ಠರಾವು ಪ್ರಕರಣ, ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

20240824_211643-COLLAGE
Published on

ಗದಗ
ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪ ಮೂಷಿಗೇರಿ ಸೇರಿದಂತೆ 7 ಜನರಿಗೆ ವೈಯಕ್ತಿಕ 75 ಸಾವಿರ ಬಾಂಡ್ ಮತ್ತು 5 ಷರತ್ತಿಗೆ ಒಳಪಟ್ಟು ಜಿಲ್ಲಾ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಆ.27 ಕ್ಕೆ ಮುಂದೂಡಿದೆ.

ವಕಾರು ಸಾಲು ಭೂಬಾಡಿಗೆ ನೀಡುವ ಸಂಬಂಧ ನಗರಸಭೆ ಠರಾವು ಸಂಖ್ಯೆ 378ರ ದೃಢೀಕರಣ ಪತ್ರಕ್ಕೆ ತಮ್ಮ ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಆರೋಪಿಸಿ ನಗರಸಭೆ ಹಿಂದಿನ ಪ್ರಭಾರಿ ಪೌರಾಯುಕ್ತ ಪ್ರಶಾಂತ ವರಗಪ್ಪನ್ನವರ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಆರೋಪಿತರು ನ್ಯಾಯಾಲಯ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಆರೋಪಿತರಿಗೆ 5 ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ, ಇಂತಹದ್ದೇ ಪ್ರಕರಣದಲ್ಲಿ ಭಾಗವಹಿಸದಂತೆ, ಪರಾರಿ ಆಗದಂತೆ, ವಿಚಾರಣೆಗೆ ಅರ್ಹ ಇರುವ ಸಾಕ್ಷ್ಯಗಳನ್ನು ನಾಶ ಪಡಿಸಂತೆ, ಸಾಕ್ಷಿದಾರರಿಗೆ ಬೆದರಿಕೆ ಒಡ್ಡದಂತೆ ಮತ್ತು ತನಿಖಾಧಿಕಾರಿಗಳಿಗೆ ಸಹಕರಿಸುವ ಷರತ್ತನ್ನು ವಿಧಿಸಿ ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಮಂಜೂರಿನಿಂದ ಆರೋಪಿತರ ಕಳವಳಕ್ಕೆ ಮಧ್ಯಂತರ ನೆಮ್ಮದಿ ಸಿಕ್ಕಂತಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net