ಪ್ರವಾಹ ಪೀಡಿತ ಪ್ರದೇಶಗಳಿಗೆ ಎಚ್​.ಕೆ. ಪಾಟೀಲ ಭೇಟಿ

03GDG05
Published on

ವಿಜಯವಾಣಿ ಸುದ್ದಿಜಾಲ ಗದಗ/ ನರಗುಂದ
ಜಿಲ್ಲೆಯ ನರಗುಂದ ತಾಲೂಕಿನ ಪ್ರವಾಹ ಪೀಡಿತ ಕೊಣ್ಣೂರ, ಲಕಮಾಪುರ, ವಾಸನ ಗ್ರಾಮಗಳಿಗೆ ಸಚಿವ ಎಚ್​.ಕೆ. ಪಾಟೀಲ ಶನಿವಾರ ಭೇಟಿ ನೀಡಿ ಪರಸ್ಥಿತಿಯ ಅವಲೋಕನ ನಡೆಸಿದರು.
ಶನಿವಾರ ಮಧ್ಯಾಹ್ನ ಮೊದಲು ಕೊಣ್ಣೂರು ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ತೀವ್ರ ಮಳೆಯಿಂದ ಅಲ್ಲಲ್ಲಿ ಸಮಸ್ಯೆ ಆಗಿದೆ. ಖಾನಾಪೂರ ಭಾಗದಲ್ಲಿ ಹೆಚ್ಚಿನ ಮಳೆ ಆಗಿದ್ದರಿಂದ ಮಲಭ್ರಮ ನದಿಗೆ ಹೆಚ್ಚು ನೀರು ಹರಿದು ಬಂದಿದೆ. ಡ್ಯಾಂ ಭತಿರ್ ಆಗಲು ಕೇವಲ 2ರಿಂದ 3 ಅಡಿ ಮಾತ್ರ ಬಾಕಿ ಇದೆ. ಸದ್ಯ 8-10 ಮನೆಗಳಿಗೆ ನೀರು ನುಗ್ಗಿದೆ. ಸುದೈವದಿಂದ ಇಲ್ಲಿಯವರೆಗೆ ಯಾವುದೇ ತೀವ್ರ ಹಾನಿಯಾಗಿಲ್ಲ. ಆದರೂ ಮುಂಜಾಗೃತವಾಗಿ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಹಾನಿ ಪ್ರದೇಶದ ಗ್ರಾಮಸ್ಥರ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು ವಾಸ್ತವ ಸ್ಥಿತಿಯನ್ನು ಅರಿಯಲಿದೆ ಎಂದರು.
ಮಲಪ್ರಭಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ. ಇದರಿಂದ ಪದೇ ಪದೆ ಈ ಭಾಗದ ಜನರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಾರೆ. ರಾಜ್ಯ ಸರ್ಕಾರ ಮಲಪ್ರಭಾ ನದಿಯಲ್ಲಿ ಹೂಳು ಎತ್ತುವ ಪ್ರಯತ್ನ ಹಾಗೂ ಅಗಲೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ನದಿ ತೀರದಲ್ಲಿ ಅವಡ ನಡೆಯುವ ಮುನ್ನ ಮುಂಜಾಗ್ರತಾ ಕ್ರಮವನ್ನು ನಮ್ಮ ಸರ್ಕಾರ ಕೈಗೊಳ್ಳುತ್ತಿದೆ ಎಂದರು.
ಸಚಿವರ ಭೇಟಿ ವೇಳೆ ಕೊಣ್ಣೂರ ಗ್ರಾಮದ ಜಮೀನುಗಳಿಗೆ ಮಲಪ್ರಭಾ ನದಿ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಸುಮಾರು 4-5 ವರ್ಷಗಳಿಂದ ಬೆಳೆಸಿದ ಪೆರಲ ಹಣ್ಣಿನ ಗಿಡಗಳು ಸಂರ್ಪೂಣವಾಗಿ ಜಲಾವೃತವಾಗಿವೆ. ಜೊತೆಗೆ, ತೆಂಗು, ಗೋವಿನ ಜೋಳ, ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಮಲಪ್ರಭಾ ನದಿಯ ಪಾಲಾಗಿವೆ ಎಂದು ಕೊಣ್ಣೂರು ಗ್ರಾಮಸ್ಥರು ತಮ್ಮ ಅಹವಾಲನ್ನು ಸಚಿವರಿಗೆ ತಿಳಿಸಿದರು.
ನಂತರ ಸಚಿವ ಎಚ್​. ಕೆ. ಪಾಟೀಲ ಅವರು ಲಖಮಾಪೂರ, ವಾಸನ ಗ್ರಾಮದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಲಖಮಾಪೂರ ಗ್ರಾಮದ ಕೆಲವು ಮನೆಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಮನೆ ಹಾನಿಯಾದ ಕುಟುಂಬ ಸದಸ್ಯರ ಜೊತೆ ಚರ್ಚೆ ನಡೆಸಿದರು. ಗ್ರಾಮದ ನಿವಾಸಿಗಳಿಗೆ ಶಾಶ್ವತ ಪರಿಹಾರ ಕುರಿತಂತೆ ಅಧಿಕಾರಿಗಳೊಂದಿಗೆ ಚಚಿರ್ಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಲಖಮಾಪುರದ ಜಲಾವೃತವಾದ ಮನೆಯ ಕುಟುಂಬಸ್ಥರಿಗೆ ಅಗತ್ಯ ದಿನಸಿ ಕಿಟ್​ ಗಳನ್ನು ಎಚ್​. ಕೆ. ಪಾಟೀಲ ವಿತರಿಸಿದರು.
ವಾಸನದಲ್ಲಿ ಗ್ರಾಮದಲ್ಲಿ ಇರುವ 550 ಖಾತೆದಾರರ ಪೈಕಿ 350 ಖಾತೆದಾರರಿಗೆ ಬೆಳೆ ವಿಮೆ ಹಾಗೂ ಪರಿಹಾರ ಬಂದಿದೆ. ಸರಿಯಾಗಿ ಸಮೀಕ್ಷೆ ಪರಿಹಾರ ವಿತರಣೆ ಆಗಿಲ್ಲ ಎಂದು ಗ್ರಾಮದ ರೈತರು ಸಚಿವರಲ್ಲಿ ತಮ್ಮ ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಗೆ ಪರಿಹಾರ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಆರ್​. ಯಾವಗಲ, ಜಿ.ಪಂ ಮಾಜಿ ಅಧ್ಯಕ್ಷ ರಾಜುಗೌಡ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಓ ಭರತ್​ ಎಸ್​, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ. ಎಸ್​. ನೇಮಗೌಡ, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net