಮ ಗರಸು ಗಣಿಗಾರಿಕೆ ಮಣ್ಣನ್ನು ಜಿಲ್ಲೆಯಾದ್ಯಂತ ಸಾಗಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಪರೋಕ್ಷವಾಗಿ ಅಕ್ರಮಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ನರೇಗಲ್ ವ್ಯಾಪ್ತಿಯಲ್ಲಿ ಚರ್ಚೆ ಶುರುವಾಗಿದೆ.
ಠಾಣೆ ಮುಂದೆಯೇ ಅಕ್ರಮ:
ಕಳೆದ ಒಂದು ವಾರದಿಂದ ನರೇಗಲ್ ಗದಗ ರಸ್ತೆಯ ಕೃಷಿ ಜಮೀನು ಒಂದರಲ್ಲಿನ ಗರಸನ್ನು ಕಾನೂನು ಬಾಹಿರವಾಗಿ ಸಾಗಾಟ ಮಾಡಲಾಗುತ್ತಿದೆ. ಗರಸು ಮಣ್ಣು ತುಂಬಿದ ಲಾರಿಗಳು ನರೇಗಲ್ ಪೊಲೀಸ್ ಠಾಣೆ ಮುಂಭಾಗದಲ್ಲಿ ನಿರಂತರ ಸಂಚರಿಸುತ್ತಿದ್ದರೂ ಸಹ ಠಾಣಾಧಿಕಾರಿಗಳು ಅಕ್ರಮ ತಡೆಯಲು ಮುಂದಾಗುತ್ತಿಲ್ಲ. ಅಕ್ರಮ ಮಣ್ಣು ತುಂಬಿದ ಟಿಪ್ಪರ ಸಾಗಾಟಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವತಿರ್ಸುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕೋಟ್:
ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಕಡೆಗಳಲ್ಲಿ ಅಕ್ರಮ ಗರಸು ಗಣಿಗಾರಿಕೆ ನಡೆಯುತ್ತಿದೆ. ಪ್ರಕೃತಿದತ್ತವಾಗಿ ಇರುವ ಸಂಪತ್ತನ್ನು ಅವೈಜ್ಞಾನಿಕ ಹಾಗೂ ಅಕ್ರಮವಾಗಿ ತೆಗೆದು ಲೂಟಿ ಮಾಡುವುದು ಕಂಡುಬರುತ್ತಿದೆ. ಆದರೂ ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಇನ್ನಾದರೂ ಗಮನಹರಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ.
ರವಿಕಾಂತ ಅಂಗಡಿ, ಸಾಮಾಜಿಕ ಹೋರಾಟಗಾರ, ಗದಗ
ಕೋಟ್:
ನರೇಗಲ್ಲನ ಗದಗ ರಸ್ತೆಯಲ್ಲಿನ ಕೃಷಿ ಜಮೀನು ಒಂದರಲ್ಲಿ ಅಕ್ರಮವಾಗಿ ಗರಸು ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಕ್ರಮವನ್ನು ಪ್ರಶ್ನಿಸಿದಕ್ಕೆ ಬೆದರಿಸುವ ಕಾರ್ಯವನ್ನು ಮಾಡಲಾಗುತ್ತಿದ್ದೆ. ಬೇಕಾಬಿಟ್ಟಿಯಾಗಿ ಸಾಗುವಳಿ ಜಮೀನಿನಲ್ಲಿ ಹಣದಾಸೆಗೆ ಭೂ ತಾಯಿಯ ಒಡಲನ್ನು ಬಗೆದು ಗರಸು ಸಾಗಾಟ ಮಾಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಶ್ರೀಕಾಂತ ಮಣ್ಣೊಡ್ಡರ, ಸಾಮಾಜಿಕ ಕಾರ್ಯಕರ್ತ ನರೇಗಲ್ಲ
ಕೋಟ್:
ನರೇಗಲ್ ವ್ಯಾಪ್ತಿಯಲ್ಲಿ ಅಕ್ರಮ ಗರಸು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆಯೂ ಹಲವು ಬಾರಿ ದಾಳಿ ನಡೆಸಿ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಲಾಗಿದೆ. ಅಕ್ರಮ ನಡೆಸುವ ಬಗ್ಗೆ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುವುದು.
- ನಾಗಭೂಷಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ. ಗದಗ