ನಾಗಾವಿ ಯಲ್ಲಮ್ಮ ಭಕ್ತಿ ಗೀತೆಗಳ ವಿಡಿಯೋ ಚಿತ್ರೀಕರಣಕ್ಕೆ ಚಾಲನೆ

IMG-20250110-WA0006
Published on
ಗದಗ: ತಾಲೂಕಿನ ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ನಿರ್ಮಾಣವಾಗಲಿರುವ   ಸುಕ್ಷೇತ್ರ ನಾಗಾವಿ ಯಲ್ಲಮ್ಮ ದೇವಿಯ  ಭಕ್ತಿಗೀತೆಗಳ ವಿಡಿಯೋ ಚಿತ್ರೀಕರಣಕ್ಕೆ ನಾಗಾವಿ ಗ್ರಾಮದ ನಿರ್ಮಾಣ ಹಂತದಲ್ಲಿರುವ ನಮೋ ಯೋಗ ಸಮುದಾಯ ಭವನದಲ್ಲಿ  ಚಾಲನೆ ನೀಡಲಾಯಿತು.
ನಾಗಾವಿ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದ ಪ್ರಮುಖ ಸದಸ್ಯರಾದ ಕೆ.ಬಿ. ಮರಡ್ಡಿ ಅವರ ಅಧ್ಯಕ್ಷತೆ ಹಾಗೂ ವೇದಮೂರ್ತಿ ಬಸನಗೌಡ್ರು ಪಾಟೀಲ ಅವರ ಸಮ್ಮುಖದಲ್ಲಿ ಸಸಿಗಳಿಗೆ ನೀರೆರೆಯುವ ಮೂಲಕ  ನಾಗಾವಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಜಗದೀಶ ಚಿಂಚಲಿ ಅವರು  ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷರಾದ  ಶಂಕರಗೌಡ ಜಾಯನಗೌಡ್ರ ವಿಡಿಯೋ ಕ್ಯಾಮರಾಕ್ಕೆ ಹೂ ಮಾಲೆ ಅರ್ಪಿಸುವ ಮೂಲಕ ಚಾಲನೆ ನೀಡಿದರು.
ಭಕ್ತಿಗೀತೆಗಳ ವಿಡಿಯೋ ಚಿತ್ರೀಕರಣಕ್ಕೆ ಚಾಲನೆ ನೀಡಿದ ಕೋಡಿಹಳ್ಳಿ ಚಂದ್ರಶೇಖರ ಬಣದ ಗದಗ ಜಿಲ್ಲಾಧ್ಯಕ್ಷರಾದ ಶಂಕರಗೌಡ  ಜಾಯನಗೌಡ್ರು  ಮಾತನಾಡಿ, ಹತ್ತನೆಯ ಶತಮಾನಕ್ಕಿಂತಲೂ ಪುರಾತನ ಇತಿಹಾಸ ಹೊಂದಿರುವ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನ ಜಿಲ್ಲೆ ರಾಜ್ಯ ಸೇರಿದಂತೆ  ದೇಶಾದ್ಯಂತ ಅಪಾರ ಭಕ್ತ ಸಮೂಹ ಹೊಂದಿರುವ ಯಲ್ಲಮ್ಮ ದೇವಿ ಪವಾಡಗಳ ಅಧಿದೇವತೆಯಾಗಿದ್ದಾಳೆ. ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡ, ಬಾದಾಮಿ ತಾಲೂಕಿನ ಬನಶಂಕರಿ ಜಾತ್ರಾ ಮಹೋತ್ಸವ ದಿನದಂದೇ ಬನದಹುಣ್ಣಿಮೆ ದಿನ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ನೆರವೇರುತ್ತಿರುವುದು ವಿಶೇಷವಾಗಿದೆ.  1952 ರಿಂದ ಪ್ರಾರಂಭಗೊಂಡ  ಯಲ್ಲಮ್ಮ ದೇವಿ ಜಾತ್ರೆ 73ನೇ ವರ್ಷದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಜಾತ್ರಾ ಮಹೋತ್ಸವದ ಸವಿನೆನಪಿಗಾಗಿ ನಾಗಾವಿ ನಾನಾ ಯೂಟ್ಯೂಬ್ ನವರು  ನಾಗಾವಿ ಯಲ್ಲಮ್ಮ ದೇವಿ ಭಕ್ತಿಗೀತೆಗಳನ್ನು ನಾಡ ಜನತೆಗೆ ಅರ್ಪಿಸುತ್ತಿರುವುದು ಜನ ಮೆಚ್ಚುವ  ಕಾರ್ಯವಾಗಿದೆ ಎಂದರು.
 ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ನಾಗಾವಿ ಗ್ರಾಮದ ಸುಂದರವಾದ ಪರಿಸರದ ಗುಡ್ಡದ ಮೇಲೆ ನೆಲೆಯಾಗಿರುವ ಶ್ರೀರೇಣುಕಾ ಯಲ್ಲಮ್ಮ ದೇವಿಯ ಮೂರ್ತಿಯು ಸಾಧು ಸತ್ಪುರುಷರು, ತಪೋ ಸಾಧಕ ಸಿದ್ದರಿಂದ ಸ್ಥಾಪನೆಗೊಂಡಿದೆ ಎಂದರು.
 ರೇಣುಕಾದೇವಿ ಮೂರ್ತಿಯು  ಅಂದಿನಿಂದ ಇಂದಿನವರೆಗೆ ಭಕ್ತರಿಗೆ ಕಾಮಧೇನು ಸ್ವರೂಪಿಯಾಗಿ ನಂಬಿ ಬಂದ ಭಕ್ತರಿಗೆ ಇಂಬು ನೀಡುತ್ತ ಬಂದಿದ್ದಾಳೆ. ದೇವಸ್ಥಾನದ ಕಮೀಟಿ ಅವರ ಇಚ್ಛಾಶಕ್ತಿಯಿಂದ  ದೇವಸ್ಥಾನ ಹಾಗೂ ಸುತ್ತಲಿನ ಪರಿಸರ ಅಭಿವೃದ್ಧಿಯತ್ತ ಸಾಗುತ್ತಲಿದೆ. ಸರ್ವ ಸಮಾಜದವರಿಂದ ಸಾಂಸ್ಕೃತಿಕ ಹಾಗು ವಿವಿಧ  ಕ್ರೀಡೆಗಳಿಂದ ಅದ್ಧೂರಿಯಾಗಿ ಯಲ್ಲಮ್ಮದೇವಿ ಜಾತ್ರೆ  ನೆರವೇರಿತ್ತ ಸಾಗುತ್ತ ಬಂದಿದೆ. ಪ್ರತಿ ಹುಣ್ಣಿಮೆಯಂದು ಸಹಸ್ರಾರು  ಭಕ್ತ ಜನತೆ ದೇವಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪಾವನರಾಗುತ್ತಿದ್ದಾರೆ. ನಾಗಾವಿ ಯಲ್ಲಮ್ಮ ದೇವಿಯ ಮಹಿಮೆಯನ್ನು ದೇಶದ  ಜನತೆಗೆ ಪರಿಚಯಿಸಲು ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನಾಗಾವಿ ನಾನಾ ಯ್ಯೂಟೂಬ  ವತಿಯಿಂದ ಹಿರೇಹರಕುಣಿ  ಹಾಜಿ ಮಾಸ್ತರ ಅವರು ರಚಿಸಿದ ಯಲ್ಲಮ್ಮದೇವಿ ಭಕ್ತಿ ಗೀತೆಗಳನ್ನು ನಾಡ ಜನತೆಗೆ ಅರ್ಪಿಸಲು ಸಂಕಲ್ಪ ತೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ  ಸದಸ್ಯರಾದ ಮೈಲಾರಪ್ಪ ತಾಮ್ರಗುಂಡಿ, ರೈತ ಸಂಘದ ಕಾರ್ಯದರ್ಶಿ ಬಸವರಾಜ ವಡ್ಡರ, ಗ್ರಾಮದ ಮುಖಂಡರಾದ ಷಣ್ಮುಖಗೌಡ ಪಾಟೀಲ, ಈರಪ್ಪ ಜಂತ್ಲಿ, ಶಾಂತಗೌಡ ಪಾಟೀಲ, ವಿರುಪಾಕ್ಷಪ್ಪ ಬಳರಾದ, ಕಿರಣಗೌಡ ಪಾಟೀಲ, ಚೆನ್ನಯ್ಯ ಹಿರೇಮಠ, ಗುರುಸಿದ್ದಪ್ಪ ಮಡಿವಾಳರ, ಶ್ರೀಮತಿ ಶಾರಮ್ಮ ಪಾಟೀಲ, ವಿಶಾಲಾಕ್ಷಿ ಪಾಟೀಲ,  ಶಿವಲಿಂಗವ್ವ ಹಿರೇಮಠ, ನಿವೇದಿತಾ ಪಾಟೀಲ, ಉಪಸ್ಥಿತರಿದ್ದರು.
ಧೀರಜ ನಂದಿಕೊಲಮಠ ಸ್ವಾಗತಿಸಿದರು. ಕುಮಾರ ಶಿವನಗೌಡ ಪಾಟೀಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net