ನಗರಸಭೆ ಚುನಾವಣೆ ಪ್ರಕ್ರಿಯೆಗೆ ತಡೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪತ್ರ

20250302_110339-COLLAGE
Published on

ಗದಗ

ಗದಗ ನಗರಸಭೆ ಚುನಾವಣೆ ಪ್ರಕ್ರಿಯೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ದಿನಕ್ಕೊಂದು ಆದೇಶ ಪತ್ರ ಹೊರಬೀಳುತ್ತಿವೆ. ಮುಂದಿನ ಹೈಕೋರ್ಟ್ ಆದೇಶದ ವರೆಗೂ ಫೆ.28 ರಂದು ನಗರಸಭೆ ಚುನಾವಣೆ ಪ್ರಕ್ರಿಯೆಗೆ, ಅಂದೇ ತಡೆ ನೀಡಿ ಚುನಾವಣಾ ಅಧಿಕಾರ ಗಂಗಪ್ಪ ಅವರು ಸಹಿ ಮಾಡಿದ ಆದೇಶ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚುನಾವಣಾ ಆದಿಕಾರಿ ಗಂಗಪ್ಪ ಅವರೇ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಿದ ಆದೇಶವೋ? ಅಥವಾ ನಕಲಿ ಪತ್ರವೋ? ಎಂಬುದಕ್ಕೆ ಗಂಗಪ್ಪ ಅವರು ಸ್ಪಷ್ಟನೆ ನೀಡಬೇಕಿದೆ. ಇದೇ ಆದೇಶ ಪ್ರತಿಯನ್ನು ಚುನಾವಣೆಯಲ್ಲಿ ಘೋಷಿತ ಅಧ್ಯಕ್ಷ, ಉಪಾಧ್ಯಕ್ಷರಿಗೂ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳೋ ಎಂಬ ಗೊಂದಲ ಮೂಡಿದೆ.

ಆದರೆ, ಉಪವಿಭಾಗಾಧಿಕಾರಿ ಕಚೇರಿ ಮೂಲಗಳು, ಈ ಆದೇಶ ಪ್ರತಿ ಸತ್ಯ ಎಂದು ತಿಳಿಸಿದ್ದು, ಚುನಾವಣಾ ಅಧಿಕಾರಿ ಅಧಿಕೃತ ತಿಳಿಸುವವರೆಗೆ ತಡೆ ನೀಡಿದ ಪ್ರಕ್ರಿಯೆ ಕುರಿತು ನಗರದ ಜನತೆಗೆ ಸ್ಪಷ್ಟತೆ ಇಲ್ಲ. ಸ್ಪಷ್ಟತೆ ಕುರಿತು ಮಾಹಿತಿ ಪಡೆಯಲು ಕರೆ ಮಾಡಿದ ವೇಳೆ ಗಂಗಪ್ಪ ಅವರು ಕರೆ ಸ್ವೀಕರಿಸಿಲ್ಲ.

ಫೆ. 28 ರಂದು ಗದಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಚುನಾವಣೆ ಪ್ರಕ್ರಿಯೆ ಮುಂದೂಡಿ ಧಾರವಾಡ ಹೈಕೋರ್ಟ್ ಆದೇಶ ನೀಡಿತ್ತು. ಆದೇಶ ಪ್ರತಿ ಚುನಾವಣಾ ಅಧಿಕಾರಿ ಕೈ ಸೇರುವ ಮೊದಲೇ ಚುನಾವಣೆ ಪ್ರಕ್ರಿಯೆ ನಡೆದಿತ್ತು. ತದ ನಂತರ ಕೋರ್ಟ್ ಆದೇಶದ ನಡುವೆಯೂ ಫೆ. 28 ರಂದು ಸಂಜೆಯೇ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದೇಶ ಉಲ್ಲಂಘಿಸಿ ಚುನಾವಣೆ ನಡೆದಿಸ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಸರ್ಕಾರದ ಪರ ವಕೀಲ ಅಡ್ವೋಕೇಟ ಜನರಲ್ ಕೋರ್ಟ್ ಗೆ ತಮ್ಮ ಅಭಿಪ್ರಾಯ ತಿಳಿಸಿದ್ದರು. ಈ ವಿಚಾರಣೆ ಮಾ. 5 ರಂದು ವಿಚಾರಣೆಗೆ ಬರಲಿದೆ.

ಮೂಲಗಳ ಪ್ರಕಾರ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಜಿಲ್ಲಾಡಳಿತ  ಅಧಿಕಾರ ಹಸ್ತಾಂತರ ಮಾಡಿಲ್ಲ. ಕೋರ್ಟ್ ಆದೇಶ ವರೆಗೂ ಅಧಿಕಾರ ಹಸ್ತಾಂತರ ನೀಡದೇ ಕಾದು ನೋಡುವ ತಂತ್ರವನ್ನು ಜಿಲ್ಲಾಡಳಿತ ಅನುಸರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net