ಆಸ್ತಿ ಹಕ್ಕು ಹೆಸರು ಬದಲಾವಣೆ ಆರೋಪ

IMG-20240809-WA0002
Published on

ನಗರಸಭೆಯ ಕಂದಾಯ ನಿರೀಕ್ಷಕ ಬಸವರಾಜ ಕೋಳೂರ, ಕಂದಾಯ ವಿಭಾಗದ ಎಸ್​. ಎನ್​. ಸೋಲಾಪಟ್ಟಿ ಅಮಾನತು

ವಿಜಯವಾಣಿ ಸುದ್ದಿಜಾಲ ಗದಗ

ಆಸ್ತಿ ಹಕ್ಕು ಹೆಸರು ಬದಲಾವಣೆ ಆರೋಪಕ್ಕೆ ಸಂಬಂಧಿಸಿದಂತೆ ನಗರಸಭೆಯ ಕಂದಾಯ ವಿಭಾಗದ ಕಂದಾಯ ನಿರೀಕ್ಷಕ ಬಸವರಾಜ ಕೋಳೂರ ಹಾಗೂ ಕಂದಾಯ ವಿಭಾಗದ ಸಿಬ್ಬಂದಿ ಎಸ್​. ಎನ್​. ಸೋಲಾಪಟ್ಟಿ ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ, ಅಕ್ರಮ ಖಾತಾ ಹೆಸರು ಬದಲಾವಣೆ ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ, ಸರ್ಕಾರಿ ಸೇವೆಯಲ್ಲಿ ಬೇಜವಾಬ್ದಾರಿ ಸೇರಿದಂತೆ ಇತರೆ ಕಾರಣಗಳನ್ನು ನೀಡಿ ನಗರಸಭೆ ಪೌರಾಯುಕ್ತರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಪತ್ರದ ಆಧಾರದ ಮೇಲೆ ಇಬ್ಬರನ್ನು ಅಮಾನತು ಮಾಡಿ ಅದೇಶಿಸಲಾಗಿದೆ.

ಆದೇಶದಲ್ಲಿ ಏನಿದೆ:

ನಗರಸಭೆ ಕರ ವಸೂಲಿ ಸಹಾಯಕ ಎಸ್​. ಎನ್​. ಸೋಲಾಪಟ್ಟಿ, ಕಂದಾಯ ನಿರೀಕ್ಷಕ ಬಸವರಾಜ ಕೋಳೂರ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10 (1) (ಡಿ) ರಂತೆ ಇಲಾಖಾ ವಿಚಾರಣೆ ಬಾಕಿ ಇಟ್ಟು, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ. ಅಮಾನತ್ತು ಅವಧಿಯಲ್ಲಿ ಮೇಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಮಾನತ್ತಿಗೆ ಕಾರಣ:

ನಂದೀಶ್ವರ ನಗರದ ಸ್ವತ್ತಿನ ಸಂಖ್ಯೆ ಸ.ನಂ-164/3ಕ ರಲ್ಲಿನ ಪ್ಲಾಟ್​ ನಂ -91 ಆಸ್ತಿಯ ಖರೀದಿ ಪ್ರಕಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆಸ್ತಿಯ ಖರೀದಿ ಪ್ರಕ್ರಿಯೆ ಅಕ್ರಮವಾಗಿದೆ ಎಂದು ಆರೋಪಿಸಿ ಮತ್ತು ಖರೀದಿ ಪತ್ರವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಮೂಲ ಮಾಲೀಕರು ಜಿಲ್ಲಾ ಪ್ರಭಾರ ಹಿರಿಯ ದಿವಾಣಿ ನ್ಯಾಯಾಲಯಕ್ಕೆ ಮೊರೆ ಹೋಗಿರುತ್ತಾರೆ. ಮುಂದಿನ ವಿಚಾರಣೆ ವರೆಗೆ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಮತ್ತು ಆಸ್ತಿಯನ್ನು ಪರಭಾರೆ ಮಾಡಬಾರದೆಂದು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿರುತ್ತದೆ. ಅದರಂತೆ ನಗರಸಭೆಯಲ್​ಇ ಮೂಲಕ ಮಾಲೀಕರ ಹೆಸರಿಗೆ ಆಸ್ತಿ ವರ್ಗಾವಣೆ ಆಗಿರುತ್ತದೆ. ಈ ನಡುವೆ ಖರೀದಿದಾರರ ಹೆಸರನ್ನು ನಗರಸಭೆ ಅಧಿಕಾರಿಗಳು ಅಕ್ರಮವಾಗಿ ಆಸ್ತಿಹಕ್ಕಿನಲ್ಲಿ ಸೇರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯವಾಗಿ ಪೌರಾಯುಕ್ತರು ವರದಿ ಆಧರಿಸಿ ಜಿಲ್ಲಾಧಿಕಾರಿಗಳು ಅಮಾನತ್ತು ಆದೇಶ ಹೊರಡಿಸಿದ್ದಾರೆ. ಜವಾಬ್ದಾರಿಯುತ ನೌಕರರಾಗಿದ್ದು, ನಗರಸಭೆಗೆ ಬಾಕಿ ಇರುವ ಆಸ್ತಿ ತೆರಿಗೆಯನ್ನು ವಸೂಲು ಮಾಡದೇ ನಿಗಧಿಪಡಿಸಿದ ಗುರಿಯನ್ನು ಸಾಧಿಸುವಲ್ಲಿ ವಿಫಲರಾಗಿರುತ್ತಾರೆ. ಹಾಗೂ ನ್ಯಾಯಾಲಯದ ಆದೇಶವನ್ನು ಉಲ್ಲಂನೆ ಮಾಡಿ ತಮ್ಮ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ನೀಡಿ ಖಾತಾ ಬದಲಾವಣೆ ಮಾಡಿಸಿರುತ್ತಾರೆ. ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿ ನಿರ್ಲಕ್ಷ$್ಯ ವಹಿಸಿದ್ದರಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net