

ಗದಗ: ಇಂದಿನ ಆಧುನಿಕ ಸಮಾಜದಲ್ಲಿ ಪತಿ ಹಾಗೂ ಪತ್ನಿ ಒಬ್ಬರಿಗೊಬ್ಬರು ಅರಿತು ನಡೆದರೆ ಅವರ ಬಾಳು ಬಂಗಾರವಾಗುತ್ತದೆ ಎಂದು ನಗರದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ತಾಲೂಕಿನ ನಾಗಾವಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ ಮಂಗಲೋತ್ಸವದಲ್ಲಿ ಜರುಗಿದ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರೇಶ್ವರ ಪುಣ್ಯಾಶ್ರಮದ ಹಿಂದಿನ ಗುರುಗಳಾದ ಪಂ.ಪುಟ್ಟರಾಜ ಕವಿ ಗವಾಯಿಗಳವರ ಕಾಲದಿಂದಲೂ ನಾಗಾವಿ ಗ್ರಾಮವನ್ನು ತಮ್ಮ ತವರುಮನೆ ಎಂದೇ ಭಾವಿಸಿ ಪ್ರತಿವರ್ಷ ಗ್ರಾಮದ ಜನತೆಗೆ ದರ್ಶನಾಶೀರ್ವಾದವನ್ನು ನೀಡುತ್ತಿದ್ದರು. ಅದೇ ಪರಂಪರೆಯನ್ನು ಮುಂದುವರೆಸಿಕೊAಡು ತಮ್ಮನ್ನು ನಾಗಾವಿ ಗ್ರಾಮಕ್ಕೆ ಆಹ್ವಾನಿಸುತ್ತಿರುವುದು ಸಂತಸದ ವಿಷಯ. ಮುಸ್ಲೀಂ ಸಮಾಜದ ಪೀರಸಾಬ ದಾವಲಸಾಬ ಪೀರಖಾನವರ ಅವರು ತಮಗೆ ತುಲಾಭಾರ ನೆರವೇರಿಸುವ ಮೂಲಕ ಭಾವೈಕ್ಯತೆಗೆ ಶ್ರೀಕಾರ ಹಾಕಿದ್ದಾರೆ ಎಂದು ಕಲ್ಲಯ್ಯಜ್ಜನವರು ಹೇಳಿದರು.
ಸರ್ವಧರ್ಮದ ನವ ವಧು-ವರರಿಗೆ ಕಲ್ಲಯ್ಯಜ್ಜನವರು ಸೇರಿದಂತೆ ಗ್ರಾಮದ ಗುರುಹಿರಿಯರು, ಗಣ್ಯರು ಶುಭ ಹಾರೈಸಿದರು.
ಪುರಾಣ ಸಮಿತಿ ಮುಖ್ಯಸ್ಥರಾದ ತಾಪಂ ಮಾಜಿ ಅಧ್ಯಕ್ಷರಾದ ಬಸವಣ್ಣೆಪ್ಪ ಚಿಂಚಲಿ ಮಾತನಾಡಿ, ಜಾತಿ, ಪಂಥಗಳ ಬೇಧಭಾವವಿಲ್ಲದೇ ಇಡೀ ಗ್ರಾಮದ ಸದ್ಭಕ್ತರು ಒಂದುಗೂಡಿ, ಕಳೆದ 44 ವರ್ಷಗಳಿಂದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಹಾಗೂ 14 ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ.. ಇಂತಹ ಆಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮಗಳು ಗ್ರಾಮದ ಸದ್ಭಕ್ತರು, ರೈತರು, ಯುವಕರು, ಮಹಿಳೆಯರಿಗೆ ಸದುಪಯೋಗವಾಗುತ್ತಿವೆ ಎಂದು ಹೇಳಿದರು.
ಶರಣಬಸವೇಶ್ವರ ಪುರಾಣ ಪಠಣವನ್ನು ಗ್ರಾಮದ ಗಂಗಾಧರೇಶ್ವರ ಮಠದ ವೇದಮೂರ್ತಿ ಮೃತ್ಯುಂಜಯಸ್ವಾಮಿ ಹಿರೇಮಠ, ಪುರಾಣ ಪ್ರವಚನವನ್ನು ವೇದಮೂರ್ತಿ ಮಂಜಯ್ಯಸ್ವಾಮಿ ಹಿರೇಹಾಳ ನೆರವೇರಿಸಿದರು. ಸಂಗೀತ ಸೇವೆಯನ್ನು ನೀಡಿದ ಬಿ.ಎಸ್. ಹೊಂಬಳ ಹಾಗೂ ರಾಜಶೇಖರ ಸಂಗಳಕರ ಕನ್ನೂರಬಸವಣ್ಣ ದೇವರಿಗೆ ನಿತ್ಯ ಅಭಿಷೇಕ ಸೇವೆಗೈದ ಸಂತೋಷಸ್ವಾಮಿ ಹಿರೇಮಠ, ತುಲಾಭಾರ ಸೇವೆಗೈದ ಪೀರಖಾನವರ ಕುಟುಂಬದವರನ್ನು ಕಲ್ಲಯ್ಯಜ್ಜನವರು ಸನ್ಮಾನಿಸಿದರು.
ಶರಣಬಸವೇಶ್ವರ ಪುರಾಣ ಸಮಿತಿ,ಬಸವೇಶ್ವರ ಭಜನಾ ಸಂಘ, ಗಂಗಾಧರೇಶ್ವರ ಯುವಕ ಮಂಡಳ, ಗ್ರಾಮದ ಸರ್ವ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಲ್ಲಪ್ಪ ಗೋಲಪ್ಪನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಸದ್ಭಕ್ತರಿಗೆ ಮಹಾದಾಸೋಹ ಜರುಗಿತು. ಸಾಯಂಕಾಲ ಗ್ರಾಮದ ಸದ್ಭಕ್ತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಡಗರ, ಸಂಭ್ರಮದಿAದ ಜರುಗಿತು.