ನರೇಗಾ ಕಾಮಗಾರಿ ಸ್ಥಳದಲ್ಲಿ ಕಬ್ಬಡ್ಡಿ, ಖೋಖೋ, ಸೋಬಾನೆ ಪದ

24GDG07
Published on
ರೋಣ :- ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರೆ ಸಾಕು ಸಾಮಾನ್ಯವಾಗಿ ಕೂಲಿ ಕಾರ್ಮಿಕರು ಸಲುಕೆ, ಗುದ್ದಲಿ ಹಿಡಿದುಕೊಂಡು ಕೆಲಸ ಮಾಡುವುದನ್ನು ಕಾಣುತ್ತೇವೆ. ‌ಆದರೆ ಅದೇ ನರೇಗಾ ಸ್ಥಳವು ಈಗ ಮನರಂಜನೆಯ ತಾಣವಾಗಿ ಮಾರ್ಪಟ್ಟಿದೆ ಅಂದರೆ ನಂಬ್ತಿರಾ..?
ಖಂಡಿತವಾಗಿಯೂ ನಂಬಲೆಬೇಕು ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮೂಹಿಕ ಕಾಮಗಾರಿ ಆರಂಭವಾಗಿದೆ. ಈ ಸ್ಥಳದಲ್ಲಿ ಬರಿ ಸಾಂಪ್ರದಾಯಿಕ ಆಟಗಳದ್ದೆ ಮೆರಗು ಕಬ್ಬಡ್ಡಿ, ಖೋಖೊ, ಸೋಬಾನೆ ಪದ, ಕಣ್ಣ ಮುಚ್ಚಾಲೆ, ಸೇರಿದಂತೆ ಹಲವು ಆಟಗಳನ್ನು ಆಡಿ ಕೂಲಿ ಕಾರ್ಮಿಕರು ಖುಷಿ ಪಡುತ್ತಿದ್ದಾರೆ‌. ಇದು ಅಬ್ಬಿಗೇರಿ ಗ್ರಾಮ ಪಂಚಾಯತಿಗೆ ಅಷ್ಟೇ ಸೀಮಿತವಾಗಿದೆ ಅಂದ್ರೆ ತಪ್ಪಾಗಬಹುದು ತಾಲೂಕಿನ ಸವಡಿ, ಜಕ್ಕಲಿ, ಕುರುಡಗಿ ಹೀಗೆ ಹಲವಾರು ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಆಟವಾಡುವ ಮೂಲಕ ಕೆಲಸ ಮಾಡುವದು ಸಾಮಾನ್ಯವಾಗಿದೆ...
ಕಾಮಗಾರಿ ವೇಳೆ ಕೆಲಸ ಮಾಡುತ್ತಾರೆ, ಬಿಡುವಿನ ಸಮಯದಲ್ಲಿ ಪುರುಷ ಕಾರ್ಮಿಕರು ಅತ್ಯಂತ ಉತ್ಸಾಹದಿಂದ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ಕಬಡ್ಡಿ, ಖೋಖೋ ಆಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಮಹಿಳೆಯರು ಸಹ ಖೋಖೋ ಆಟದಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಸೋಬಾನ ಪದಗಳನ್ನು ಸಾಮೂಹಿಕವಾಗಿ ಹಾಡುತ್ತಾ ಜನಪದ ಸಂಸ್ಕೃತಿಯನ್ನು ಮೆರೆಯುತ್ತಿದ್ದಾರೆ. ಇಂಥ ಆಟಗಳು ಮತ್ತು ಜನಪದ ಗೀತೆಗಳ ಗಾಯನ, ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಕಾರ್ಮಿಕರು ಕೆಲಸದ ದಣಿವಾರಸಿಕೊಳ್ಳಲು ಸಹಾಯವಾಗುತ್ತಿದೆ.
ಈ ವರ್ಷ NMMS ತಂತ್ರಾಂಶದಲ್ಲಿ ಮೂಲಕ ತಲೆ ಕೌಂಟ್ ಮಾಡುವ ಮ‌ೂಲಕ ಹಾಜರಿ ಹಾಕಲಾಗುತ್ತದೆ. ಹಾಗಾಗಿ ಕನಿಷ್ಠ ಪಕ್ಷ ನಾಲ್ಕು ಘಂಟೆ ಆದರೂ ಸಮಯ ಕಳೆಯಬೇಕು ಸಹ ಅಳತೆಗೆ ತಕ್ಕ ಕೂಲಿ ಮಾಡಿದರೆ, ಕೆಲಸಕ್ಕ ತಕ್ಕ ಹಣ ಜಮಾ ಅವರ ಖಾತೆಗೆ ಆಗುತ್ತದೆ. ಹಾಗಾಗಿ ಬೇಗ ಬೇಗ ಕೆಲಸ ಮಾಡಿ ಆಟವಾಡಲು ಕೂಲಿ ಕಾರ್ಮಿಕರು ರೆಡಿ ಆಗುತ್ತಾರೆ. ಅಬ್ಬಿಗೇರಿ ಗ್ರಾಮ ಪಂಚಾಯತಿ ಯಲ್ಲಿ ಎರಡು ಸಾವಿರಕ್ಕೂ ಅಧಿಕ ಜನ ಕೂಲಿ ಕಾರ್ಮಿಕರು ಕೆಲಸದಲ್ಲಿ ಪ್ರತಿದಿನ ತೊಡಗಿಕೊಳ್ಳುತ್ತಿದ್ದಾರೆ‌. ನರೇಗಾ ಕಾಮಗಾರಿಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರು ಪುರುಷರಷ್ಟೇ ಸಮಾನರು ಎಂಬುದನ್ನು ಇದು ಸಾರಲು ಸಹಕಾರಿಯಾಗಿದೆ.
 *ಪುರಷರು ಕಬಡ್ಡಿ:*
ಮಹಿಳೆಯರು ಖೋ-ಖೋ ಆಟದಲ್ಲಿ ತೊಡಗಿದರೆ. ಇತ್ತ ಪುರುಷರು ಕಬ್ಬಡ್ಡಿ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಇದರಿಂದ ವಿಶಿಷ್ಠ ವಾತಾವರಣ ನಿರ್ಮಾಣವಾಗಿದ್ದು. ಜನರು ಉದ್ಯೋಗ ಖಾತ್ರಿ ಕೆಲಸದತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡಿದೆ.
‘ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ’ ಎಂಬ ಉಕ್ತಿಯಂತೆ ಉದ್ಯೋಗ ಖಾತ್ರಿ ಸ್ಥಳ ಸಮಾನತೆಯ ತತ್ವವನ್ನು ಸಾರುತ್ತಿದೆ. ಅಲ್ಲದೆ ಗ್ರಾಮೀಣ ಜನರಲ್ಲಿ ಕೆಲಸದ ಬಗ್ಗೆ ಹೆಮ್ಮೆ,ವಿಶ್ವಾಸ ಇಮ್ಮಡಿಗೊಳಿಸಿದೆ.
*ಕೊಟ್*
ನಾವು ಒಡ್ಡು ಹಾಕಿದ ಮೇಲೆ ಇನ್ನು ಟೈಮ್ ಇರುತ್ತೆ, ಮನೆಯೊಳಗ ಅತ್ತಿ ಮಾವ ಬಂದು ಬಳಗ ಇರುತ್ತ ಅಲ್ಲಿ ಸಣ್ಣ ಹುಡುಗರ ಹಂಗ ಆಟ ಆಡಿದರೆ ಸರಿ ಅನಸಲ್ಲಾ, ಇಲ್ಲಿ ಹೊಲದಾಗ ನಮ್ಮ ಯಜಮಾನರು  ಇರ್ತಾರ ಮತ್ತ ನಮ್ಮ ಗೆಳೆತ್ಯಾರ ಇರ್ತಾರ ನಡೆಯುತ್ತ ಮನಸ್ಸು ಬಿಚ್ಚಿ ಆಟ ಆಡ್ತಿವಿ, ಇದು ಬಾಳ ಖುಷಿ ಕೊಡುತ್ತದೆ.
*ರೇಣುಕಾ ರಾಮಣ್ಣವರ, ನರೇಗಾ ಕೂಲಿ ಕಾರ್ಮಿಕರು ಅಬ್ಬಿಗೇರಿ*
*ಕೊಟ್*
 ಗ್ರಾಮೀಣ ಕ್ರೀಡೆಗಳು ಇತ್ತಿಚೀನ ದಿನಗಳಲ್ಲಿ ಮೂಲೆಗುಂಪು ಆಗುತ್ತಿವೆ. ಗ್ರಾಮೀಣ ರಿಗೆ ಆಸಕ್ತಿ ಇದ್ದರೂ ಅವಕಾಶ ಇಲ್ಲದ ಕಾರಣ ಅಸಹಾಯಕ ರಾಗಿದ್ದಾರೆ. ದೈಹಿಕ ಶ್ರಮದ ಜೊತೆಗೆ ಗ್ರಾಮೀಣ ಸಂಪ್ರದಾಯ ಗಳನ್ನು ಒಟ್ಟುಗೂಡಿಸಿ ಒಂದು ಸೌಹಾರ್ದಯುತ ವಾತಾವರಣ ಸೃಷ್ಟಿ ಮಾಡುವುದು ಹಾಗೂ ಕೂಲಿಗೆ ಬಂದಾಗಲೂ ಸಹ ಖುಷಿಯಿಂದ ಇರುವ ಮಾರ್ಗವನ್ನು ಕೂಲಿ ಕಾರ್ಮಿಕರು ಕಂಡುಕೊಂಡಿದ್ದಾರೆ. ಇಂತಹ ಬೆಳವಣಿಗೆಗೆ ಕಾರಣವಾದ ಕಾರ್ಮಿಕರಿಗೆ ನನ್ನ ಕೃತಜ್ಞತೆಗಳು.
*ಚಂದ್ರಶೇಖರ ಬಿ ಕಂದಕೂರ : ಕಾರ್ಯ ನಿರ್ವಾಹಕ ಅಧಿಕಾರಿಗಳು ರೋಣ*
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net